HEALTH TIPS

ಕೊಟ್ಟಾಯಂನಲ್ಲಿ ವ್ಯಾಪಿಸಿದ ಪಕ್ಷಿ ಜ್ವರ: 6,000ಕ್ಕೂ ಹೆಚ್ಚು ಪಕ್ಷಿಗಳ ನಾಶ

 

              ಕೊಟ್ಟಾಯಂ:  ಕೊಟ್ಟಾಯಂ ಜಿಲ್ಲೆಯಲ್ಲಿ ಪಕ್ಷಿ ಜ್ವರ ಹರಡಿರುವುದು ದೃಢಪಟ್ಟಿದ್ದು, ಈ ಜಿಲ್ಲೆಯ ಮೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 6,017 ಪಕ್ಷಿಗಳನ್ನು ನಾಶ ಪಡಿಸಲಾಗಿದೆ. ಈ ಪೈಕಿ ಬಾತುಕೋಳಿಗಳೇ ಹೆಚ್ಚಿವೆ ಎಂದು PTI ವರದಿ ಮಾಡಿದೆ.

ಈ ನಾಶವು ವೆಚೂರ್, ನೀಂದೂರ್ ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಗಳಿಂದ ವರದಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                   ವೆಚೂರ್ ಪಂಚಾಯಿತಿ ವ್ಯಾಪ್ತಿಯಲ್ಲಿ 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರ್ ಪಂಚಾಯಿತಿ ವ್ಯಾಪ್ತಿಯಲ್ಲಿ 2,753 ಬಾತುಕೋಳಿಗಳು ಹಾಗೂ ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ 2,975 ಬಾತುಕೋಳಿಗಳನ್ನು ನಾಶಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                  ಈ ನಡುವೆ, ಕೇರಳದಲ್ಲಿ ಪಕ್ಷಿ ಜ್ವರ ಹರಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ರಾಜ್ಯದಿಂದ ಶೀತಲೀಕರಿಸಿದ ಕೋಳಿ ಮಾಂಸವನ್ನು ಆಮದು ಮಾಡಿಕೊಳ್ಳುವುದಕ್ಕೆ ಲಕ್ಷದ್ವೀಪ ಆಡಳಿತ ತಾತ್ಕಾಲಿಕ ನಿಷೇಧ ಹೇರಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷಿ ಜ್ವರದಿಂದ ಕೇರಳದಲ್ಲಿ ಪಕ್ಷಿಗಳನ್ನು ದೊಡ್ಡ ಸಂಖ್ಯೆಯಲ್ಲಿ ನಾಶಗೊಳಿಸಿರುವ ಎರಡನೆ ನಿದರ್ಶನ ಇದಾಗಿದೆ.

                   ಇದಕ್ಕೂ ಮುನ್ನ ಅಕ್ಟೋಬರ್ ತಿಂಗಳಲ್ಲಿ ಹರಿಪಾದ್ ಪ್ರದೇಶದಲ್ಲಿ ಹಕ್ಕಿ ಜ್ವರ ಹರಡಿದ್ದರಿಂದ ಅಲಪ್ಪುಳ ಜಿಲ್ಲಾಡಳಿತವು 20,000 ಪಕ್ಷಿಗಳನ್ನು ನಾಶಗೊಳಿಸಿತ್ತು. ಪಕ್ಷಿ ಜ್ವರ ಹರಡಿದ್ದರಿಂದ ಹರಿಪಾದ್ ಪ್ರದೇಶದ ರೈತರು ಸುಮಾರು 1500 ಬಾತುಕೋಳಿಗಳನ್ನು ಕಳೆದುಕೊಂಡಿದ್ದರಿಂದಾಗಿ ಜಿಲ್ಲಾಡಳಿತ ಇಂತಹ ಕ್ರಮಕ್ಕೆ ಮುಂದಾಗಿತ್ತು.

               ನವೆಂಬರ್ ತಿಂಗಳಲ್ಲಿ ಪಶು ಸಂಗೋಪನೆ ಇಲಾಖೆಯ ಕ್ಷಿಪ್ರ ಸ್ಪಂದನ ತಂಡವು ಪಕ್ಷಿ ಜ್ವರದಿಂದ ಬಾಧಿತವಾಗಿದ್ದ ಚೆರುತ್ತನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 6,000 ಪಕ್ಷಿಗಳನ್ನು ನಾಶಗೊಳಿಸಿತ್ತು. ಬಾತುಕೋಳಿ ಸೇರಿದಂತೆ ಹತ್ತು ಬಗೆಯ ಪಕ್ಷಿಗಳನ್ನು ವೈರಸ್ ತೀವ್ರತೆ ಹೊಂದಿದ್ದ ಪ್ರದೇಶದ ಒಂದು ಕಿಮೀ ಸುತ್ತಳತೆ ವ್ಯಾಪ್ತಿಯಲ್ಲಿ ನಾಶಗೊಳಿಸಲಾಗಿತ್ತು ಎಂದು ವರದಿಯಾಗಿತ್ತು.

                   ಪಕ್ಷಿ ಜ್ವರ ಅಥವಾ ಏವಿಯನ್ ಇನ್‌ಫ್ಲುಯೆಂಝಾ ತೀವ್ರ ಸ್ವರೂಪದ ಸೋಂಕು ಹೊಂದಿರುವ ಪ್ರಾಣಿಜನ್ಯ ರೋಗವಾಗಿದ್ದು, ಏವಿಯನ್ ಇನ್‌ಫ್ಲುಯೆಂಝಾ ವೈರಸ್ ಸೋಂಕಿನಿಂದ ಈ ರೋಗ ಹರಡುತ್ತದೆ. ಏವಿಯನ್ ಇನ್‌ಫ್ಲುಯೆಂಝಾ (H5N1) ಅಥವಾ H5N8 ಹಲವಾರು ಪ್ರಭೇದದ ತಳಿಯೊಂದಿಗೆ ಲಭ್ಯವಿದ್ದರೂ, ಅದನ್ನು ಸಾಮಾನ್ಯವಾಗಿ ಪಕ್ಷಿ ಜ್ವರ ಎಂತಲೇ ಕರೆಯಲಾಗುತ್ತದೆ. ಈ ಸೋಂಕು ಪಕ್ಷಿಗಳ ವಿಸರ್ಜನೆ, ಸ್ರವಿಸುವಿಕೆ ಮತ್ತು ಎಂಜಲಿನ ಮೂಲಕ ಹರಡುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries