HEALTH TIPS

ಭಾರತದಲ್ಲೇಕೆ ಮಹಿಳೆಯರು ಮತ್ತು ಮುಸ್ಲಿಮರು ಕಡಿಮೆ ಆದಾಯವನ್ನು ಗಳಿಸುತ್ತಾರೆ?

             ಭಾರತೀಯ ಮಹಿಳೆಯರು ಉದ್ಯೋಗ ಮಾರುಕಟ್ಟೆಯಲ್ಲಿ ತಾರತಮ್ಯವನ್ನು ಎದುರಿಸುತ್ತಾರೆ ಮತ್ತು ಪುರುಷರಿಗೆ ಸಮನಾಗಿ ವಿದ್ಯಾರ್ಹತೆ ಹಾಗೂ ಅನುಭವವನ್ನು ಹೊಂದಿದ್ದರೂ ಅವರಿಗಿಂತ ಕಡಿಮೆ ಆದಾಯವನ್ನು ಗಳಿಸುತ್ತಾರೆ ಎಂದು ಆಕ್ಸ್‌ಫಾಮ್ ಇಂಡಿಯಾದ ತಾರತಮ್ಯ ವರದಿ 2022 (Oxfam discrimination report) ಹೇಳಿದೆ.

                  ಮಹಿಳೆಯರ ಕಡಿಮೆ ವೇತನಕ್ಕೆ ಸಾಮಾಜಿಕ ಮತ್ತು ಉದ್ಯೋಗದಾತರ ಪೂರ್ವಾಗ್ರಹಗಳು ಕಾರಣ ಎಂದು ದೂರಿರುವ ವರದಿಯು, ಕಡೆಗಣಿಸಲ್ಪಟ್ಟ ಸಮುದಾಯಗಳೂ ಉದ್ಯೋಗ ಮಾರುಕಟ್ಟೆಯಲ್ಲಿ ತಾರತಮ್ಯಕ್ಕೆ ತುತ್ತಾಗಿವೆ ಎಂದು ಹೇಳಿದೆ. ಜಾತಿ ವ್ಯವಸ್ಥೆಯ ತಳದಲ್ಲಿರುವವರು, ಬುಡಕಟ್ಟು ಜನರು ಮತ್ತು ಮುಸ್ಲಿಮರು ಇವುಗಳಲ್ಲಿ ಸೇರಿದ್ದಾರೆ.

              ಸಮಾನ ಸಾಮರ್ಥ್ಯಗಳನ್ನು ಹೊಂದಿರುವ ಜನರು ತಮ್ಮ ಗುರುತು ಅಥವಾ ಸಾಮಾಜಿಕ ಹಿನ್ನೆಲೆಯಿಂದಾಗಿ ವಿಭಿನ್ನವಾಗಿ ಪರಿಗಣಿಸಲ್ಪಡುವುದು ಉದ್ಯೋಗ ಮಾರುಕಟ್ಟೆಯಲ್ಲಿನ ತಾರತಮ್ಯವಾಗಿದೆ ಎಂದು ವರದಿಯಲ್ಲಿ ಹೇಳಿರುವ ಆಕ್ಸ್‌ಫಾಮ್ ಇಂಡಿಯಾದ ಸಿಇಒ ಅಮಿತಾಭ್ ಬೆಹರ್, ಮಹಿಳೆಯರು ಮತ್ತು ಇತರ ಸಾಮಾಜಿಕ ವರ್ಗಗಳ ಅಸಮಾನತೆಗೆ ಕೇವಲ ಶಿಕ್ಷಣ ಮತ್ತು ಅನುಭವದ ಕೊರತೆ ಕಾರಣವಲ್ಲ, ತಾರತಮ್ಯವು ಅದಕ್ಕೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

                ಆಕ್ಸ್‌ಫಾಮ್‌ನ ತಂಡವು 2004ರಿಂದ 2020ರವರೆಗಿನ ಅವಧಿಯಲ್ಲಿ ವಿವಿಧ ಸಾಮಾಜಿಕ ಗುಂಪುಗಳಲ್ಲಿ ಉದ್ಯೋಗಗಳು, ವೇತನಗಳು, ಆರೋಗ್ಯ ಮತ್ತು ಕೃಷಿ ಸಾಲ ಲಭ್ಯತೆ ಕುರಿತು ಸರಕಾರಿ ದತ್ತಾಂಶಗಳನ್ನು ಗಮನಕ್ಕೆ ತೆಗೆದುಕೊಂಡಿತ್ತು ಹಾಗೂ ತಾರತಮ್ಯವನ್ನು ಅಳೆಯಲು ಸಂಖ್ಯಾಶಾಸ್ತ್ರೀಯ ಮಾದರಿಗಳನ್ನು ಬಳಸಿತ್ತು.

                ಪ್ರತಿ ತಿಂಗಳು ಸರಾಸರಿಯಾಗಿ ಪುರುಷರು ಮಹಿಳೆಯರಿಗಿಂತ 4,000 ರೂ.ಗಳನ್ನು ಹೆಚ್ಚು ಗಳಿಸುತ್ತಾರೆ, ಮುಸ್ಲಿಮೇತರರು ಮುಸ್ಲಿಮರಿಗಿಂತ 7,000 ರೂ.ಹೆಚ್ಚು ಗಳಿಸುತ್ತಾರೆ ಹಾಗೂ ಜಾತಿ ವ್ಯವಸ್ಥೆಯ ತಳದಲ್ಲಿರುವವರು ಮತ್ತು ಬುಡಕಟ್ಟು ಜನರು ಇತರರಿಗಿಂತ 5,000 ರೂ. ಕಡಿಮೆ ಗಳಿಸುತ್ತಾರೆ ಎನ್ನುವುದು ಆಕ್ಸ್‌ಫಾಮ್ ಅಧ್ಯಯನದಲ್ಲಿ ಕಂಡು ಬಂದಿದೆ.

                ಲಿಂಗಭೇದಕ್ಕಾಗಿ ಭಾರತವು ಆಗಾಗ್ಗೆ ಟೀಕೆಗಳಿಗೆ ಗುರಿಯಾಗುತ್ತಿರುತ್ತದೆ. ಪ್ರತಿವರ್ಷ ಸಾವಿರಾರು ಹೆಣ್ಣುಭ್ರೂಣಗಳನ್ನು ಕೊಲ್ಲಲಾಗುತ್ತಿದೆ, ಇದು ಲಿಂಗಾನುಪಾತದಲ್ಲಿ ತೀವ್ರ ವ್ಯತ್ಯಾಸಕ್ಕೆ ಕಾರಣವಾಗುತ್ತಿದೆ. ಹೆಚ್ಚಿನ ಮಹಿಳೆಯರು ತಮ್ಮ ಜನ್ಮದಿಂದಲೇ ತಾರತಮ್ಯ, ಪೂರ್ವಾಗ್ರಹ, ಹಿಂಸೆ ಮತ್ತು ಕಡೆಗಣನೆಯನ್ನು ಬದುಕಿನುದ್ದಕ್ಕೂ ಎದುರಿಸುತ್ತಲೇ ಇರುತ್ತಾರೆ. ಶ್ರಮಿಕ ವರ್ಗದಲ್ಲಿ ಲಿಂಗ ಅಸಮಾನತೆಯಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ, ಸಾಮಾನ್ಯವಾಗಿ ಈ ವರ್ಗದಲ್ಲಿ ಮಹಿಳೆಯರ ಸಂಖ್ಯೆ ತುಂಬ ಕಡಿಮೆಯಾಗಿದೆ.

               ಸರಕಾರದ ದತ್ತಾಂಶಗಳಂತೆ 2021ರಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಕೇವಲ ಶೇ.25.1ರಷ್ಟಿತ್ತು. ಇದು ಬ್ರೆಝಿಲ್, ರಶ್ಯಾ, ಚೀನಾ ಮತ್ತು ದ. ಆಫ್ರಿಕಾದಂತಹ ಹಲವಾರು ದೇಶಗಳಿಗಿಂತ ಗಣನೀಯವಾಗಿ ಕಡಿಮೆಯಿರುವುದು ಮಾತ್ರವಲ್ಲ, ದೇಶದೊಳಗೂ 2004-05ರಲ್ಲಿದ್ದ ಶೇ.42.7ರಿಂದ ತೀವ್ರ ಕುಸಿತವಾಗಿದೆ.

                     ಇದು ಈ ಅವಧಿಯಲ್ಲಿ ಭಾರತದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ ಆಗುತ್ತಿದ್ದರೂ ಶ್ರಮಿಕ ವರ್ಗದಿಂದ ಮಹಿಳೆಯರ ಹಿಂದೆಗೆತವನ್ನು ತೋರಿಸುವುದರಿಂದ ಕಳವಳಕ್ಕೆ ಕಾರಣವಾಗಿದೆ ಎಂದು ಆಕ್ಸ್‌ಫಾಮ್ ಹೇಳಿದೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್ ಲಾಕ್‌ಡೌನ್‌ಗಳಿಂದಾಗಿ ಈ ಪ್ರವೃತ್ತಿ ಹೆಚ್ಚಾಗಿರಬಹುದು, ಆಗ ಉದ್ಯೋಗಗಳು ವಿರಳವಾಗಿದ್ದವು, ಮಹಿಳೆಯರು ಉದ್ಯೋಗ ಮಾರುಕಟ್ಟೆಯಿಂದ ಹೊರಕ್ಕೆ ತಳ್ಳಲ್ಪಟ್ಟಿದ್ದರು.

                ಉತ್ತಮ ಅರ್ಹತೆಯಿದ್ದೂ ಕೌಟುಂಬಿಕ ಜವಾಬ್ದಾರಿಗಳು ಅಥವಾ ಸಾಮಾಜಿಕ ಸ್ಥಾನಮಾನದಿಂದಾಗಿ ಉದ್ಯೋಗಕ್ಕೆ ಸೇರಲು ಬಯಸದ ಮಹಿಳೆಯರ ದೊಡ್ಡ ವರ್ಗವು ಅಸ್ತಿತ್ವದಲ್ಲಿದೆ ಎನ್ನುವುದನ್ನು ಈ ಅತಿಯಾದ ತಾರತಮ್ಯವು ಅತ್ಯುತ್ತಮವಾಗಿ ವಿವರಿಸುತ್ತದೆ ಎಂದು ವರದಿಯು ತಿಳಿಸಿದೆ.

              ಮಹಿಳೆಯರಲ್ಲದೆ ದಲಿತರು,ಬುಡಕಟ್ಟು ಜನರು ಮತ್ತು ಮುಸ್ಲಿಮರಂತಹ ಧಾರ್ಮಿಕ ಅಲ್ಪಸಂಖ್ಯಾತರಂತಹ ಐತಿಹಾಸಿಕವಾಗಿ ದಮನಿತ ಗುಂಪುಗಳು ಕೂಡ ಉದ್ಯೋಗಗಳು,ಜೀವನೋಪಾಯಗಳು ಮತ್ತು ಕೃಷಿ ಸಾಲವನ್ನು ಪಡೆಯುವಲ್ಲಿ ತಾರತಮ್ಯವನ್ನು ಎದುರಿಸುತ್ತಿರುವುದು ಮುಂದುವರಿದಿದೆ ಎಂದು ಆಕ್ಸ್‌ಫಾಮ್ ವರದಿಯು ಎತ್ತಿ ತೋರಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries