ಲಖನೌ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಕೋಟ್ಯಂತರ ರೂಪಾಯಿ ಕಾಣೆಯಾಗಿದೆ ಎಂಬ ವರದಿಗಳನ್ನು ಮಂದಿರದ ಟ್ರಸ್ಟ್ ತಳ್ಳಿಹಾಕಿದೆ. ನಗದು ಕಾಣೆಯಾಗಿರುವ ಕುರಿತು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂಬುದು ಸುಳ್ಳುಸುದ್ದಿ ಎಂದು ಅಯೋಧ್ಯೆ ಪೊಲೀಸರು ತಿಳಿಸಿದ್ದಾರೆ.
'ಟ್ರಸ್ಟ್‌ನ ಸದಸ್ಯರು ಹಾಗೂ ಎಸ್‌ಬಿಐನಿಂದ ಖಾತೆಗಳ ಲೆಕ್ಕಪರಿಶೋಧನೆ (ಆಡಿಟ್) ನಡೆಸಲಾಗುತ್ತಿದೆ. ಈವರೆಗೆ ಯಾವುದೇ ಅಕ್ರಮವು ಕಂಡುಬಂದಿಲ್ಲ' ಎಂದು ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ವಿಡಿಯೊ ಹೇಳಿಕೆಯಲ್ಲಿ ಭಾನುವಾರ ಸಂಜೆ ಹೇಳಿದ್ದಾರೆ.
'ಹುಂಡಿ ಹಣದ ಎಣಿಕೆ ಕೊಠಡಿ ಸೇರಿದಂತೆ ಅನೇಕ ಕಡೆ ನಿಯಮಿತವಾಗಿ ಟ್ರಸ್ಟ್ ಪರಿಶೋಧನೆ ನಡೆಸುತ್ತದೆ. ಟ್ರಸ್ಟಿಗಳು, ಸಿಬ್ಬಂದಿ ಹಾಗೂ ಎಸ್‌ಬಿಐ ಜಂಟಿಯಾಗಿ ಇದನ್ನು ನಡೆಸುತ್ತವೆ. ಈಗಲೂ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ಇದು ಹಲವು ದಿನಗಳವರೆಗೆ ಮುಂದುವರಿಯುತ್ತದೆ' ಎಂದು ಅವರು ತಿಳಿಸಿದ್ದಾರೆ.

