ಕಾಸರಗೋಡು: ನಗರಸಭಾ ವ್ಯಾಪ್ತಿಯ ಪಳ್ಳಂ ರಸ್ತೆ ಹೊಂಡಬಿದ್ದು ಶೋಚನೀಯಾಸ್ಥೆಯಲ್ಲಿದ್ದು, ವಾಹನ ಸಂಚಾರ ಸಂಪೂರ್ಣ ಅಯೋಮಯವಾಗಿದೆ. ರಸ್ತೆಅಂಚಿನ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ನೀರುಹರಿಯುವ ಚರಂಡಿ ಮುಚ್ಚುಗಡೆಗೊಂಡಿದ್ದು, ಪಾದಚಾರಿಗಳಿಗೆ ನಡೆದಾಡಲೂಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ವಾರದ ಹಿಂದೆಯೇ ಈ ಕಾಂಕ್ರೀಟ್ ಸಲ್ಯಾಬ್ ಕುಸಿದುಬಿದ್ದಿದ್ದರೂ, ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದಾಗಿ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಪ್ರತಯಿನಿತ್ಯ ನೂರಾರು ವಾಹನಗಳು ಸಂಚರಿಸುವ ಪ್ರಸಕ್ತ ರಸ್ತೆಯನ್ನು ಅಭಿವೃದ್ಧಿಗೊಳಿಸದಿದ್ದಲ್ಲಿ ರಸ್ತೆಸಂಪೂರ್ಣ ಹಾಳಾಗುವ ಸಾಧ್ಯತೆಯಿದೆ. ನಗರಸಭೆಯ ಪ್ರತಿಷ್ಠಿತ 'ನಗರ ಅರಣ್ಯ'ಯೋಜನೆ ಜಾರಿಯಲ್ಲಿರುವ ಪಳ್ಳಂ ಕಸಬಾ ಪ್ರದೇಶಕ್ಕೆ ಸಂಚರಿಸಲು ಇದೇ ಹಾದಿ ಬಳಸಿಕೊಳ್ಳಬೇಕಾಗಿದೆ.
ನಗರ ಪ್ರದೇಶದಲ್ಲಿ ಅರಣ್ಯ ಬೆಳೆಸುವುದರ ಜತೆಗೆ ಜನಾಕರ್ಷಣೆ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ನಗರ ಅರಣ್ಯ ಎಂಬ ಮಹತ್ವದ ಯೋಜನೆಯನ್ನು ನಗರಸಭೆ ಜಾರಿಗೊಳಿಸುತ್ತಿರುವ ಮಧ್ಯೆ, ಈ ಪ್ರದೇಶಕ್ಕೆ ತೆರಳಲಿರುವ ರಸ್ತೆ ಶೋಚನೀಯಾವಸ್ಥೆ ಬಗೆಹರಿಸಲು ಮುಂದಾಗದಿರುವ ಬಗ್ಗೆ ಇಲ್ಲಿನ ಜನತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಅಂಚಿಗೆ ಅಳವಡಿಸಿದ್ದ ಬೀದಿ ದೀಪವೂ ಧರಾಶಾಯಿಯಾಗಿದೆ.
ಚರಂಡಿಯನ್ನು ಮುಚ್ಚಿದ್ದ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದು ರಸ್ತೆಯಲ್ಲಿ ನಿರ್ಮಾಣವಾಗಿರುವುದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಸುಮಾರು ಒಂದು ವಾರದ ಹಿಂದೆಯೇ ಈ ಸ್ಲ್ಯಾಬ್ ಕುಸಿದುಬಿದ್ದಿತ್ತು. ಪ್ರತಿದಿನವೂ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಗುಂಡಿ ಉಂಟಾಗಿದ್ದು, ಇದರ ಸುತ್ತಮುತ್ತ ಹಲವು ವಾಣಿಜ್ಯ ಮಳಿಗೆಗಳು ಹಾಗೂ ಹೋಟೆಲ್ ಕೂಡ ಇವೆ. ರಸ್ತೆಯಲ್ಲಿಹೊಂಡಗಳೆದ್ದು, ಇದರಲ್ಲಿ ವಾಹನ ಸಿಲುಕಿಕೊಳ್ಳದಂತೆ ತಡೆಗಟ್ಟಲು ಪ್ರಸಕ್ತ ಈ ಸ್ಥಳದಲ್ಲಿ ಕಲ್ಲು, ಮರದ ರೆಂಬೆ ಪೇರಿಸಿಟ್ಟು ಚಾಲಕರನ್ನು ಎಚ್ಚರಿಸುವ ಪ್ರಯತ್ನ ನಡೆಸಲಾಗಿದೆ. ಭಾರೀ ದುರಂತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.




