HEALTH TIPS

ಕೋವಿಡ್‌ ಬಳಿಕ ಹೆಚ್ಚಾಗುತ್ತಿದೆಯೇ ಹೃದಯಾಘಾತ, ಸ್ಟ್ರೋಕ್‌? ತಜ್ಞರು ಹೇಳುವುದೇನು?

ಭಾರತ ಮಾತ್ರವಲ್ಲದೇ ಇಡೀ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ ಕೊರೊನಾ ವೈರಸ್ ಪ್ರಭಾವ ಕಡಿಮೆ ಆಗುತ್ತಿದೆ. ಆದರೆ ಕೊರೊನಾದ ಬಳಿಕ ಹಲವು ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೌದು, ಬ್ರೈನ್ ಸ್ಟ್ರೋಕ್, ಹೃದಯ ಸಂಬಂಧಿ ಸಮಸ್ಯೆಗಳು ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಕೊರೊನಾ ವೈರಸ್‌ನ ಎರಡನೇ ಅಲೆ ಪ್ರಾರಂಭವಾದ ನಂತರದ ಕೋವಿಡ್ ಸ್ಥಿತಿಯ ಪರಿಣಾಮವಾಗಿ ಹೃದಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳು ಜಾಸ್ತಿಯಾಗಿವೆ ಎಂದು ಹೇಳಿದ್ದಾರೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ಡಾ. ದೇವಿಪ್ರಸಾದ್ ಶೆಟ್ಟಿ ಏನು ಹೇಳಿದ್ದಾರೆ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರಾಯಣ ಹೆಲ್ತ್ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ.ದೇವಿ ಪ್ರಸಾದ್ ಶೆಟ್ಟಿ, ಎರಡನೇ ಅಲೆಯ ಸಮಯದಲ್ಲಿ ಮೆದುಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿದ್ದವು, ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ. ಕೊರೊನಾದ ಎರಡನೇ ಅಲೆ ಸಮಯದಲ್ಲಿ, ಕೋವಿಡ್ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಉಂಟಾಗಿತ್ತು. ಮೆದುಳು ಮತ್ತು ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಂಭವಿಸಿತ್ತು. ಈ ಕಾರಣದಿಂದಾಗಿ ಕ್ರಮೇಣ ಹೃದಯ ಹಾಗೂ ಮೆದುಳಿನ ಸಮಸ್ಯೆಗಳು ಕೋವಿಡ್ ವೈರಸ್ ಅಂಟಿದ್ದ ಜನರಲ್ಲಿ ಕಾಣತೊಡಗಿದೆ.

ಅಂದರೆ ಮೆದುಳಿನ ಪಾರ್ಶ್ವವಾಯು ಮತ್ತು ಹೃದಯದ ಸಮಸ್ಯೆಗಳು ಉಲ್ಬಣಿಸಿದೆ ಎಂದು ಡಾ. ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ಕೂಲಂಕುಶ ಅಧ್ಯಯನದ ಅಗತ್ಯವಿದೆ ಎಂದು ಹೇಳಿದ್ದಾರೆ.

ಏಮ್ಸ್‌ ಹೃದ್ರೋಗ ತಜ್ಞರ ಅಭಿಪ್ರಾಯ

ಇನ್ನು ದೆಹಲಿಯ ಏಮ್ಸ್ ನ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ ನಿತೀಶ್ ನಾಯಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೊರೊನಾದಿಂದ ಚೇತರಿಸಿಕೊಂಡ ಬಳಿಕ ತೀವ್ರವಾದ ಹೃದಯ ಸಮಸ್ಯೆಗಳನ್ನು ಉಂಟುಮಾಡುವಲ್ಲಿ ಕೋವಿಡ್ ಪಾತ್ರದ ಕುರಿತು ಅಧ್ಯಯನವು ಇನ್ನೂ ವಿಕಸನಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಜ್ವರದಂತಹ ಎಲ್ಲಾ ಕಾಯಿಲೆಗಳು ಯಾವಾಗಲೂ ಹೃದಯದ ಆರೋಗ್ಯ-ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಇದು ನಮಗೆ ತಿಳಿದಿರುವ ಸಂಗತಿಯಾಗಿದೆ. ಇದೀಗ ಕೋವಿಡ್ ಕೂಡ ಇದೇ ರೀತಿ ವರ್ತಿಸುತ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ಬಳಿಕ ತೀವ್ರವಾದ ಹೃದಯ ಸಮಸ್ಯೆಗಳನ್ನು ಉಂಟುಮಾಡುವಲ್ಲಿ ಕೋವಿಡ್ 19ರ ಪಾತ್ರದ ಬಗ್ಗೆ ನಮ್ಮ ಜ್ಞಾನವು ಇನ್ನೂ ವಿಕಸನಗೊಳ್ಳುತ್ತಿದೆ. ಸೌಮ್ಯವಾದ ಕೋವಿಡ್ ಸೋಂಕುಗಳ ನಂತರವೂ ಹೃದಯದ ಸಮಸ್ಯೆಗಳ ಬಗ್ಗೆ ವರದಿಗಳಿದ್ದರೂ, ಹೆಚ್ಚಿನವರು ಯಾವುದೇ ಪರೀಕ್ಷೆ ಅಥವಾ ಮಧ್ಯಸ್ಥಿಕೆಗಳ ಅಗತ್ಯವಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ ನಿತೀಶ್ ನಾಯಕ್ ತಿಳಿಸಿದ್ದಾರೆ.

ಕೊರೊನಾ ಬಳಿಕ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ:

ಯಾವುದೇ ವೈರಲ್ ಕಾಯಿಲೆಯ ನಂತರ ಚೇತರಿಕೆಯ ಹಂತದಲ್ಲಿ ಕೆಲವು ವ್ಯಕ್ತಿಗಳಿಗೆ ನಿರಂತರ ಎದೆ ನೋವು, ಆಯಾಸ, ಹೃದಯ ಬಡಿತದ ಹೆಚ್ಚಳದಂತಹ ಸಮಸ್ಯೆ ಅನುಭವಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದಾಗ್ಯೂ, ಗಮನಾರ್ಹವಾದ ಉಸಿರಾಟದ ತೊಂದರೆಗಳು ಅಥವಾ ನೋವು ಇದೆ ಎಂದು ನಿಮಗೆ ಅರಿವಾದರೆ ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಬೆನ್ನುಮೂಳೆ ಗಾಯದ ಕೇಂದ್ರದ ಹಿರಿಯ ಸಲಹೆಗಾರ ನರಶಸ್ತ್ರ ಚಿಕಿತ್ಸಕ ಡಾ ಅರುಣ್ ಶರ್ಮಾ ಪ್ರತಿಕ್ರಿಯೆ ನೀಡಿ, ಕೋವಿಡ್ ನಿಂದ ಬಳಲುತ್ತಿರುವ ರೋಗಿಗಳು ನರವೈಜ್ಞಾನಿಕ ಅಸ್ವಸ್ಥತೆಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಉತ್ತಮ ಸಂಖ್ಯೆಯ ಯುವ ರೋಗಿಗಳು ಪಾರ್ಶ್ವವಾಯು ಸಮಸ್ಯೆಯಿಂದ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ. ಜನಸಂಖ್ಯೆಯಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಕೋವಿಡ್ ನಿಂದ ಬಳಲುತ್ತಿರುವ ಜನರು ನರವೈಜ್ಞಾನಿಕ ಅಸ್ವಸ್ಥತೆಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನರಗಳಿಗೆ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಪ್ರಾಣಾಯಾಮ, ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಮಾಡುವ ಮೂಲಕ ಇಂತಹ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆ ಕೊರೊನಾ ಬಳಿಕ ಕೊರೊನಾ ಪೀಡಿತರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎನ್ನುವ ವಿಚಾರವನ್ನು ಈಗಾಗಲೇ ಅನೇಕ ಪರಿಣಿತರು ತಿಳಿಸಿದ್ದಾರೆ. ಹೃದಯ ಸಂಬಂಧಿ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಕೂಡ ಹೇಳಲಾಗಿದೆ. ಆದರೂ ಈ ಬಗ್ಗೆ ಇನ್ನಷ್ಟು ಅಧ್ಯಯನ, ಸಂಶೋಧನೆ ಆಗಬೇಕಿದೆ.


 


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries