ಬದಿಯಡ್ಕ: ಎಲ್ಲೆಡೆ ಇರುವ ಭಗವಂತ ಶಿಲೆಯಲ್ಲಿಯೂ ಕಾಣಿಸಿಕೊಳ್ಳುತ್ತಾನೆ. ಭಕ್ತನಿಗೆ ಶುದ್ಧಭಕ್ತಿಯಿದ್ದರೆ ಗ್ರಹಿಸಿದಲ್ಲಿ ಆತನ ಕೂಗು ಕೇಳಿಸುತ್ತಾನೆ. ಹೃದಯ ದೇಗುಲದಲ್ಲಿ ಭಗವಂತನ ಪ್ರತಿಷ್ಠೆ ಆಗಬೇಕು. ಶುದ್ಧವಾದ ಮನಸ್ಸಿದ್ದರೆ ಮಾತ್ರ ಉತ್ತಮ ಆರೋಗ್ಯ ಸಿದ್ಧಿಸಲು ಸಾಧ್ಯವಿದೆ. ನಿರಂತರ ಜಪ, ಅನುಷ್ಠಾನದ ಮೂಲಕ ನಮ್ಮ ಹೃದಯದಲ್ಲಿ ರುದ್ರದೇವನ ಪ್ರತಿಷ್ಠೆಯನ್ನು ಮಾಡಬೇಕು. ಗಾಳಿ, ನೀರು, ದೇಹವನ್ನು ನೀಡಿದ ಭಗವಂತನನ್ನು ನಿತ್ಯನಿಯಮಿತವಾಗಿ ನೆನೆಯುತ್ತಿರಬೇಕು ಎಂದು ಶ್ರೀಮದ್ ಮದ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಶ್ರೀ ಅದಮಾರು ಮಠ ಉಡುಪಿಯ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭ ಗುರುವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಾಗ್ಮಿ ವಿದ್ವಾನ್.ಪಂಜ ಭಾಸ್ಕರ ಭಟ್ ಧಾರ್ಮಿಕ ಚಿಂತನೆಯ ಮಾತುಗಳನ್ನಾಡಿ, ಸತ್ಚಿಂತನೆಯ ದೇವತಾರಾಧನೆ ಯಶಸ್ವಿಯಾಗುತ್ತದೆ. ಪ್ರಾಚೀನವಾದ ಈ ದೇಗುಲದಲ್ಲಿ ನೆಲೆಸಿರುವ ಉದನೇಶ್ವರ ಎಂಬ ಹೆಸರೇ ಅರ್ಥಗರ್ಭೀತವಾಗಿದೆ. ದೇವರ ಬ್ರಹ್ಮಕಲಶದಿಂದ ನಾಡು ಸಮೃದ್ಧಿಯನ್ನು ಕಾಣುತ್ತದೆ ಎಂದು ತಿಳಿಸಿದ ಅವರು ಬ್ರಹ್ಮಕಲಶದ ಅರ್ಥ, ವಿವರಣೆಯನ್ನು ನೀಡುತ್ತಾ ಅಕ್ಕಿ, ಭತ್ತ, ಎಳ್ಳು, ಸಾಸಿವೆ ಎಂಬ ನಾಲ್ಕು ಧಾನ್ಯಗಳನ್ನು ಸಂಯೋಜಿಸಿ ಕಲಶಾಧಿವಾಸ ಮಾಡಲಾಗುತ್ತದೆ. ಕಲಶವು ನಮ್ಮ ಅಸ್ತಿಯ ಸಂಕೇತವಾಗಿದೆ. ಸುತ್ತಿದ ಬಳ್ಳಿಯು ನಮ್ಮ ನಾಡಿಯ ಪ್ರತೀಕವಾಗಿದೆ. ಕಲಶಕ್ಕೆ ಮುಚ್ಚುವ ಬಟ್ಟೆಯು ನಮ್ಮ ದೇಹವನ್ನು ವ್ಯಾಪಿಸಿದ ಚರ್ಮದ ಪ್ರತೀಕವಾಗಿದೆ ಎಂದು ಸಮಗ್ರ ವಿವರಣೆಯನ್ನು ನೀಡಿದರು.
ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನವನ್ನು ನೀಡಿದರು. ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ತಂತ್ರಿ ಡಾ. ಕೆ.ರಾಮಚಂದ್ರ ಅಡಿಗ ದಿವ್ಯ ಉಪಸ್ಥಿತರಿದ್ದು ಮಾತನಾಡಿದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಿನೇಶ್, ನಾರಂಪಾಡಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಾಸ್ತರ್ ಶಿರಂತಡ್ಕ, ನಿವೃತ್ತ ಪಶು ವೈದ್ಯ ಡಾ. ಸುನಿಲ್ ಬದಿಯಡ್ಕ, ಕಾಸರಗೋಡು ಖಜಾನೆ ಅಧಿಕಾರಿ ಲಕ್ಷ್ಮೀನಾರಾಯಣ ನಾಯ್ಕ, ಖ್ಯಾತ ವೈದ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಬದಿಯಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನರೇಂದ್ರ ಬಿ.ಎನ್. ಬದಿಯಡ್ಕ, ಉದ್ಯಮಿ ಆತ್ಮಾನಂದ ರೈ ನೆಲ್ಲಿಕುಂಜೆ, ನಾಟಿ ವೈದ್ಯ ಶ್ರೀರಾಮ ಪಟ್ಟಾಜೆ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಸಿವಿಲ್ ಇಂಜಿನಿಯರ್ ರಾಮಚಂದ್ರ ಶಾಸ್ತ್ರಿ ಬೇಳ, ಸ್ವಯಂಸೇವಕ ಸಮಿತಿ ಅಧ್ಯಕ್ಷ ನಟರಾಜ ರಾಜ್ ಪಟ್ಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಲೆಕ್ಕಪರಿಶೋಧಕ ಉಮೇಶ್ ರೈ ಮೇಗಿನಕಡಾರು ಸ್ವಾಗತಿಸಿ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ ಕಡಪ್ಪು ವಂದಿಸಿದರು. ಸಾಂಸ್ಕøತಿಕ ಸಮಿತಿ ಪ್ರಧಾನ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು.

.jpg)
.jpg)
