ಚುರಾಚಾಂದಪುರ: ಏಪ್ರಿಲ್ 24ರಂದು ಉಖ್ರುಲ್ ಜಿಲ್ಲೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿಯಾದ ಘಟನೆ ಖಂಡಿಸಿ ಕುಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ಬುಧವಾರ ಪ್ರತಿಭಟನೆ ಮತ್ತು ರ್‍ಯಾಲಿಗಳು ನಡೆದವು. ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಧ್ವನಿ ಮುದ್ರಿಕೆ ಕುರಿತು ಕಠಿಣ ಕ್ರಮ ಜರುಗಿಸಬೇಕೆಂಬುದು ಪ್ರತಿಭಟನಕಾರರು ಪ್ರಮುಖ ಬೇಡಿಕೆಯಾಗಿತ್ತು. 2024ರಲ್ಲಿ ಈ ಧ್ವನಿ ಮುದ್ರಿಕೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ತೀವ್ರಗೊಳ್ಳಲು ಕಾರಣವಾಗಿತ್ತು.
ಮಾನವ ಹಕ್ಕುಗಳಿಗಾಗಿನ ಕುಕಿ ಮಹಿಳಾ ಸಂಘಟನೆ, ಕುಕಿ ಮಹಿಳಾ ಒಕ್ಕೂಟಗಳ ನೇತೃತ್ವದಲ್ಲಿ ಚುರಾಚಾಂದಪುರ, ಕಾಂಗ್ಪೋಕ್ಪಿ, ಚಾಂದೆಲ್ ಮತ್ತು ಟೆನ್‌ಗ್ನೊಪಾಲ್ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು.
ಬಿರೇನ್ ಸಿಂಗ್ ಅವರ ಧ್ವನಿ ಮುದ್ರಿಕೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.
ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿದ್ದ ತನಿಖಾಧಿಕಾರಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಕುಕಿ ಸಮುದಾಯ ಧ್ವನಿ ಮುದ್ರಿಕೆಯ ಅನುವಾದ ಪ್ರತಿಗಳನ್ನು ಸಲ್ಲಿಸಿದೆ. ಜನಾಂಗೀಯ ಹಿಂಸಾಚಾರದ ಬಗ್ಗೆ ಮಾತನಾಡಿರುವ ವ್ಯಕ್ತಿಯ ಧ್ವನಿ ಸಿಂಗ್ ಅವರ ಧ್ವನಿ ಹೋಲುತ್ತದೆ ಎಂದು ಆರೋಪಿಸಿದೆ.
ಪ್ರತಿಭಟನೆ ನಂತರ ಕುಕಿ ಸಮುದಾಯದ ಮುಖಂಡರು ಚುರಾಚಾಂದಪುರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರವನ್ನೂ ಸಲ್ಲಿಸಿದರು. ಧ್ವನಿ ಮುದ್ರಿಕೆ ಮತ್ತು ಇತ್ತೀಚಿನ ಗುಂಡಿನ ದಾಳಿ ಸಂಬಂಧ ತಕ್ಷಣವೇ ಕಠಿಣ ಕ್ರಮ ಜರುಗಿಸಲು ಮನವಿಯಲ್ಲಿ ಆಗ್ರಹಿಸಲಾಗಿದೆ.
2023ರ ಮೇನಲ್ಲಿ ಶುರುವಾಗಿದ್ದ ಜನಾಂಗೀಯ ಹಿಂಸಾಚಾರದಲ್ಲಿ 260 ಮಂದಿ ಸಾವಿಗೀಡಾಗಿದ್ದರು. 2025ರಲ್ಲಿ ಬಿರೇನ್ ಸಿಂಗ್ ಅವರು ರಾಜೀನಾಮೆ ಸಲ್ಲಿಸಿದ್ದರು.
ರಾಷ್ಟ್ರಪತಿ ಆಳ್ವಿಕೆ ಹೇರಿದ್ದ ಕೇಂದ್ರ ಸರ್ಕಾರ ಕಳೆದ ಫೆಬ್ರುವರಿಯಲ್ಲಿ ಅದನ್ನು ತೆರವುಗೊಳಿಸಿತ್ತು. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ ಮಣಿಪುರದಲ್ಲಿ ಹಿಂಸಾಚಾರ ನಿಂತಿಲ್ಲ.

