ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು ಇಂದು ಶ್ರೀದೇವರ ಪ್ರತಿಷ್ಠೆ ನಡೆಯಲಿದೆ. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶತಂತ್ರಿಗಳವರ ನೇತೃತ್ವದಲ್ಲಿ ಬುಧವಾರ ಪ್ರಾತಃಕಾಲ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರತತ್ವ ಹೋಮ, ತತ್ವಕಲಶಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ತತ್ವಕಲಶಾಭಿಷೇಕ, ಜೀವ ಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ ಶಯ್ಯೋನ್ನಯನ, ಅಂಕುರ ಪೂಜೆ, ಮಹಾಪೂಜೆ ನಡೆಯಿತು. ಸಂಜೆ ಬಿಂಬಶುದ್ಧಿಕಲಶಾಭಿಷೇಕ, ಪೀಠಾವಾಸ, ಧ್ಯಾನಾಧಿವಾಸ, ಅವಾಸ ಹೋಮ, ಅವಾಸ ಬಲಿ, ತ್ರಿಕಾಲಪೂಜೆ, ಶಿರಸ್ತತ್ವ ಹೋಮ, ಪ್ರತಿಷ್ಠಾ ಹೋಮ, ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ, ಮಹಾಪೂಜೆ ನಡೆಯಿತು.
ಇಂದು ಏ.23ರಂದು ಶ್ರೀದೇವರ ಪ್ರತಿಷ್ಠೆ :
ಪೂರ್ವಾಹ್ನ 4 ಗಂಟೆಯಿಂದ 108 ತೆಂಗಿನಕಾಯಿಯ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಪೂರ್ವಾಹ್ನ7.40ರಿಂದ 9.30ರ ಮಧ್ಯೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀದೇವರ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ. ಸಂಜೆ ನಿತ್ಯ ನೈಮಿತ್ತಿಕಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ, ಅಂಕುರಪೂಜೆ, ಸೋಪಾನ ಪೂಜೆ ನಡೆಯಲಿದೆ. ಅಪರಾಹ್ನ 4 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಶ್ರೀ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರು ದಿವ್ಯಸಾನ್ನಿಧ್ಯವಹಿಸಲಿದ್ದಾರೆ. ಬಿ.ವಸಂತ ಪೈ ಅಧ್ಯಕ್ಷತೆಯಲ್ಲಿ ವಾಗ್ಮಿ ಪಂಜ ಭಾಸ್ಕರ ಭಟ್ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಅನೇಕ ಗಣ್ಯರು ವೇದಿಯನ್ನು ಅಲಂಕರಿಸಲಿದ್ದಾರೆ.

