ಖುಂಟಿ: ನಿಷೇಧಿತ ನಕ್ಸಲ್ ಸಂಘಟನೆ 'ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ'ದ (ಪಿಎಲ್‌ಎಫ್‌ಐ) ಮುಖಂಡ ಸೇರಿದಂತೆ ಏಳು ನಕ್ಸಲರನ್ನು ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಜರಿಯಾಗಢ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಪಿಎಲ್‌ಎಫ್‌ಐ ಮುಖಂಡ ಶ್ರವಣ್ ದಾಸ್ ಹಾಗೂ ಆತನ ಸಹಚರರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ.
ಅವರ ಬಳಿ ಇದ್ದ ನಾಲ್ಕು ಬಂದೂಕುಗಳು ಮತ್ತು 30 ಗ್ರೆನೇಡ್‌ನ ಪಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಂಧಿತ ನಕ್ಸಲರು ಜಿಲ್ಲೆಯಲ್ಲಿ ಗುಂಡಿನ ದಾಳಿ, ದರೋಡೆ ಹಾಗೂ ಬೆಂಕಿ ಹಚ್ಚುವುದು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.
ಬಂಧನದ ಬಳಿಕ ನಡೆಸಿದ ವಿಚಾರಣೆ ವೇಳೆ, ತಾನು ಕಾಡಿನಲ್ಲಿ ಅಪಾರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಅಡಗಿಸಿಟ್ಟಿದ್ದು, ಅವುಗಳನ್ನು ಒಪ್ಪಿಸುವುದಾಗಿ ಶ್ರವಣ್ ಪೊಲೀಸರಿಗೆ ತಿಳಿಸಿದನು. ಪೊಲೀಸರು ಆತನನ್ನು ತಿಲ್ಮಿ ಅರಣ್ಯಕ್ಕೆ ಭಾನುವಾರ ಮುಂಜಾನೆ ಕರೆದೊಯ್ದರು. ಆಗ ಸಬ್ ಇನ್ಸ್‌ಪೆಕ್ಟರ್‌ವೊಬ್ಬರ ಬಂದೂಕು ಕಸಿದು, ಅವರತ್ತ ಗುಂಡು ಹಾರಿಸಲು ಶ್ರವಣ್ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆತ ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖುಂಟಿ ಜಿಲ್ಲಾ ಎಸ್‌ಪಿ ರಿಷಬ್ ಗರ್ಗ್ ತಿಳಿಸಿದರು.

