ಛತ್ರಪತಿ ಸಂಭಾಜಿನಗರದಿಂದ ಸುಮಾರು 190 ಕಿಲೋಮೀಟರ್ ದೂರದ ಯಶ್ವಾಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಈ ಕುಸಿತದ ಹಿನ್ನೆಲೆಯಲ್ಲಿ 27 ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದರು ಎಂದು ಶಾಸಕ ರಾಜೇಶ್ ವಿಟೇಕರ್ ಹೇಳಿದ್ದಾರೆ. ಆರು ಮಂದಿ ಮೃತಪಟ್ಟಿದ್ದು, ಗಾಯಗೊಂಡವರಿಗೆ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಸಿಕ್ಕಿಹಾಕಿಕೊಂಡ ಎಲ್ಲರನ್ನೂ ಹೊರತೆಗೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಕುಶಲಕರ್ಮಿಗಳು ಬೇರೆ ರಾಜ್ಯದವರಾಗಿದ್ದು, ದೇಗುಲದ ಕೆಲಸಕ್ಕೆ ರಾಜಸ್ಥಾನದಿಂದ ಶಿಲೆಯನ್ನು ತರಲಾಗಿತ್ತು. ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿತ್ತು. ಘಟನೆಯ ಸ್ಪಷ್ಟ ಚಿತ್ರಣ ಲಭ್ಯವಿಲ್ಲ" ಎಂದು ವಿಟೇಕರ್ ಹೇಳಿದ್ದಾರೆ.
"ಟ್ರಸ್ಟ್ ಪದಾಧಿಕಾರಿಗಳ ಜತೆ ಈ ಸಂಬಂಧ ಮಾತುಕತೆ ನಡೆಸಿದ್ದೇನೆ. ಸ್ತಂಭ ನಿರ್ಮಾಣದಲ್ಲಿ ವಿಳಂಬವಾಗಿರುವುದು ಅಥವಾ ಲೋಪವಾಗಿರುವುದು ಸಭಾಮಂಟಪ ದಿಢೀರನೇ ಕುಸಿಯಲು ಕಾರಣವಿರಬೇಕು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಭಾನಿಯಲ್ಲಿ ದೇವಾಲಯ ಕುಸಿದು ಸಂಭವಿಸಿದ ದುರಂತದಲ್ಲಿ ಜೀವಹಾನಿಯಾಗಿರುವುದು ವಿಷಾದನೀಯ. ದುರಂತದಲ್ಲಿ ಪ್ರೀತಿಪಾತ್ರರ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಈ ದೇವಾಲಯ ಪ್ರಭಾನಿ ಜಿಲ್ಲೆಯ ತೀರ್ಥಯಾತ್ರಾ ಕ್ಷೇತ್ರವಾಗಿದ್ದು, ಪ್ರತಿ ಶನಿವಾರ 25 ರಿಂದ 50 ಸಾವಿರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಸಭಾಮಂಟಪದ ಮೇಲ್ಛಾವಣಿ ಮಧ್ಯಾಹ್ನ 3.30ರ ವೇಳೆಗೆ ಕುಸಿದು ಈ ದುರಂತ ಸಂಭವಿಸಿತು. ಪೊಲೀಸರು ಹಾಗೂ ಜಿಲ್ಲಾಡಳಿತದ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

