ಗುವಾಹಟಿ: 'ರಾಷ್ಟ್ರೀಯ ಪೌರತ್ವ ನೋಂದಣಿ'ಯನ್ನು (ಎನ್‌ಆರ್‌ಸಿ) ಜಾರಿಗೆ ತರಬೇಕು ಎಂದು ಆಗ್ರಹಿಸಿ ಮೈತೇಯಿ ಪ್ರಾಬಲ್ಯದ ಮಣಿಪುರದ ಕಣಿವೆ ಪ್ರದೇಶದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
'14 ಸಿಎಸ್‌ಒ ಕಾಂಗ್ಲೈಪಾಕ್' ನೇತೃತ್ವದಲ್ಲಿ ನೂರಾರು ಜನರು ಇಂಫಾಲ್‌ನ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಹೊಸ ಜನಗಣತಿ ನಡೆಸುವ ಮೊದಲು ಎನ್‌ಆರ್‌ಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯ ವಿಧಾನಸಭೆಯು 2022 ಮತ್ತು 2024ರಲ್ಲಿ ಎನ್‌ಆರ್‌ಸಿ ಬೇಡಿಕೆಯ ನಿರ್ಣಯವನ್ನು ಅಂಗೀಕರಿ ಸಿದರೂ, ಕೇಂದ್ರ ಸರ್ಕಾರವು ಅದನ್ನು ನಿರ್ಲಕ್ಷಿಸುತ್ತಿದೆ ಎಂದು ಪ್ರತಿಭಟನ ಕಾರರು ಆರೋಪಿಸಿದ್ದು, 'ಬೇಡಿಕೆ ಈಡೇರುವವರೆಗೆ, ಇಂತಹ ಪ್ರತಿಭಟನೆ ಆಯೋಜಿಸುವುದನ್ನು ಮುಂದುವರಿಸು ತ್ತೇವೆ' ಎಂದು ತಿಳಿಸಿದ್ದಾರೆ.
ಮ್ಯಾನ್ಮಾರ್‌ನಿಂದ ಅಕ್ರಮ ವಲಸೆ ಬರುವವರಿಂದಾಗಿ ಮಣಿಪುರದಲ್ಲಿ ಜನಸಂಖ್ಯೆಯ ಸ್ವರೂಪ ಬದಲಾಗಿದೆ. ಈ ಬದಲಾವಣೆ ಮೈತೇಯಿಗಳು ಹಾಗೂ ಇತರ ಸ್ಥಳೀಯ ಸಮುದಾಯಗಳಿಗೆ ಅಪಾಯವನ್ನು ಉಂಟುಮಾಡಿದೆ ಎಂದು ಪ್ರತಿಪಾದಿಸಿರುವ ಮೈತೇಯಿ ಸಂಘಟನೆಗಳು, ಅದಕ್ಕಾಗಿ ಎನ್‌ಆರ್‌ಸಿ ಅಗತ್ಯವಿದೆ ಎಂದಿವೆ. ಈ ಹೋರಾಟಕ್ಕೆ 14 ಸಂಘಟನೆಗಳು ಬೆಂಬಲ ನೀಡಿವೆ.

