ಮುರ್ಮುಗೆ ಒಂದು ಮತ: ಕೇರಳ ಬಿಜೆಪಿಗೆ ಸಂಭ್ರಮ; ಸಿಪಿಎಂ, ಕಾಂಗ್ರೆಸ್‌ಗೆ ಅಚ್ಚರಿ

            ತಿರುವನಂತಪುರ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪರ ಕೇರಳದಲ್ಲಿ ಅನಿರೀಕ್ಷಿತವಾಗಿ ಒಂದು ಮತ ಚಲಾವಣೆಯಾಗಿರುವುದು ಬಿಜೆಪಿ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

                ಮತ್ತೊಂದೆಡೆ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ದೂಷಣೆ ಮಾಡಿಕೊಳ್ಳುವಂತೆ ಮಾಡಿದೆ.

                  140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಎನ್‌ಡಿಎ ಪ್ರತಿನಿಧಿಗಳೇ ಇಲ್ಲ. ಹೀಗಾಗಿ ಎಲ್ಲ ಮತಗಳೂ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಪರವೇ ಚಲಾವಣೆಯಾಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮುರ್ಮು ಅವರಿಗೆ 152 ಮೌಲ್ಯದೊಂದಿಗೆ ಒಂದು ಮತ ದೊರೆತಿದೆ. ವಿಶೇಷವೆಂದರೆ, ಅವರು ಪ್ರಚಾರಕ್ಕಾಗಿ ಕೇರಳಕ್ಕೆ ಭೇಟಿಯನ್ನೇ ನೀಡಿರಲಿಲ್ಲ.

               ರಾಜ್ಯದ ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರು ತಮ್ಮ ಪಕ್ಷದ ಯಾವ ಶಾಸಕ ಕೂಡ ಮುರ್ಮು ಪರ ಮತ ಚಲಾಯಿಸಿರಲಾರ ಎಂದೇ ಹೇಳುತ್ತಿವೆ.

                  ಆರ್‌ಎಸ್‌ಎಸ್ ಜತೆಗಿನ ನಂಟಿಗೆ ಸಂಬಂಧಿಸಿ ಸಿಪಿಎಂ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಇಂಥ ಸಂದರ್ಭದಲ್ಲೇ ಮುರ್ಮುಗೆ ಕೇರಳದಲ್ಲಿ ಒಂದು ಮತ ದೊರೆತಿದೆ. ರಹಸ್ಯ ಮತ ಚಲಾವಣೆಯಾಗಿರುವುದರಿಂದ ಸದ್ಯ ಉಭಯ ಪಕ್ಷಗಳು ತಮ್ಮ ಪಕ್ಷದ ಶಾಸಕ ಮತ ಚಲಾಯಿಸಿಲ್ಲ ಎನ್ನುತ್ತಿವೆ.

                 ತಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕ ಇಲ್ಲದಿದ್ದರೂ ರಾಜ್ಯದಲ್ಲಿ ಮುರ್ಮು ಅವರಿಗೆ ಒಂದು ಮತ ದೊರೆತಿರುವುದು ಮೋದಿ ಸರ್ಕಾರಕ್ಕೆ ಮೌನ ಬೆಂಬಲ ದೊರೆಯುತ್ತಿದೆ ಎಂಬುದರ ಸಂಕೇತ ಎಂದು ಬಿಜೆಪಿ ಬಣ್ಣಿಸಿದೆ.

                         ಮುರ್ಮು ಅವರಿಗೆ ದೊರೆತ ಒಂದು ಮತ ಇತರ ಎಲ್ಲ 139 ಮತಗಳಿಗಿಂತ ಮಿಗಿಲಾದದ್ದು ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಬಣ್ಣಿಸಿದ್ದಾರೆ.

                     ಏನು ಹೇಳುತ್ತಿದೆ ಜೆಡಿಎಸ್?

               ಜತದಾ ದಳ (ಜಾತ್ಯತೀತ) ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ಜತೆ ಮೈತ್ರಿ ಮಾಡಿಕೊಂಡಿದೆ. ಈ ಪಕ್ಷದ ರಾಷ್ಟ್ರೀಯ ನಾಯಕತ್ವವು ಮುರ್ಮು ಅವರನ್ನು ಬೆಂಬಲಿಸುವುದಾಗಿ ಹಿಂದೆಯೇ ಘೋಷಿಸಿತ್ತು. ಆದಾಗ್ಯೂ, ಕೇರಳದಲ್ಲಿ ಎಡಪಕ್ಷಗಳ ನಿಲುವನ್ನೇ ಬೆಂಬಲಿಸುವುದಾಗಿಯೂ ಇಬ್ಬರು ಶಾಸಕರು ಸಿನ್ಹಾ ಅವರನ್ನು ಬೆಂಬಲಿಸಲಿದ್ದಾರೆ ಎಂದೂ ಹೇಳಿತ್ತು.

                         ನಮ್ಮ ಪಕ್ಷದ ಶಾಸಕರು ಮುರ್ಮು ಪರ ಮತ ಚಲಾಯಿಸಿರುವ ಸಾಧ್ಯತೆಯೇ ಇಲ್ಲ ಎಂದು ಕೇರಳ ಜೆಡಿಎಸ್ ನಾಯಕ ನೀಲಲೋಹಿತದಾಸನ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ. ರಾಜ್ಯ ಘಟಕವು ಆಡಳಿತಾರೂಢ ಎಲ್‌ಡಿಎಫ್ ನಿಲುವನ್ನು ಬೆಂಬಲಿಸಲು ಹಿಂದೆಯೇ ನಿರ್ಧರಿಸಿತ್ತು. ಯಾಕೆಂದರೆ ರಾಜ್ಯದಲ್ಲಿ ಎಲ್‌ಡಿಎಫ್‌ ಬೆಂಬಲದಿಂದಲೇ ಪಕ್ಷಕ್ಕೆ ಸ್ಥಾನ ಗಳಿಸುವುದು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

                             ಕಾಂಗ್ರೆಸ್, ಎಡಪಕ್ಷಗಳು ಹೇಳುವುದೇನು?

            ರಾಷ್ಟ್ರಪತಿ ಚುನಾವಣೆಯಲ್ಲಿ ನಿಜವಾಗಿ ಏನು ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕ ವಿ.ಡಿ. ಸತೀಶ್ ಹೇಳಿದ್ದಾರೆ. ಸರಿಯಾಗಿ ಮಾಹಿತಿ ಇಲ್ಲದೆ ಯಾರನ್ನೂ ಅವಮಾನಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

               ಅಡ್ಡಮತದಾನದ ಬಗ್ಗೆ ಅನುಮಾನವಿದೆಯೇ ಮತ್ತು ಆ ಕುರಿತು ತನಿಖೆ ನಡೆಸಲಾಗುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಪಿಐ(ಎಂ) ಕಾರ್ಯದರ್ಶಿ ಬಾಲಕೃಷ್ಣನ್, ಅದು ಹೇಗೆ ಸಾಧ್ಯ ಎಂದು ಮರುಪ್ರಶ್ನೆ ಹಾಕಿದ್ದಾರೆ.

                  ನಿರ್ದಿಷ್ಟವಾಗಿ ಯಾವ ಶಾಸಕರ ಮೇಲಾದರೂ ಅನುಮಾನ ಇದೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು, 'ಇದನ್ನು ಪತ್ತೆ ಮಾಡಲು ನಿಮಗೆ ಏನಾದರೂ ಪರಿಹಾರ ಗೊತ್ತಿದ್ದರೆ' ತಿಳಿಸಿ ಎಂದು ಉತ್ತರಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries