ಗುವಾಹಟಿ: ಅಸ್ಸಾಮಿನ ರಾಜಧಾನಿ ಗುವಾಹಟಿಯ ಹಲವು ಭಾಗಗಳಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ದಿಢೀರ್ ನೆರೆಯುಂಟಾಗಿದ್ದು, ಸಾಮಾನ್ಯ ಜನಜೀವನವು ಅಸ್ತವ್ಯಸ್ತಗೊಂಡಿದೆ. ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮೇಘಾಲಯದ ಬೆಟ್ಟಗಳಿಂದ ಹರಿದು ಬಂದ ನೀರು ಮತ್ತು ವಸಿಷ್ಠ ನದಿಯ ನೀರಿನ ಮಟ್ಟ ಹೆಚ್ಚಾಗಿರುವುದು ಈ ಪ್ರವಾಹಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಅಸ್ಸಾಮಿನ ಪ್ರವಾಹ ಪರಿಸ್ಥಿತಿ ರವಿವಾರ ತೀವ್ರವಾಗಿ ಹದಗೆಟ್ಟಿದ್ದು, ನೆರೆನೀರು ಪೂರ್ವ ಮತ್ತು ಅಪ್ಪರ್ ಅಸ್ಸಾಮಿನಾದ್ಯಂತ ವ್ಯಾಪಿಸಿದೆ. ನೂರಾರು ಹಳ್ಳಿಗಳು ಜಲಾವೃತಗೊಂಡಿದ್ದು, ರೈಲು ಸಂಪರ್ಕ ಕಡಿತಗೊಂಡಿದೆ. ರಕ್ಷಣಾ ಪ್ರಯತ್ನಗಳು ತೀವ್ರಗೊಂಡಿದ್ದು, ಭಾರತೀಯ ಸೇನೆಯು 'ಆಪರೇಷನ್ ಜಲ್ ರಾಹತ್' ಅನ್ನು ಆರಂಭಿಸಿದೆ.
ಪ್ರವಾಹವು 12 ಜಿಲ್ಲೆಗಳು, 30 ಕಂದಾಯ ವಲಯಗಳು ಮತ್ತು 580 ಗ್ರಾಮಗಳ ಮೇಲೆ ಪರಿಣಾಮ ಬೀರಿದ್ದು,1.7 ಲಕ್ಷಕ್ಕೂ ಹೆಚ್ಚು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. 10,362 ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪೈರುಗಳು ನೀರಿನಲ್ಲಿ ಮುಳುಗಿವೆ. ಇದರೊಂದಿಗೆ ಕಾಮರೂಪ್ (ಮೆಟ್ರೋ)ನ ಹಲವಾರು ಭಾಗಗಳಿಗೂ ಪ್ರವಾಹದ ನೀರು ನುಗ್ಗಿದೆ.
ಶಿವಸಾಗರ, ಚರೈಡಿಯೋ ಮತ್ತು ಜೋರ್ಹತ್ ಜಿಲ್ಲೆಗಳು ಅತ್ಯಂತ ತೀವ್ರವಾಗಿ ಬಾಧಿತವಾಗಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿಶಾಲವಾದ ಭೂಪ್ರದೇಶಗಳು ಜಲಾವೃತಗೊಂಡಿವೆ. ಕನಿಷ್ಠ ಎರಡು ಒಡ್ಡುಗಳು ಒಡೆದುಹೋಗಿವೆ ಮತ್ತು ಹಲವಾರು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ಕೆಲವು ಕಡೆಗಳಲ್ಲಿ ಪ್ರವಾಹದ ನೀರು ರೈಲ್ವೆ ಹಳಿಗಳನ್ನು ಹಾನಿಗೊಳಿಸಿದ್ದು, ರೈಲು ಸೇವೆಗಳಿಗೆ ಅಡ್ಡಿಯುಂಟುಮಾಡಿದೆ ಮತ್ತು ಅಪ್ಪರ್ ಅಸ್ಸಾಮಿನಾದ್ಯಂತ ಸಂಪರ್ಕದ ಮೇಲೆ ಪರಿಣಾಮ ಬೀರಿದೆ.
ಗುವಾಹಟಿಯಲ್ಲಿ ಗಂಟೆಗಟ್ಟಲೆ ಸುರಿದ ನಿರಂತರ ಮಳೆಯಿಂದಾಗಿ ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು ಪೀಠೋಪಕರಣಗಳು, ಅಡುಗೆಮನೆಯ ಉಪಕರಣಗಳು ಮತ್ತು ಇತರ ಅಗತ್ಯ ವಸ್ತುಗಳು ಹಾನಿಗೀಡಾಗಿವೆ.

