HEALTH TIPS

CJP ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ?; ದಿಲ್ಲಿ ಪೋಲೀಸರ ಸ್ಪಷ್ಟನೆ ಏನು? ವೀಡಿಯೋದಲ್ಲಿ ಇರುವುದೇನು?

ನವದೆಹಲಿ: ಜಂತರ್‌ ಮಂತರ್‌ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(CJP) ನೇತೃತ್ವದಲ್ಲಿ ನಡೆಯುತ್ತಿರುವ 'ಚಲೋ ಸಂಸದ್' ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ದಿಲ್ಲಿ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹಾಗೂ ಕೆಲವು ಮಾಧ್ಯಮ ವರದಿಗಳು ಈ ಆರೋಪಕ್ಕೆ ಪುಷ್ಠಿ ನೀಡುತ್ತಿವೆ.

ಜಂತರ್‌ ಮಂತರ್‌ನಲ್ಲಿ ಗಾಯಗೊಂಡ 19 ವರ್ಷದ ಪ್ರತಿಭಟನಾಕಾರ ಸಾಹಿಲ್ ಲೋಚಬ್ ಅವರು ಬಲಗಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. ನೈಋತ್ಯ ದಿಲ್ಲಿಯ ನಜಾಫ್‌ಗಢ ನಿವಾಸಿಯಾಗಿರುವ ಅವರು ಮಂಗಳವಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಯಲ್ಲಿ ಕಣ್ಣಿನಲ್ಲಿದ್ದ ಪೆಲೆಟ್‌ ಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗಾಯಗೊಂಡ ಕಣ್ಣಿನಲ್ಲಿ ದೃಷ್ಟಿ ಮರಳುವ ಸಾಧ್ಯತೆ ಕೇವಲ "ಶೇಕಡಾ 1ರಷ್ಟು" ಮಾತ್ರ ಇದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರ ಕುಟುಂಬವನ್ನು ಉಲ್ಲೇಖಿಸಿ The Hindu ವರದಿ ಹೇಳಿದೆ.

ಸ್ಥಳದಲ್ಲಿದ್ದ ತನ್ನ ವರದಿಗಾರನೊಬ್ಬರೂ ಗಾಯಗೊಂಡಿದ್ದಾರೆ. ಅವರ ತೋಳು ಮತ್ತು ಬೆನ್ನಿಗೆ ಪೆಟ್ಟು ಬಿದ್ದಿದ್ದು, ವೈದ್ಯಕೀಯ ವರದಿಯಲ್ಲಿ ತೋಳಿನ ಮೇಲೆ ಬಹು ಪಂಕ್ಚರ್ ಗಾಯಗಳು ದಾಖಲಾಗಿವೆ ಎಂದು Outlook India ವರದಿ ತಿಳಿಸಿದೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಈ ವೇಳೆ ಪೆಲೆಟ್ ಗನ್ ಬಳಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಆದರೆ, ಈ ಆರೋಪವನ್ನು ದಿಲ್ಲಿ ಪೊಲೀಸರು ತಳ್ಳಿಹಾಕಿದ್ದಾರೆ. "ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಸಲಾಗಿದೆ ಎಂಬ ಹೇಳಿಕೆಗಳು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತಿವೆ. ದಿಲ್ಲಿ ಪೊಲೀಸರ ಬಳಿ ಪೆಲೆಟ್ ಗನ್‌ಗಳಿಲ್ಲ ಮತ್ತು ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅವುಗಳನ್ನು ಬಳಸಿಲ್ಲ" ಎಂದು ಎಕ್ಸ್‌ ನಲ್ಲಿ ಪ್ರಕಟಿಸಿರುವ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿರುವ 80 ಗಾಯಾಳುಗಳಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗಾಯಗಳಾಗಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ದಿಲ್ಲಿಯಲ್ಲಿ ನಾಗರಿಕರ ವಿರುದ್ಧ ಪೆಲೆಟ್ ಗನ್ ಬಳಸಿರುವ ಮೊದಲ ಪ್ರಕರಣ ಇದಾಗಿದೆ ಎಂದು The Hindu ವರದಿ ಹೇಳಿದೆ.

ಅದೇ ಆಸ್ಪತ್ರೆಯಲ್ಲಿ 25 ವರ್ಷದ ಶೇಖ್ ಇರ್ಷಾದ್ ಮನ್ಸೂರಿ ಅವರ ಮುಖ ಮತ್ತು ಕುತ್ತಿಗೆಯಲ್ಲಿ ಸಿಲುಕಿದ್ದ ಹಲವು ಗುಂಡುಗಳನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕಣ್ಣುಗಳ ಕೆಳಭಾಗದಲ್ಲಿದ್ದ ಗುಂಡುಗಳನ್ನು ವೈದ್ಯರು ಹೊರತೆಗೆದಿದ್ದರೂ, ಕುತ್ತಿಗೆಯ ರಕ್ತನಾಳದ ಸಮೀಪ ಸಿಲುಕಿದ್ದ ಮತ್ತೊಂದು ಗುಂಡನ್ನು ತೆಗೆಯಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮನ್ಸೂರಿ ಅವರ ಗಾಯಗಳ ಸ್ವರೂಪವನ್ನು ದೃಢೀಕರಿಸುವ ಯಾವುದೇ ಸಾರ್ವಜನಿಕ ವಿಧಿವಿಜ್ಞಾನ ವರದಿ ಪ್ರಕಟವಾಗಿಲ್ಲ. ಕ್ಷಿಪ್ರ ಕಾರ್ಯಪಡೆ (RAF) ವಿರುದ್ಧದ ಆರೋಪಗಳ ಕುರಿತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

CJP ವಕ್ತಾರ ಸೌರವ್ ದಾಸ್ ಅವರು ಎಕ್ಸ್‌ನಲ್ಲಿ ಗಾಯಗಳ ವೀಡಿಯೊಗಳು ಮತ್ತು ಫೊಟೋಗಳನ್ನು ಹಂಚಿಕೊಂಡ ಬಳಿಕ ಪೆಲೆಟ್ ಗನ್ ಬಳಕೆಯ ಆರೋಪಗಳು ವ್ಯಾಪಕ ಗಮನ ಸೆಳೆದಿವೆ.

ವರದಿಗಳ ಪ್ರಕಾರ, ದಿಲ್ಲಿ ಪೊಲೀಸರ ಬಳಿ ಪೆಲೆಟ್ ಗನ್ ಮತ್ತು ಶಾಕ್ ಲಾಠಿಗಳು ಇಲ್ಲದಿರಬಹುದು. ಆದರೆ, ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಲಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಸೇರಿದ ಗಲಭೆ ನಿಯಂತ್ರಣ ಘಟಕವಾದ RAFನ ಉಪಕರಣಗಳಲ್ಲಿ ಅವು ಸೇರಿವೆ ಎಂದು ಹೇಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಕೆಲವು ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಪ್ರತಿಭಟನಾಕಾರರ ದೇಹದ ಮೇಲೆ ಪೆಲೆಟ್ ಗಾಯಗಳು ಕಂಡುಬರುತ್ತಿವೆ ಎಂದು ಹೇಳಲಾಗಿದೆ. ಒಂದು ವೀಡಿಯೊದಲ್ಲಿ RAF ಸಿಬ್ಬಂದಿ ಪೆಲೆಟ್ ಗನ್ ಬಳಸುತ್ತಿರುವುದು ಕಂಡುಬರುತ್ತದೆ ಎಂಬುದಾಗಿಯೂ ವರದಿಗಳು ಹೇಳಿವೆ.

ಆದರೂ, ದಿಲ್ಲಿ ಪೊಲೀಸ್ ಡಿಸಿಪಿ ಕೂಡ ಪೆಲೆಟ್ ಗನ್ ಬಳಕೆಯನ್ನು ನಿರಾಕರಿಸಿದ್ದು, ಈ ಕುರಿತ ವರದಿಗಳು ಸುಳ್ಳು ಎಂದು ಹೇಳಿದ್ದಾರೆ.

ಪೆಲೆಟ್ ಗನ್ ಎಂದರೇನು?

ಪೆಲೆಟ್ ಗನ್‌ಗಳು ಭಾರತದ ಅತ್ಯಂತ ವಿವಾದಾತ್ಮಕ ಜನಸಂದಣಿ ನಿಯಂತ್ರಣ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿವೆ. ಒಂದೇ ಬಾರಿ ಗುಂಡು ಹಾರಿಸಿದಾಗ ನೂರಾರು ಸಣ್ಣ ಲೋಹದ ಗುಂಡುಗಳನ್ನು ಹೊರಸೂಸುವ ಈ ಶಸ್ತ್ರಾಸ್ತ್ರಗಳನ್ನು ಮಾರಕವಲ್ಲದವು ಎಂದು ವರ್ಗೀಕರಿಸಲಾಗಿದ್ದರೂ, ಅವು ಕಣ್ಣಿನ ಗಂಭೀರ ಗಾಯ, ಮುಖಕ್ಕೆ ಹಾನಿ ಹಾಗೂ ಶಾಶ್ವತ ಕುರುಡುತನಕ್ಕೂ ಕಾರಣವಾಗಬಹುದು.

2016ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅಶಾಂತಿಯ ವೇಳೆ ಪೆಲೆಟ್ ಗನ್‌ಗಳನ್ನು ಬಳಸಲಾಗಿದ್ದು, ನೂರಾರು ನಾಗರಿಕರು ಕಣ್ಣಿನ ಗಾಯಗಳಿಗೆ ಒಳಗಾಗಿದ್ದರು. 2023ರ ಮಣಿಪುರ ಹಿಂಸಾಚಾರ ಹಾಗೂ 2024ರಲ್ಲಿ ಪಂಜಾಬ್-ಹರ್ಯಾಣ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿಯೂ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಹಲವು ಸಂದರ್ಭಗಳಲ್ಲಿ ಅಧಿಕಾರಿಗಳು ಅಂತಹ ಆರೋಪಗಳನ್ನು ನಿರಾಕರಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries