ಪೆರ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಬಜಕೂಡ್ಲು ಅಮೃತಧಾರ ಗೋಶಾಲೆಯಲ್ಲಿ ಮೇ.16 ರಂದು ಶನಿಜಯಂತಿ ಕಾರ್ಯಕ್ರಮ ಜರಗಲಿದೆ. ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಗೋಶಾಲೆಯ ಧರ್ಮಕರ್ಮ ವಿಭಾಗದ ಪ್ರಮುಖರಾದ ವೇದಮೂರ್ತಿ ಕೇಶವಪ್ರಸಾದ ಭಟ್ ಕೂಟೇಲು ಕಾರ್ಯಕ್ರಮದ ಕುರಿತು ಮಾಹಿತಿಯನ್ನು ನೀಡಿದರು. ಶನಿ ಎಲ್ಲಾ ದೇವತೆಗಳನ್ನೂ ತನ್ನ ಪ್ರಭಾವಕ್ಕೆ ಒಳಪಡಿಸುವವನು. ಆದರೆ ಆಂಜನೇಯ ಮತ್ತು ಗಣಪತಿಯನ್ನು ಕಾಡಲು ಶನಿದೇವರಿಗೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ವೈಶಾಖ ಅಮಾವಾಸ್ಯೆಯ ಪುಣ್ಯದಿನದಂದು ಶನಿಜಯಂತಿ ಹಾಗೂ ಅಖಂಡ ಗಣಪತಿ ಅಥರ್ವಶೀರ್ಷ ಪಾರಾಯಣವನ್ನು ನಡೆಸಲು ತೀರ್ಮಾನಿಸಲಾಗಿದೆ. ಪರಾಭವ ಸಂವತ್ಸರದ ಶನಿಜಯಂತಿಗೆ ವಿಶೇಷ ಮಹತ್ವವಿದೆ. ಗಣಪತಿಯ ಜೊತೆಗೆ ಶನಿಯ ಆರಾಧನೆಯೂ ನಡೆಯುತ್ತದೆ. ಶನಿದೋಷದ ಪರಿಹಾರಕ್ಕೆ ಆಂಜನೇಯ, ಗಣಪತಿ ಆರಾಧನೆ ಮುಖ್ಯ ಎಂದರು.
ಪ್ರಾತಃಕಾಲ ಬಾಲಗಣಪತಿ ಹೋಮ, ಮೇ.16 ಸೂರ್ಯೋದಯದಿಂದ ಮರುದಿನ ಸೂರ್ಯೋದಯದ ತನಕ ನಿರಂತರ ಗಣಪತಿ ಅಥರ್ವಶೀರ್ಷ ಪಾರಾಯಣ, ನವಗ್ರಹಶಾಂತಿ, ಸಹಸ್ರ ಸಂಖ್ಯೆಯಲ್ಲಿ ಶನಿಶಾಂತಿ, ವಿವಿಧ ಸ್ತೋತ್ರಗಳ ಪಾರಾಯಣ, ಹನುಮತ್ಪಂಚರತ್ನ ಸ್ತೋತ್ರ ಪಠಣ, ಶನಿಕಲ್ಪೋಕ್ತ ಪೂಜೆ, ಗಣಪತ್ಯಥರ್ವಶೀರ್ಷ ಹೋಮ ನಡೆಯಲಿದೆ. ಗೋಶಾಲೆಯ ಪದಾಧಿಕಾರಿಗಳು, ಗೋಪ್ರೇಮಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.



