ಜಬಲ್ಪುರ್: ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿ ಪ್ರವಾಸಿಗರಿದ್ದ ದೋಣಿ ಮಗುಚಿದ ದುರಂತದಲ್ಲಿ ಕಾಣೆಯಾಗಿರುವ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಜಿಲ್ಲೆಯ ಬಾರ್ಗಿ ಜಲಾಶಯದಲ್ಲಿ 41 ಮಂದಿ ಪ್ರಯಾಣಿಕರಿದ್ದ ದೋಣಿ ಮಗುಚಿ 9 ಮಂದಿ ಸಾವಿಗೀಡಾಗಿದ್ದು, 28 ಮಂದಿಯನ್ನು ಗುರುವಾರ ರಾತ್ರಿ ರಕ್ಷಿಸಲಾಗಿದೆ.
ಮೂವರು ಮಕ್ಕಳು ಹಾಗೂ ಒಬ್ಬ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯದಲ್ಲಿ ಶೋಧದ ವ್ಯಾಪ್ತಿಯನ್ನು 5 ಕಿ.ಮೀಗೆ ವಿಸ್ತರಿಸಲಾಗಿದೆ. ಸೇನೆಯ 20 ಮುಳುಗುತಜ್ಞರು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿಯು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ ಎಂದರು.
ಖಮರಿಯಾದಲ್ಲಿರುವ ಕಾರ್ಖಾನೆಯೊಂದರ ಉದ್ಯೋಗಿ ಕಾಮರಾಜ್ ಹಾಗೂ ಇವರ ಮಗ ತಮಿಳ್ (5) ಹಾಗೂ ವಿಜಯ್ ಸೋನಿ (6) ಮತ್ತು ಮಯೂರಂ (5) ಕಾಣೆಯಾಗಿರುವವರು.
ಸುರಕ್ಷತಾ ಲೋಪಗಳ ಆರೋಪದ ಬಳಿಕ ಪ್ರವಾಸೋದ್ಯಮ ಇಲಾಖೆಯ ಮೂವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

