HEALTH TIPS

ಕೇರಳದಲ್ಲಿ ವೈರಿಗಳು, ತಮಿಳುನಾಡಿನಲ್ಲಿ ಮಿತ್ರರು; ನನ್ನಿಲಂನಲ್ಲಿ SDPI ನಾಯಕನ ಪರ ಕಾಂಗ್ರೆಸ್-ಸಿಪಿಎಂ ಪ್ರಚಾರ!

ಚೆನ್ನೈ: ಚುನಾವಣಾ ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗುವಂಥ ಬೆಳವಣಿಗೆ ತಮಿಳುನಾಡಿನಲ್ಲಿ ಕಂಡುಬಂದಿದೆ. ಕೇರಳದಲ್ಲಿ ಪರಸ್ಪರ ಎದುರಾಳಿಗಳಾಗಿ ಹೋರಾಡುವ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು, ತಮಿಳುನಾಡಿನ ತಿರುವಾರೂರು ಜಿಲ್ಲೆಯ ನನ್ನಿಲಂ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ವೇದಿಕೆಯಲ್ಲಿ ಸೇರಿ ಪ್ರಚಾರ ನಡೆಸುತ್ತಿರುವುದು ಗಮನ ಸೆಳೆಯುತ್ತಿದೆ.

ಇದಕ್ಕಿಂತಲೂ ವಿಶೇಷವೆಂದರೆ, ಈ ಎರಡೂ ಪಕ್ಷಗಳು SDPI ರಾಜ್ಯಾಧ್ಯಕ್ಷ ನೆಲ್ಲೈ ಮುಬಾರಕ್ ( V.M.S. Mohammed Mubarak )ಪರವಾಗಿ ಒಗ್ಗಟ್ಟಿನಿಂದ ಮತಯಾಚನೆ ಮಾಡುತ್ತಿವೆ. ಈ ಬೆಳವಣಿಗೆ ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಂದರೆ SDPI ಪಕ್ಷ ತಮಿಳುನಾಡಿನಲ್ಲಿ ಆಡಳಿತಾರೂಢ DMK ನೇತೃತ್ವದ ಮೈತ್ರಿಕೂಟದ ಭಾಗವಾಗಿದೆ.

ನನ್ನಿಲಂ ಕ್ಷೇತ್ರದಲ್ಲಿ SDPI ತಮಿಳುನಾಡು ಘಟಕದ ಅಧ್ಯಕ್ಷ ನೆಲ್ಲೈ ಮುಬಾರಕ್ ಕಣಕ್ಕಿಳಿದಿದ್ದಾರೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅವರು ಕಣದಲ್ಲಿರುವುದು DMK ಅಭ್ಯರ್ಥಿಯಾಗಿ. ಅವರ ಚುನಾವಣಾ ಚಿಹ್ನೆ DMKಯ ಉದಯಿಸುತ್ತಿರುವ ಸೂರ್ಯ. ಹಾಗಾಗಿ ಚುನಾವಣಾ ಆಯೋಗದ ಪ್ರಕಾರ ಮುಬಾರಕ್ ಅವರು DMK ಅಭ್ಯರ್ಥಿ. ಇವರಿಗೆ ಆಡಳಿತಾರೂಢ DMK ನೇತೃತ್ವದ ಮೈತ್ರಿಕೂಟ ಬೆಂಬಲ ಘೋಷಿಸಿದೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ್ ಸೇರಿದಂತೆ ಹಲವು ಪ್ರಮುಖ ಪಕ್ಷಗಳಿವೆ. ಈ ಎಲ್ಲ ಪಕ್ಷಗಳ ನಾಯಕರು ಈಗ DMK ಅಭ್ಯರ್ಥಿಯಾಗಿರುವ SDPI ರಾಜ್ಯಾಧ್ಯಕ್ಷನ ಗೆಲುವಿಗಾಗಿ ಶ್ರಮಿಸುತ್ತಿವೆ.

ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಬದ್ಧ ವಿರೋಧಿಗಳು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ SDPI ಯಾರಿಗೆ ಬೆಂಬಲ ನೀಡಿದೆ ಎಂಬ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳೂ ತೀವ್ರವಾಗಿದ್ದವು. ಆದರೆ ತಮಿಳುನಾಡಿನಲ್ಲಿ ರಾಜಕೀಯ ಸಮೀಕರಣ ಸಂಪೂರ್ಣ ಬೇರೆಯೇ ಆಗಿದ್ದು , ನನ್ನಿಲಂನ ಬೀದಿ ಬೀದಿಗಳಲ್ಲಿ ಕಾಂಗ್ರೆಸ್‌ ನ ಕೈ ಚಿಹ್ನೆ ಮತ್ತು ಸಿಪಿಎಂನ ಕುಡುಗೋಲು-ಸುತ್ತಿಗೆ ಚಿಹ್ನೆಗಳು SDPI ಹಾಗು DMK ಧ್ವಜದೊಂದಿಗೆ ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿವೆ.

ಪ್ರಚಾರ ವಾಹನಗಳಲ್ಲಿ DMK ನಾಯಕ ಎಂ.ಕೆ. ಸ್ಟಾಲಿನ್ ಅವರ ಭಾವಚಿತ್ರದೊಂದಿಗೆ ಮೈತ್ರಿ ಪಕ್ಷಗಳ ಚಿಹ್ನೆಗಳೂ ರಾರಾಜಿಸುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ SDPI ನಾಯಕರು, "ತಮಿಳುನಾಡಿನಲ್ಲಿ ನಾವು ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಮುಖ್ಯ ಗುರಿ ಬಿಜೆಪಿ ಹಾಗೂ AIADMK ಮೈತ್ರಿಯನ್ನು ಸೋಲಿಸುವುದು" ಎಂದು ತಿಳಿಸಿದ್ದಾರೆ.


Photo Credit ; X

ನನ್ನಿಲಂ ಕ್ಷೇತ್ರದಲ್ಲಿ ನೆಲ್ಲೈ ಮುಬಾರಕ್ ಅವರಿಗೆ ಎದುರಾಳಿಯಾಗಿ AIADMKಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್. ಕಾಮರಾಜ್ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿರುವುದರಿಂದ DMK ಮೈತ್ರಿಕೂಟದ ಬೆಂಬಲ ಮುಬಾರಕ್ ಅವರಿಗೆ ಬಲ ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

DMK ನೇತೃತ್ವದ ಮೈತ್ರಿಕೂಟದಲ್ಲಿ ಒಟ್ಟು 23ಕ್ಕೂ ಹೆಚ್ಚು ಸಣ್ಣಪಕ್ಷಗಳೂ ಸೇರಿಕೊಂಡಿವೆ. ಸಿಪಿಎಂ ಪ್ರಭಾವ ಹೆಚ್ಚಿರುವ ಈ ಭಾಗದಲ್ಲಿ ಕಾರ್ಮಿಕರು ಮತ್ತು ಕೃಷಿಕರ ಮತಗಳು ನಿರ್ಣಾಯಕವಾಗಿವೆ. ಕಳೆದ ಮೂರು ಚುನಾವಣೆಯಲ್ಲಿ AIADMK ಜಯಗಳಿಸಿರುವ ಹಿನ್ನೆಲೆಯಲ್ಲಿ, ಈ ಬಾರಿ ಆ ಕೋಟೆಯನ್ನು ಭೇದಿಸಲು SDPI, ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ರಾಜಕೀಯ ಅನಿವಾರ್ಯತೆ ಅಥವಾ ಸೈದ್ಧಾಂತಿಕ ಹೊಂದಾಣಿಕೆಯ ಹೊರತಾಗಿ ನನ್ನಿಲಂ ಕ್ಷೇತ್ರ ಈಗ ತಮಿಳುನಾಡಿನ ಚುನಾವಣೆಯಲ್ಲಿ ಪ್ರಮುಖ 'ಹಾಟ್ ಸ್ಪಾಟ್' ಆಗಿ ಹೊರಹೊಮ್ಮಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries