ಕಾಸರಗೋಡು: ಭಾರತ್ ಜನಗಣತಿ 2027 ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಉದ್ಘಾಟಿಸಿದರು. 2027 ರ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಮತ್ತು ಪ್ರತಿಯೊಬ್ಬ ಸಕ್ರಿಯವಾಗಿ ಭಾಗವಹಿಸಬೇಕು. ನಿಖರ ಮಾಹಿತಿ ಒದಗಿಸುವುದರ ಜತೆಗೆ ಅಧಿಕಾರಿಗಳೊಂದಿಗೆ ಸಹಕರಿಸುವ ಮೂಲಕ ಈ ಮಹಾನ್ ರಾಷ್ಟ್ರೀಯ ಧ್ಯೇಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಕೆ.ವಿ. ಶೃತಿ ಅಧ್ಯಕ್ಷತೆ ವಹಿಸಿದ್ದರು. ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ ಜಿಲ್ಲಾ ಉಸ್ತುವಾರಿ ಅಧಿಕಾರಿಗಳಾದ ಟಿ. ರಾಜ್ಕುಮಾರ್ ಕೆ. ಸಜಿತ್ರಾಜ್ ತರಗತಿ ನಡೆಸಿದರು. ಜಿಲ್ಲಾ ಮಟ್ಟದ ಜನಗಣತಿ ಅಧಿಕಾರಿಗಳು, ಪ್ರಭಾರ ಮಟ್ಟದ ಜನಗಣತಿ ಅಧಿಕಾರಿಗಳು, ಪ್ರಭಾರ ಮಟ್ಟದ ಹೆಚ್ಚುವರಿ ಜನಗಣತಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಮತ್ತು ಇತರರು ಜಿಲ್ಲಾ ಮಟ್ಟದ ತರಬೇತಿಯಲ್ಲಿ ಭಾಗವಹಿಸಿದ್ದರು
ಜನಗಣತಿ ಕಾರ್ಯಾಚರಣೆಗಳನ್ನು ದೋಷರಹಿತ ಮತ್ತು ಪರಿಣಾಮಕಾರಿಯಾಗಿ ಮಾಡಲು ಮೂರು ದಿನಗಳ ಕಾಲ ತರಬೇತಿ ಆಯೋಜಿಸಲಾಗಿತ್ತು. ಮನೆ ಪಟ್ಟಿ ಮತ್ತು ಮನೆಗಳ ಗಣತಿಯನ್ನು ಸಿದ್ಧಪಡಿಸುವ ಜನಗಣತಿಯನ್ನು 2026ರ ಜುಲೈ 1 ರಿಂದ 30ರವರೆಗೆ ನಡೆಸಲಾಗುವುದು. ಫೆಬ್ರವರಿ 2027ರ ಫೆಬ್ರವರಿಯಲ್ಲಿ ಜನಗಣತಿಯನ್ನು ಆಯೋಜಿಸಲಾಗುವುದು. ಈ ಬಾರಿ ಡಿಜಿಟಲ್ ವ್ಯವಸ್ಥೆಯಲ್ಲಿ ಜನಗಣತಿ ನಡೆಸುವುದರ ಜತೆಗೆ ಸಂಪೂರ್ಣ ಜನಸಂಖ್ಯಾ ಎಣಿಕೆ ನಡೆಸಲಾಗುತ್ತಿದೆ.
2027 ರ ಜನಗಣತಿಯಲ್ಲಿ ಮೊದಲ ಬಾರಿಗೆ ಸ್ವಯಂ-ಗಣತಿ ವಿಧಾನವನ್ನು ಪರಿಚಯಿಸಲಾಗುತ್ತಿದೆ. ವ್ಯಕ್ತಿಗಳು ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಸಲ್ಲಿಸಲು ಜೂನ್ 2026 ರಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗಿದೆ.



