ಕಾಸರಗೋಡು: ಸುಳ್ಳು ಸುದ್ದಿ ಹರಡುವ ಮೂಲಕ ತನ್ನ ಮತ್ತು ತನ್ನ ಪಕ್ಷವನ್ನು ಅವಹೇಳನ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳ ಅವಲೋಕನ ಸಭೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಮತ್ತು ನನ್ನ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿವೆ ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಯತಾರ್ಥವಾಗಿ ಇಂತಹ ಸಭೆಯೇ ನಡೆದಿರಲಿಲ್ಲ. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕಾರ್ಯವನ್ನು ಸಮನ್ವಯಗೊಳಿಸಿಲ್ಲ ಮತ್ತು ಸ್ವತಃ ಮಗನ ಹೆಸರನ್ನೇ ಸೇರಿಸಿಲ್ಲ ಎಂಬ ಆರೋಪಗಳು ತೀರಾ ಬಾಲಿಶವಾಗಿವೆ. ಮತದಾರರ ಪಟ್ಟಿ ಸೇರ್ಪಡೆ ಕಾರ್ಯಕ್ಕೆ ಜಿಲ್ಲಾ ಸಮಿತಿಯು ಎಲ್ಲಾ ಕ್ಷೇತ್ರ ಸಮಿತಿಗಳಿಗೆ ಅಗತ್ಯವಿರುವ ಎಲ್ಲಾ ಸಹಾಯಗಳನ್ನು ನೀಡಲಾಗಿದೆ. ಎರಡು ತಿಂಗಳ ಹಿಂದೆ ಮಂಜೇಶ್ವರ ಕ್ಷೇತ್ರದ ಉಸ್ತುವಾರಿ ಜವಾಬ್ದಾರಿಯಿಂದ ನಾನು ಹಿಂದೆ ಸರಿದಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ನೀಡಿದ ಮಾಧ್ಯಮಗಳೇ ಈ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು
ಒಬ್ಬ ಮಹಿಳೆಯಾಗಿ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು, ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಮತ್ತು ಸ್ಥಳೀಯಾಡಳಿತ ಚುನಾವಣೆಯಲ್ಲಿ 5 ಪಂಚಾಯಿತಿಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡುವ ಮೂಲಕ ಬಿಜೆಪಿ ತನ್ನ ಶಕ್ತಿ ವೃದ್ಧಿಸಿಕೊಂಡಿರುವುದನ್ನು ಮಾಧ್ಯಮದವರ ವೇಷದಲ್ಲಿರುವ ರಾಜಕಾರಣಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಳ್ಳು ಸುದ್ದಿಗಳ ಮೂಲಕ ಚಾರಿತ್ರ್ಯ ವಧೆ ಮಾಡಲು ಮತ್ತು ಪಕ್ಷದ ಘನತೆಗೆ ಧಕ್ಕೆ ತರಲು ಕೆಲವು ಮಾಧ್ಯಮ ಪ್ರತಿನಿಧಿಗಳು ಹಾಗೂ ಮಾಧ್ಯಮಗಳು ಕಳೆದ ಕೆಲವು ದಿವಸಗಳಿಂದ ಪ್ರಯತ್ನಿಸುತ್ತಿವೆ. ಇದರ ವಿರುದ್ಧ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ನ್ಯೂಸ್ ಬ್ರಾಡ್ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್ಗೆ ದೂರು ನೀಡಲಾಗುವುದು ಮತ್ತು ಈ ಬಗ್ಗೆ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಂ.ಎಲ್. ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.



