ಅಹಿಲ್ಯಾನಗರ: ದೇಶದ ಅತ್ಯಂತ ಪ್ರಮುಖ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ನಡೆದ ಅಕ್ರಮದ ಜವಾಬ್ದಾರಿ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ದೆಹಲಿ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಪರ ಅನೇಕ ನಟ, ನಟಿಯರು ಬೆಂಬಲ ಸೂಚಿಸಿದ್ದಾರೆ. ಇದೀಗ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಅಣ್ಣಾ ಹಜಾರೆ ಮೌನ ಪ್ರತಿಭಟನೆ ನಡೆಸಿದ್ದಾರೆ. ಮಹಾತ್ಮಾ ಗಾಂಧಿ ಸ್ಮಾರಕದ ಎದುರು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೌನ ಪ್ರತಿಭಟನೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅಣ್ಣಾ ಹಜಾರೆ, 'ಗಲಭೆ ಮತ್ತು ಪೊಲೀಸರ ಕ್ರಮಗಳ ಬಗ್ಗೆ ಕೇಳಿದ ಸುದ್ದಿ ತೀವ್ರ ನೋವುಂಟು ಮಾಡಿದೆ. ಪ್ರತಿಭಟನಾಕಾರರ ಅಸಮಾಧಾನವನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಅಲ್ಲ, ಬದಲಾಗಿ ಸಮಾಜದ ವೇದನೆ ಮತ್ತು ನಿರೀಕ್ಷೆಗಳಾಗಿ ನೋಡಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡುವಂತೆ ಕೋರಿದರೆ, ಅದರಿಂದ ಸರ್ಕಾರ ಪತನಗೊಳ್ಳುವುದಿಲ್ಲ, ಬದಲಿಗೆ, ಅದು ಸರ್ಕಾರದ ಕಾರ್ಯನಿರ್ವಹಣೆಯನ್ನು ಹೆಚ್ಚು ಜವಾಬ್ದಾರಿಯುತ ಮತ್ತು ಪರಿಣಾಮಕಾರಿಯನ್ನಾಗಿಸುತ್ತದೆ. ಪ್ರತಿಭಟನಾಕಾರರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ನಂಬಿಕೆಯ ವಾತಾವರಣವನ್ನು ಸೃಷ್ಟಿಸಿ. ಸಕಾರಾತ್ಮಕ ಹಾದಿಯಲ್ಲಿ ಪರಿಹಾರ ಹುಡುಕಿ' ಎಂದಿದ್ದಾರೆ.
ಅನಾರೋಗ್ಯದ ನಡುವೆಯೂ, ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡಲು ಅಣ್ಣಾ ಹಜಾರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೌನ ಪ್ರತಿಭಟನೆಗೆ ಕುಳಿತುಕೊಳ್ಳುತ್ತಿದ್ದಂತೆ ಭಾವುಕರಾದ ಅಣ್ಣಾ ಹಜಾರೆ, ಕಂಬನಿ ಸುರಿಸಿದರು. ಆರೋಗ್ಯದ ಕಾರಣದಿಂದಾಗಿ ಸ್ವಲ್ಪ ಸಮಯದ ನಂತರ ಅಲ್ಲಿಂದ ತೆರಳಿದರು. ಅವರು ತೆರಳಿದ ನಂತರವೂ ಮೌನ ಪ್ರತಿಭಟನೆ ಮುಂದುವರಿಯಿತು.

