ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಕಿರಣ್ ರಿಜಿಜು, "ನೀಟ್ ವಿಷಯದ ಕುರಿತು ಚರ್ಚೆ ನಡೆಯಬೇಕು ಎಂದು ಎಲ್ಲ ಪಕ್ಷಗಳೂ ಆಗ್ರಹಿಸಿವೆ.
ನೀಟ್ ವಿಷಯದ ಕುರಿತು ಚರ್ಚೆ ನಡೆಸಬೇಕು ಎಂದು ಇಡೀ NDA ಒಕ್ಕೂಟ ಇಂದು ಮತ್ತೆ ಆಗ್ರಹಿಸಿದೆ. ಖರ್ಗೆ ಹಾಗೂ ವಿರೋಧ ಪಕ್ಷಗಳ ಇನ್ನಿತರ ನಾಯಕರನ್ನು ಭೇಟಿ ಮಾಡಿದ ಬಳಿಕ, ಇಂದು ನೀಟ್ ವಿಷಯದ ಕುರಿತು ಸದನದಲ್ಲಿ ಚರ್ಚೆ ನಡೆಯಬಹುದು ಎಂದು ನಿನ್ನೆ ನನಗೆ ಅನ್ನಿಸಿತ್ತು" ಎಂದು ಹೇಳಿದರು.
"ಆದರೆ, ಚರ್ಚೆಗೆ ಕಾಂಗ್ರೆಸ್ ಷರತ್ತು ವಿಧಿಸಿದೆ. ಚರ್ಚೆ ಎಷ್ಟು ಕಾಲ ನಡೆಯಬೇಕು ಹಾಗೂ ಎಷ್ಟು ದಿನ ನಡೆಯಬೇಕು ಎಂಬ ವಿಷಯವನ್ನು ನಾವು ನಮ್ಮನಮ್ಮಲ್ಲೇ ತೀರ್ಮಾನ ಮಾಡಿಕೊಳ್ಳೋಣ. ಆದರೆ, ಷರತ್ತು ವಿಧಿಸಬೇಡಿ ಎಂದು ಮನವಿ ಮಾಡಿದೆ" ಎಂದು ಅವರು ತಿಳಿಸಿದರು.
"ಷರತ್ತು ವಿಧಿಸುವ ನಿಮ್ಮ ಉದ್ದೇಶ ಸಮರ್ಪಕವಾಗಿಲ್ಲ. ಯಾಕೆಂದರೆ, ನೀವು ಚರ್ಚೆಯನ್ನು ನಿಲ್ಲಿಸಲು ಬಯಸುತ್ತಿದ್ದೀರಿ. ಯಾವುದೇ ರಾಜಕೀಕರಣವಿಲ್ಲದೆ ಸಂಸತ್ತಿನ ಉಭಯ ಸದನಗಳಲ್ಲೂ ನೀಟ್ ಪರೀಕ್ಷೆ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು ಎಂದು ನಾನು ನಿಮಗೆ ಮತ್ತೆ ಭರವಸೆ ನೀಡುತ್ತೇನೆ" ಎಂದು ಅವರು ಮನವಿ ಮಾಡಿದರು.
"ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಅತ್ಯಂತ ಕಠಿಣ ಕ್ರಮ ಕೈಗೊಂಡಿದ್ದು, ದೇಶದಲ್ಲಿ ಇಂತಹ ಘಟನೆಗಳು ನಡೆದಾಗ, ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ಅತ್ಯಂತ ಕಠಿಣ ಶಿಕ್ಷೆ ವಿಧಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕಿದೆ ಎಂದು ದೇಶಕ್ಕೆ ತಿಳಿಸಿದ್ದಾರೆ. ಇಂತಹ ಉತ್ತಮ ನಿರ್ಧಾರವನ್ನು ಸರಕಾರ ಕೈಗೊಂಡಿದೆ. ಹೀಗಾಗಿ, ನೀವು ಯಾವುದೇ ಷರತ್ತುಗಳನ್ನು ವಿಧಿಸಬೇಡಿ ಎಂಬುದು ನನ್ನ ಮನವಿಯಾಗಿದೆ" ಎಂದು ಅವರು ಕೋರಿದ್ದಾರೆ.

