ಪೆರ್ಲ: ಅಡ್ಕಸ್ಥಳದಲ್ಲಿ ಮಶೂರ್ ವಲಿಯುಲ್ಲಾಹಿ ದರ್ಗಾ ಶರೀಫ್‍ನ ನವೀಕೃತ ಕಟ್ಟಡವನ್ನು ಸಮಸ್ತ ಕೇರಳ ಜಮ್‍ಇಯತ್ತುಲ್ ಉಲಮದ ಅಧ್ಯಕ್ಷ ಸಯ್ಯಿದುಲ್ ಉಲಮ ಜಿಫ್ರಿ ಮುತ್ತು ಕೋಯ ತಂಙಳ್ ಉದ್ಘಾಟಿಸಿದರು. ಅವರು ಮಾತನಾಡಿ, ಧಾರ್ಮಿಕ ಸೌಹಾರ್ದತೆಯಿಂದ, ಸಹಬಾಳ್ವೆಯಿಂದ ಸರ್ವ ಧರ್ಮಿಯರೊಂದಿಗೆ ವರ್ತಿಸಬೇಕು ಎಂದು ಕರೆ ನೀಡಿದರು. ಮಹಾತ್ಮರನ್ನು ಗೌರವಿಸಬೇಕೆಂದು ಇಸ್ಲಾಂ ನಮಗೆ ಕಲಿಸಿಕೊಟ್ಟಿದೆ. ಅವರ ಬದುಕು, ತ್ಯಾಗ, ಸಂದೇಶಗಳನ್ನು ಎಲ್ಲರಿಗೂ ತಲುಪಿಸುವುದು ಉರೂಸ್ ಕಾರ್ಯಕ್ರಮದ ಆಯೋಜನೆಯಲ್ಲಿರುವ ಉದ್ದೇಶವೆಂದು ಅವರು ನುಡಿದರು.
ಜಮಾಯತ್ ಸಮಿತಿ ಗೌರವಾ ಧ್ಯಕ್ಷ ಮೀರ್ ಜಾಹಿದ್ ತಂಙಳ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಅಬ್ದು ರಹ್‍ಮಾನ್ ಮಸೂದ್ ತಂಙಳ್ ಅಲ್ ಬುಖಾರಿ, ಬೆದ್ರಂಪಳ್ಳ ನವಜೀವನ ವಿಶೇಷ ಶಾಲೆಯ ಅಸಿಸ್ಟೆಂಟ್ ಮೆನೇಜರ್ ರೆ.ಫಾ. ಅಮಲ್ ಜೋಸ್, ಶಾಸಕ ಎ.ಕೆ.ಎಂ.ಅಶ್ರಫ್ ಭಾಗವಹಿಸಿದರು. ಸೋಮಶೇಖರ ಜೆ.ಎಸ್., ಐತ್ತಪ್ಪ ಕುಲಾಲ್, ಮುಹಮ್ಮದ್ ಹಾರೀಸ್ ಸಹಿತ ಹಲವರು ಉಪಸ್ಥಿತರಿದ್ದರು. ಈ ತಿಂಗಳ 21ರ ತನಕ ನಡೆಯುವ ಉರೂಸ್‍ನ ಅಂಗವಾಗಿ 8 ದಿನಗಳ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಮೊದಲ ದಿನ ಹಮೀದ್ ಯಾಸಿನ್ ಜೌಹಾರಿ ಅಲ್ ಮದನಿ ಕೊಲ್ಲಂ ಪ್ರವಚನ ನೀಡಿದರು. ಜಮಾಯತ್ ಸಮಿತಿ ಅಧ್ಯಕ್ಷ ಸಿ.ಎ. ಅಬ್ದುಲ್ಲ ಮಾದುಮೂಲೆ ಸ್ವಾಗತಿಸಿ, ಖತೀಬ್ ಹಾಫಿಲ್ ರಾಝಿಂ ಯಮಾನಿ ಪ್ರಸ್ತಾಪಿಸಿದರು. ನಿಜಾಮ್ ಅನ್ಸಾರಿ ನಿರೂಪಿಸಿದರು.

.jpg)
.jpg)
