HEALTH TIPS

Gujarat | ಸಾಲ ತೀರಿಸದೆ ಗಿರವಿ ಚಿನ್ನ ಪಡೆಯಲು ಮ್ಯಾನೇಜರ್ ಹತ್ಯೆ: ಮಹಿಳೆ ಬಂಧನ, ಪ್ರಿಯಕರ ಪರಾರಿ

ಅಹಮದಾಬಾದ್: ಸಾಲದ ಕಂತುಗಳನ್ನು ಪಾವತಿಸದೆ ತಪ್ಪಿಸಿಕೊಳ್ಳಲು ಹಾಗೂ ಸಾಲಕ್ಕಾಗಿ ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ಮರಳಿ ಪಡೆಯಲು ಫೈನಾನ್ಸ್ ಕಂಪೆನಿಯ ಮ್ಯಾನೇಜರ್‌ ನನ್ನೇ ಜೋಡಿಯೊಂದು ಹತ್ಯೆ ಮಾಡಿದೆ ಎನ್ನಲಾದ ಘಟನೆ ಗುಜರಾತ್‌ ನ ಪ್ರಾಂತಿಜ್‌ ನಲ್ಲಿ ನಡೆದಿದೆ. 


ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅಲಿಯಾಸ್ ಭಾವು ಠಾಕೂರ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಯೋಗೇಶ್ ಠಾಕೂರ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪ್ರಾಂತಿಜ್‌ನ IIFL ಫೈನಾನ್ಸ್ ಶಾಖೆಯಲ್ಲಿ ಭಾವನಾ ಮತ್ತು ಯೋಗೇಶ್ ಚಿನ್ನಾಭರಣಗಳನ್ನು ಗಿರವಿ ಇಟ್ಟು ಸಾಲ ಪಡೆದಿದ್ದರೂ ಎನ್ನಲಾಗಿದೆ. ಭಾವನಾ 1.5 ಲಕ್ಷ ಹಾಗೂ ಯೋಗೇಶ್ 4.5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇಬ್ಬರೂ ಸೇರಿ ಒಟ್ಟು 6 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಬೇಕಿತ್ತು.

ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಾಲದ ಕಂತುಗಳನ್ನು ಪಾವತಿಸದೆ ತಪ್ಪಿಸಿಕೊಳ್ಳಲು ಹಾಗೂ ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ಮರಳಿ ಪಡೆಯಲು ಇಬ್ಬರೂ ಫೈನಾನ್ಸ್ ಕಂಪೆನಿಯ ಮ್ಯಾನೇಜರ್ ಭರತ್ ಚೌಧರಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಐಐಎಫ್‌ಎಲ್ ಫೈನಾನ್ಸ್‌ನ ಮಾನ್ಸಾ ಶಾಖೆಯ ಮ್ಯಾನೇಜರ್ ಆಗಿದ್ದ ಭರತ್ ಚೌಧರಿ ಸೆಪ್ಟೆಂಬರ್ 2ರಂದು ನಾಪತ್ತೆಯಾಗಿದ್ದರು. ಎರಡು ದಿನಗಳ ಬಳಿಕ ಪ್ರಾಂತಿಜ್ ತಾಲ್ಲೂಕಿನ ಲಿಮ್ಲಾ ಗ್ರಾಮದ ಬಳಿ ನಿಂತಿದ್ದ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಮೃತದೇಹದ ಕುತ್ತಿಗೆಯಲ್ಲಿ ಆಳವಾದ ಇರಿತದ ಗಾಯಗಳಿದ್ದವು. ಹರಿತವಾದ ಆಯುಧದಿಂದ ಇರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ನೀಡುವುದಾಗಿ ಕರೆ

ಭರತ್ ಚೌಧರಿ ಅವರನ್ನು ಹತ್ಯೆ ಮಾಡುವ ಯೋಜನೆಯಂತೆ ಭಾವನಾ ಅವರಿಗೆ ಕರೆ ಮಾಡಿ, 'ನಿಮ್ಮ ಹಣವನ್ನು ಮರುಪಾವತಿ ಮಾಡುತ್ತೇವೆ. ಪ್ರಾಂತಿಜ್‌ ಗೆ ಬನ್ನಿ' ಎಂದು ಹೇಳಿದ್ದಳು ಎನ್ನಲಾಗಿದೆ.

ಭಾವನಾ ಅವರ ಮಾತನ್ನು ನಂಬಿ ಭರತ್ ಚೌಧರಿ ಮಾನ್ಸಾದಿಂದ ಪ್ರಾಂತಿಜ್‌ಗೆ ತೆರಳಿದ್ದರು. ಅವರನ್ನು ಯೋಗೇಶ್ ಕಾರಿನಲ್ಲಿ ಕರೆದೊಯ್ದಿದ್ದ. ಕಾರು ವಡ್ವಸ ತಲುಪಿದಾಗ ಯೋಗೇಶ್ ಹರಿತವಾದ ಆಯುಧದಿಂದ ಭರತ್ ಚೌಧರಿ ಅವರ ಕುತ್ತಿಗೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಭರತ್ ಚೌಧರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹಳ್ಳದಲ್ಲಿ ಸಿಲುಕಿದ ಕಾರು

ಹತ್ಯೆಯ ಬಳಿಕ ಕಾರು ಹಾಗೂ ಭರತ್ ಚೌಧರಿ ಅವರ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಲು ಆರೋಪಿಗಳು ಯೋಜಿಸಿದ್ದರು. ಅದರಂತೆ ಲಿಮ್ಲಾ ಗ್ರಾಮದವರೆಗೆ ಕಾರು ಚಲಾಯಿಸಿದ್ದರು.

ಬಳಿಕ ಕಾರನ್ನು ಹಿಂದಕ್ಕೆ ಚಲಾಯಿಸುವಾಗ ರಸ್ತೆ ಬದಿಯ ಹಳ್ಳದಲ್ಲಿ ಕಾರು ಸಿಲುಕಿಕೊಂಡಿದೆ. ಕಾರನ್ನು ಅಲ್ಲಿಂದ ಹೊರತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾವು ಸಿಕ್ಕಿಬೀಳುವ ಭೀತಿಯಿಂದ ಆರೋಪಿಗಳು ಕಾರು ಹಾಗೂ ಮೃತದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಲಿಮ್ಲಾ ಗ್ರಾಮದಿಂದ ವಡ್ವಸಕ್ಕೆ ತೆರಳುವ ರಸ್ತೆಯಲ್ಲಿದ್ದ ಕಾರಿನಲ್ಲಿ ಭರತ್ ಚೌಧರಿ ಅವರ ಮೃತದೇಹ ಪತ್ತೆಯಾಗಿದೆ.

ತಾಂತ್ರಿಕ ಸಾಕ್ಷ್ಯದಿಂದ ಪ್ರಕರಣ ಪತ್ತೆ

ಭರತ್ ಚೌಧರಿ ನಾಪತ್ತೆಯಾದ ಬಗ್ಗೆ ದೂರು ಬಂದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ತಾಂತ್ರಿಕ ಸಾಕ್ಷ್ಯಗಳು ಹಾಗೂ ಕರೆ ವಿವರ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಭಾವನಾ ಮತ್ತು ಯೋಗೇಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ, ಇಬ್ಬರೂ ಹತ್ಯೆಯ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾವನಾಳನ್ನು ಬಂಧಿಸಲಾಗಿದ್ದು, ಯೋಗೇಶ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಪೊಲೀಸರು ಹಲವು ತಂಡಗಳನ್ನು ರಚಿಸಿದ್ದಾರೆ.

ಭಾವನಾ ಮತ್ತು ಯೋಗೇಶ್ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries