ಜೆರುಸಲೆಮ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಅಂತ್ಯವಾಯಿತು ಎನ್ನುವಷ್ಟರಲ್ಲಿ ಮತ್ತೆ ಸಂಘರ್ಷ ಆರಂಭಗೊಂಡಿದೆ. ಇಸ್ರೇಲ್ ಮೇಲೆ ಇಂದು 3 ಡ್ರೋನ್ ದಾಳಿ ನಡೆದಿದ್ದು, ಲೆಬನಾನ್‌ನ ಭಯೋತ್ಪಾದಕ ಗುಂಪು ಹಿಜ್ಬುಲ್ಲಾ ಈ ದಾಳಿ ನಡೆಸಿರುವ ಶಂಕೆ ಇದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಇಸ್ರೇಲ್ ಮತ್ತು ಲೆಬನಾನ್ ಗಡಿಯಲ್ಲಿ ಮೊದಲೆರಡು ವೈಮಾನಿಕ ದಾಳಿ ನಡೆದಿದ್ದು, ಉತ್ತರ ಇಸ್ರೇಲ್‌ನಲ್ಲಿ ಮತ್ತೊಂದು ದಾಳಿ ನಡೆದಿದೆ ಎಂದು ಮಿಲಿಟರಿ ಹೇಳಿದೆ.
ಈ ದಾಳಿ ಬೆನ್ನಲ್ಲೇ ಹಿಜ್ಬುಲ್ಲಾಗಳ ಹಿಡಿತವಿರುವ ಬೈರೂತ್‌ನ ದಕ್ಷಿಣ ಸಬರ್ಬನ್ ಮೇಲೆ ಪ್ರತಿ ದಾಳಿಗೆ ಇಸ್ರೇಲ್‌ನ ಇಬ್ಬರು ಸಚಿವರು ಒತ್ತಾಯಿಸಿದ್ದಾರೆ.
ಉತ್ತರ ಲೆಬನಾನ್ ಮೇಲಿನ ದಾಳಿಗೆ ನನ್ನ ಒತ್ತಾಯವು ಪ್ರಧಾನಿಯ ಸಿದ್ಧಾಂತದ ಪರೀಕ್ಷೆಯಾಗಿದೆ. ದಾಳಿಯನ್ನು ವ್ಯವಸ್ಥಿತವಾಗಿ ಸಂಘಟಿಸುವ ಮೂಲಕ ದಹಿಯೆಹ್‌ನಲ್ಲಿ(ಹಿಜ್ಬುಲ್ಲಾ ಹಿಡಿತವಿರುವ ಪ್ರದೇಶ) ಕಟ್ಟಡಗಳನ್ನು ನೆಲಕ್ಕುರುಳಿಸಬೇಕಿದೆ ಎಂದು ಹಣಕಾಸು ಸಚಿವ ಬೆಸಲೆಲ್ ಸ್ಮೊಟ್ರಿಕ್ ಒತ್ತಾಯಿಸಿದ್ದಾರೆ.
ಪ್ರತಿಯೊಂದು ಡ್ರೋನ್, ಪ್ರತಿ ಕ್ಷಿಪಣಿ ದಾಳಿ ಮತ್ತು ಪ್ರತಿಯೊಂದು ಯುದ್ಧ ವಿರಾಮ ಉಲ್ಲಂಘನೆಗೆ ದಹಿಯೆಹ್‌ನಲ್ಲಿ ಹಿಜ್ಬುಲ್ಲಾ ಹುಟ್ಟಡಗಿಸುವಂತಹ ದಾಳಿ ನಡೆಯಬೇಕು ಎಂದು ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ ಗ್ವಿರ್ ಹೇಳಿದ್ದಾರೆ.
ಹಿಜ್ಬುಲ್ಲಾ ಹಿಡಿತವಿರುವ ದಹಿಯೆಹ್ ಮೇಲೆ ದಾಳಿ ನಡೆಸುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿ ಇಸ್ರೇಲ್ ಅಧಿಕಾರಿಗಳು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.
ಈ ನಡುವೆ ದಾಳಿಯ ಮುನ್ಸೂಚನೆ ನೀಡಿರುವ ಇಸ್ರೇಲ್, ದಕ್ಷಿಣ ಲೆಬನಾನ್‌ನಲ್ಲಿ 29 ಹಳ್ಳಿಗಳ ಜನರಿಗೆ ಸ್ಥಳಾಂತರಕ್ಕೆ ಸೂಚಿಸಿದೆ.

