ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದಲ್ಲಿ ಸ್ನಾತಕೋತ್ತರ ಪದವಿ ತರಗತಿಗಳಿಗೆ ಸೇರಿದ ಹೊಸ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಪರಿಚಯಾತ್ಮಕ ಕಾರ್ಯಕ್ರಮ(ಇಂಡಕ್ಷನ್ ಪ್ರೊಗ್ರಾಂ) ಸಂಪನ್ನಗೊಂಡಿತು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲ್ಗೂರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಕಾರಾತ್ಮಕ ದೃಷ್ಟಿಕೋನ ಕೈಬಿಟ್ಟು, ಪ್ರಾಮಾಣಿಕತೆ, ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳುವುದರ ಜತೆಗೆ ಕಠಿಣ ಸವಾಲುಗಳ ನಡುವೆಯೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ತಿಳಿಸಿದರು.
ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರೊ. ತೇಜ್ ಪಿ. ಸಿಂಗ್ ಮತ್ತು ಐಐಟಿ ರೋಪರ್ನ ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಥರ್ವ ಪೌಂಡರಿಕ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಭಾರ ಕುಲಸಚಿವ ಪ್ರೊ. ವಿ.ಬಿ. ಸಮೀರ್ ಕುಮಾರ್, ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಡೀನ್ (ಶೈಕ್ಷಣಿಕ) ಪ್ರೊ. ಜೋಸೆಫ್ ಕೊಯಿಪ್ಪಳ್ಳಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ರಾಜೇಂದ್ರ ಪಿಲಾಂಗಟ್ಟೆ ಮತ್ತು ಪ್ರಾಕ್ಟರ್ ಪ್ರೊ. ಪಿ. ಶ್ರೀಕುಮಾರ್ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಡೀನ್ಗಳು, ಮುಖ್ಯಸ್ಥರು, ಬೋಧಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂಆರಂಭದಲ್ಲಿ ಪಾಲ್ಗೊಂಡಿದ್ದರು.


