ಗ್ಯಾಂಗ್ಟಕ್: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಬಳಿಕ ಸಿಕ್ಕಿಂನ ಮತದಾರರ ಪಟ್ಟಿಯಿಂದ 54,209 ಹೆಸರುಗಳನ್ನು ಚುನಾವಣಾ ಆಯೋಗ ತೆಗೆದು ಹಾಕಿದೆ. ಪರಿಷ್ಕರಣೆಯ ನಂತರ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ರವಿವಾರ ಪ್ರಕಟಿಸಿದೆ.
ಜುಲೈ 1ನ್ನು ಅರ್ಹತಾ ದಿನಾಂಕವಾಗಿಟ್ಟುಕೊಂಡು ನಡೆಸಲಾದ ಈ ಪ್ರಕ್ರಿಯೆಯ ಪರಿಣಾಮವಾಗಿ 54,209 ಹೆಸರುಗಳನ್ನು ತೆಗೆದು ಹಾಕಲಾಗಿದೆ.
ಇವುಗಳಲ್ಲಿ 37,737 ಹೆಸರುಗಳನ್ನು ಗೈರು ಹಾಜರಿ, ಸ್ಥಳಾಂತರಗೊಂಡ, ಮೃತಪಟ್ಟ ಮತ್ತು ನಕಲಿ (ಎಎಸ್‌ಡಿಡಿ) ವರ್ಗಕ್ಕೆ ಸೇರಿಸಲಾಗಿದ್ದು, 16,485 ಮತದಾರರು ವಿಚಾರಣೆಯ ಸಂದರ್ಭ ಅನರ್ಹರೆಂದು ಕಂಡು ಬಂದಿದ್ದಾರೆ.
ಎಎಸ್‌ಡಿಡಿ ವರ್ಗದಲ್ಲಿ 10,837 ಮೃತಪಟ್ಟ ಮತದಾರರು, 8,648 ಗೈರುಹಾಜರಾದ ಅಥವಾ ಪತ್ತೆಯಾಗದವರು, 14,603 ಶಾಶ್ವತವಾಗಿ ಸ್ಥಳಾಂತರಗೊಂಡವರು ಮತ್ತು 2,396 ನಕಲಿ ನಮೂದುಗಳು ಸೇರಿವೆ.
ಅಂತಿಮ ಮತದಾರರ ಪಟ್ಟಿಯಲ್ಲಿ 2,12,534 ಪುರುಷರು, 2,05,931 ಮಹಿಳೆಯರು ಮತ್ತು ಇಬ್ಬರು ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 4,18,467 ಮತದಾರರಿದ್ದಾರೆ. ಜುಲೈ 5ರಂದು ಪ್ರಕಟವಾದ ಕರಡು ಪಟ್ಟಿಯಲ್ಲಿ 4,33,294 ಮತದಾರರಿದ್ದರು. ಅದಕ್ಕೆ ಹೋಲಿಸಿದರೆ, ಇದು 14,827 ಅಥವಾ ಶೇ. 3,42ರಷ್ಟು ನಿವ್ವಳ ಇಳಿಕೆಯಾಗಿದೆ.
ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸೇರ್ಪಡೆಗಾಗಿ ಸಲ್ಲಿಸಲಾದ ಮನವಿಗಳ ಆಧಾರದ ಮೇಲೆ 1,982 ಮತದಾರರನ್ನು ಹೊಸದಾಗಿ ಸೇರಿಸಲಾಗಿದೆ. ಹಾಗೆಯೇ, ಹಕ್ಕುಗಳು, ಆಕ್ಷೇಪಣೆಗಳು ಮತ್ತು ಪರಿಶೀಲನಾ ಪ್ರಕ್ರಿಯೆಯ ಆಧಾರದ ಮೇಲೆ 16,809 ಹೆಸರುಗಳನ್ನು ತೆಗೆದು ಹಾಕಲಾಗಿದೆ.
ಎಸ್‌ಐಆರ್ ಪ್ರಕ್ರಿಯೆಯು ರಾಜ್ಯದಲ್ಲಿನ ಮತಗಟ್ಟೆಗಳ ಸಂಖ್ಯೆಯನ್ನು 572ರಿಂದ 625ಕ್ಕೆ ಹೆಚ್ಚಿಸಿದ್ದು, 53 ಹೊಸ ಮತಗಟ್ಟೆಗಳನ್ನು ಸೇರಿಸಲಾಗಿದೆ.
ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಅನರ್ಹ ಮತ್ತು ನಕಲಿ ನಮೂದುಗಳನ್ನು ತೆಗೆದು ಹಾಕಲು ಮತ್ತು ನವೀಕರಿಸಿದ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳಲು ಈ ಪರಿಷ್ಕರಣೆ ನಡೆಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

