HEALTH TIPS

ಅರ್ಹತೆ ಮತ್ತು ದಕ್ಷತೆಯಿದ್ದರೂ ಏಮ್ಸ್ ನ ಬೋಧಕ ವೃಂದದಲ್ಲಿ ಎಸ್ಸಿ/ಎಸ್ಟಿಗಳನ್ನು ಸೇರಿಸಿಕೊಂಡಿಲ್ಲ: ಸಂಸದೀಯ ಸಮಿತಿ

                 ನವದೆಹಲಿ :ಸೂಕ್ತ ಅರ್ಹತೆ ಮತ್ತು ದಕ್ಷತೆಯಿದ್ದರೂ ಅನುಭವಿ ಎಸ್ಸಿ/ಎಸ್ಟಿ ಆಕಾಂಕ್ಷಿಗಳಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಆರಂಭಿಕ ಹಂತದಲ್ಲಿಯೂ ಅಧ್ಯಾಪಕರಾಗಿ ಸೇರಲು ಅವಕಾಶ ನೀಡಲಾಗುತ್ತಿಲ್ಲ ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ಆರೋಪಿಸಿದೆ.

               ಏಮ್ಸ್‌ನ ಒಟ್ಟೂ 1,111 ಬೋಧಕ ವೃಂದದ ಹುದ್ದೆಗಳಲ್ಲಿ 275 ಸಹಾಯಕ ಪ್ರೊಫೆಸರ್ ಮತ್ತು 92 ಪ್ರೊಫೆಸರ್ ಹುದ್ದೆಗಳು ಖಾಲಿಯಿದ್ದರೂ ಈ ತಾರತಮ್ಯವು ನಡೆಯುತ್ತಿದೆ. ತಾತ್ಕಾಲಿಕ ಆಧಾರದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಸೇರಿದ ಕಿರಿಯ ವೈದ್ಯರನ್ನು ಹುದ್ದೆಗಳನ್ನು ಖಾಯಂಗೊಳಿಸಿದ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿಲ್ಲ ಎಂದು ಲೋಕಸಭೆಯಲ್ಲಿ ಮಂಡಿಸಲಾದ ಪರಿಶಿಷ್ಟ ಜಾತಿಗಳು (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಕಲ್ಯಾಣ ಕುರಿತು ಸಂಸದೀಯ ಸಮಿತಿಯ ವರದಿಯಲ್ಲಿ ಹೇಳಲಾಗಿದೆ.

                  ಆದ್ದರಿಂದ ಬೋಧಕ ವೃಂದದಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಮುಂದಿನ ಮೂರು ತಿಂಗಳಲ್ಲಿ ಭರ್ತಿ ಮಾಡಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ. ಭವಿಷ್ಯದಲ್ಲಿಯೂ ಕೂಡ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿದ ಬಳಿಕ ಎಸ್ಸಿ/ಎಸ್ಟಿಗೆ ಮೀಸಲಾದ ಹುದ್ದೆಯು ಯಾವುದೇ ಸಂದರ್ಭದಲ್ಲಿಯೂ ಆರು ತಿಂಗಳಿಗೂ ಹೆಚ್ಚು ಸಮಯ ಖಾಲಿವುಳಿಯಬಾರದು ಎಂದು ಅದು ತಿಳಿಸಿದೆ.ಸಾಕಷ್ಟು ಸಂಖ್ಯೆಯಲ್ಲಿ ಸೂಕ್ತ ಅಭ್ಯರ್ಥಿಗಳು ಲಭ್ಯವಾಗುತ್ತಿಲ್ಲ ಎಂಬ ಸರಕಾರದ ಮಾಮೂಲು ಉತ್ತರವನ್ನು ಒಪ್ಪಿಕೊಳ್ಳಲು ತಾನು ಸಿದ್ಧನಿಲ್ಲ ಎಂದು ಸಮಿತಿಯು ಸ್ಪಷ್ಟಪಡಿಸಿದೆ.

                  ಪ್ರಸ್ತುತ ಏಮ್ಸ್‌ನ ಆಡಳಿತ ಮಂಡಳಿಯಲ್ಲಿ ಎಸ್‌ಸಿ ಅಥವಾ ಎಸ್‌ಟಿ ಸದಸ್ಯರಿಲ್ಲ. ಇದು ನಿರ್ಧಾರವನ್ನು ಕೈಗೊಳ್ಳುವ ಪ್ರಕ್ರಿಯೆಯ ಮತ್ತು ನೀತಿ ವಿಷಯಗಳಲ್ಲಿ ಪಾಲ್ಗೊಳ್ಳುವ ಹಾಗೂ ಸೇವಾ ವಿಷಯಗಳಲ್ಲಿ ಎಸ್‌ಸಿ/ಎಸ್‌ಟಿಗಳ ಹಿತಾಸಕ್ತಿಯನ್ನು ರಕ್ಷಿಸುವ ಅವರ ಶಾಸನಬದ್ಧ ಹಕ್ಕುಗಳಿಂದ ಅವರನ್ನು ವಂಚಿಸುತ್ತದೆ ಎಂದು ಸಮಿತಿಯು ಹೇಳಿದೆ.

                     ಸೂಪರ್-ಸ್ಪೆಷಾಲಿಟಿ ಕೋರ್ಸ್‌ಗಳಲ್ಲಿ ಮೀಸಲಾತಿಯನ್ನು ವಿಸ್ತರಿಸಿಲ್ಲ/ಅನ್ವಯಿಸಿಲ್ಲ ಎನ್ನುವುದನ್ನು ಬೆಟ್ಟು ಮಾಡಿರುವ ಸಮಿತಿಯು, ಈ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸೂಪರ್-ಸ್ಪೆಷಾಲಿಟಿ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಸೂಪರ್-ಸ್ಪೆಷಾಲಿಟಿ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳು ಮತ್ತು ಬೋಧಕರ ಮಟ್ಟದಲ್ಲಿ ಎಸ್ಸಿ/ಎಸ್ಟಿಗಳ ಅಸ್ತಿತ್ವವನ್ನು ಖಚಿತಪಡಿಸಲು ಮೀಸಲಾತಿ ನೀತಿಯನ್ನು ಜಾರಿಗೊಳಿಸಬೇಕು ಎಂದು ಅದು ಶಿಫಾರಸು ಮಾಡಿದೆ.

                     ವಿವಿಧ ಏಮ್ಸ್‌ಗಳಲ್ಲಿ ಎಂಬಿಬಿಎಸ್ ಮತ್ತು ಇತರ ಪದವಿ ಕೋರ್ಸ್‌ಗಳಲ್ಲಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿಯೂ ಎಸ್‌ಸಿ ಮತ್ತು ಎಸ್‌ಟಿಗಳ ಪ್ರವೇಶಗಳ ಒಟ್ಟು ಶೇಕಡಾವಾರು ಪ್ರಮಾಣ ಅಗತ್ಯ ಮಟ್ಟವಾದ ಶೇ.15 (ಎಸ್ಸಿ) ಮತ್ತು ಶೇ.7.5 (ಎಸ್ಟಿ)ಕ್ಕಿಂತ ತುಂಬ ಕಡಿಮೆಯಿದೆ ಎಂದೂ ಬೆಟ್ಟು ಮಾಡಿರುವ ಸಮಿತಿಯು, ಎಲ್ಲ ಕೋರ್ಸ್ ಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ನಿಗದಿತ ಶೇಕಡಾವಾರು ಮೀಸಲಾತಿಯನ್ನು ಏಮ್ಸ್ ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ಬಲವಾದ ಶಿಫಾರಸನ್ನು ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries