ಅಂತಾರಾಜ್ಯ ಸಂಪರ್ಕದ ಪಿಡಬ್ಲ್ಯೂಡಿ ರಸ್ತೆ ಶಿಥಿಲ: ಇಲಾಖೆ ನಿರ್ಲಕ್ಷ್ಯಕ್ಕೆ ನಾಗರಿಕರ ಆಕ್ರೋಶ

    

           ಪೆರ್ಲ: ಎಣ್ಮಕಜೆ ಪಂಚಾಯಿತಿಯ ಅತ್ಯಂತ ಹಿಂದುಳಿದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ವಾಣಿನಗರದ ಸರಳಿಮೂಲೆಯಿಂದ ಈಂದುಮೂಲೆಗೆ ಸಂಪರ್ಕ ಕಲ್ಪಿಸುವ ಪಿಡಬ್ಲೂಡಿ ರಸ್ತೆಯೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡುಬೆಳೆದು ಹಾಳಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ತನ್ನ ಅಧೀನಕ್ಕೆ ತೆಗೆದುಕೊಂಡು ಡಾಂಬರೀಕರಣ ನಡೆಸಿದ್ದರೂ, ನಂತರ ಇತ್ತ ಮುಖ ಮಾಡಿಲ್ಲ. ಪೆರ್ಲ ಸನಿಹದ ಸ್ವರ್ಗದಿಂದ ವಾಣೀನಗರ ಮೂಲಕ ಕಿನ್ನಿಂಗಾರು ತೆರಳುವ ಹಾದಿ ಮಧ್ಯೆ ಸರಳಿಮೂಲೆಯಿಂದ ಎಡಕ್ಕೆ ಚಿಪ್ಲುಕೋಟೆ ಮೂಲಕ ಈಂದುಮೂಲೆಯಾಗಿ ಬೆಳ್ಳೂರು ಪಂಚಾಯಿತಿಗೆ ಸಂಪರ್ಕ ಕಲ್ಪಿಸುತ್ತದೆ.  ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹಾ ಪ್ರದೇಶದ ಮೂಲಕ ಗಿಳಿಯಾಲು ಹಾದಿಯಾಗಿ ಆರ್ಲಪದವಿಗೂ ಈ ರಸ್ತೆ ಸಂಪರ್ಕ ಕಲ್ಪಿಸುತ್ತಿದೆ. 

          ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಸಂಚರಿಸುವ ಈ ರಸ್ತೆಯ ದುರಸ್ತಿಗೆ ಮುಂದಾಗದಿರುವುದರಿಂದ ಗ್ರಾಮೀಣ ಪ್ರದೇಶದ ಹೆಚ್ಚು ಜನರಿಗೆ ಪ್ರಯೋಜನಪ್ರದವಾದ ರಸ್ತೆಯೊಂದು ಶಿಥಿಲಾವಸ್ಥೆಯಲ್ಲಿದೆ. ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಈಂದುಮೂಲೆ, ಚಿಪ್ಲುಕೋಟೆ ಸೇರಿದಂತೆ ವಿವಿಧೆಡೆಯಿಂದ ಹಲವು ವಿದ್ಯಾರ್ಥಿಗಳು ಇದೇ ಹಾದಿಯಾಗಿ ಆಗಮಿಸುತ್ತಿದ್ದಾರೆ. ಶಿಥಿಲಗೊಂಡ ರಸ್ತೆಯಲ್ಲಿ ಶಾಲಾ ವಾಹನ ಚಲಾಯಿಸುವುದು ಸವಾಲಿನ ಕೆಲಸವಾಗುತ್ತಿದೆ ಎಂಬುದಾಗಿ ಶಾಲಾ ವಾಹನ ಚಾಲಕರು ಅಲವತ್ತುಕೊಳ್ಳುತ್ತಿದ್ದಾರೆ.


                      ಊರವರಿಂದಲೇ ದುರಸ್ತಿ:

         ರಸ್ತೆ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಪ್ರಯೋಜನವಾಗದಿದ್ದಾಗ ಊರ ನಾಗರಿಕರು, ಶಾಲಾ ಅಧ್ಯಾಪಕ ಸಿಬ್ಬಂದಿ ವರ್ಗದವರು ಖುದ್ದಾಗಿ ರಸ್ತೆ ಶುಚೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಲ ವಾಹನವನ್ನೇ ನಿಲ್ಲಿಸಿ ರಸ್ತೆಗೆ ಚಾಚಿದ ರೆಂಬೆಗಳನ್ನು ಕಡಿದು ತೆಗೆದಿದ್ದಾರೆ. ಶುಚೀಕರಣ ಕಾರ್ಯಕ್ಕೆ ಬೆಳ್ಳೂರು ಗ್ರಾಪಂ ಸದಸ್ಯೆ ಗೀತಾ ರೈ, ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಹಾಸ ಕೆ, ಶಾಲಾ ಮುಖ್ಯ ಶಿಕ್ಷಕ ವಾಸುದೇವ ನಾಯಕ್, ಸ್ಥಳೀಯ ಪ್ರಮುಖರಾರ ಗಣೇಶ್ ರೈ, ಶಶಿಧರ್, ಯತೀಂದ್ರ ರೈ ಮುಂತಾದವರು ನೇತೃತ್ವ ನೀಡಿದ್ದಾರೆ. ಅಂತಾರಾಜ್ಯ ಸಂಪರ್ಕದ ರಸ್ತೆ ಇದಾಗಿದ್ದು, ರಸ್ತೆ ದುರಸ್ತಿಗಾಗಿ ಸಂಬಂಧಪಟ್ಟವರನ್ನು ಮನವಿ ಮೂಲಕ ಒತ್ತಾಯಿಸುತ್ತಾ ಬರಲಾಗಿದೆ ಎಂದು ಎಣ್ಮಕಜೆ ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ತಿಳಿಸಿದ್ದಾರೆ.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries