HEALTH TIPS

ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶವೇ ಶಿವರಾತ್ರಿ !

      [ತಾಪ-ತಲ್ಲಣಗಳ ತೊಳಲಾಟದಲ್ಲಿ ಶ್ರೀಶಿವನೇ ನಮಗೆ ಉತ್ತರ, ಅವನೇ ನಮಗೆ ಹತ್ತರ]

ಓ ಹೌದು….ನಮ್ಮ ಬಹಳಷ್ಟು ಹಬ್ಬಗಳು ಮಣ್ಣಿನ ಮಗನಾದ ರೈತ ಕಂಡ ಕನಸುಗಳೇ ಆಗಿವೆ.

ಮಣ್ಣಿಗೂ ಮಾತಿಗೂ ಒಗೆತನ…. ಮಾತಿಗೂ ಮೌನಕ್ಕೂ ಗೆಳೆತನ….

ನನ್ನೊಳಗಿನ ನಾನುತನ ಹೋಗಿ…. ಶಿವತನದ ಹೂವು ಅರಳುವದೇ ನಿಜವಾದ ಶಿವರಾತ್ರಿ !

      ರೈತ ಕಾಲದ ಕೂಸು. ನಾವು ರೈತನ ಮಕ್ಕಳು. ಮಳೆಗಾಲ- ಚಳಿಗಾಲ-ಬೇಸಿಗೆ ಕಾಲಗಳ ಋತುಮಾನಗಳ ಸ್ಥಿತ್ಯಂತರಕ್ಕೆ ತಕ್ಕಂತೆ ರೈತ ಉತ್ತುವ- ಬಿತ್ತುವ- ಬೆಳೆಯುವ- ಕೊಯ್ಲು ಮಾಡುವ ಭೂತಾಯಿಯ ಸೇವೆಯಲ್ಲಿ ಮೈಮರೆಯುತ್ತಾನೆ.

     ಹೊಲದ ಹೊಸ ಬೆಳೆಗಳೆ ಅವನ ಹಬ್ಬದ ಎಡೆಬಟ್ದಲು ತುಂಬುತ್ತವೆ. ಉಸಿರಾಡಲು ಕೂಡ ಬಿಡುವಿಲ್ಲದ ರೈತನ ಮಡದಿ-ಮಕ್ಕಳು ಕೆಲಸದಲ್ಲಿ ಪಡುವು ಸಿಕ್ಕಾಗ ಹುಣ್ಣಿಮೆಯ ಬೆಳುದಿಂಗಳ ಅಂಗಳದಲ್ಲಿ…. ಅಮವಾಸಿಯ ಗೃಹ- ತಾರೆ- ನಕ್ಷತ್ರಗಳ ಕಂಗಳಲ್ಲಿ ….ಮೈ-ಮನ ಚಾಚಿ ನಲಿಯುತ್ತಾರೆ. ತುಂಬಾ ತುಂಬಾ ಬಳಲಿಬೆಂಡಾದಾಗ ….. ನಮ್ಮಪ್ಪಾ…. ತಂದೆ… ಶಿವಶಿವಾ …. ಎಂದಾಗ ಪ್ರಕೃತಿ ಅವರನ್ನು ತಂಗಾಳಿಯಿಂದ ತೂಗಿ ಜೋಗುಳ ಹಾಡುತ್ತದೆ !

      ಅದೇ ಸಹಜ ಶಿವರಾತ್ರಿ…. ನಿತ್ಯ ನಿತ್ಯ ಶಿವರಾತ್ರಿ ! ನಿಜ ನಿರಂತರ ಶಿವರಾತ್ರಿ !

      “ಭಾರತ ಹುಣ್ಣಿಮೆ” ಬೆಳುದಿಂಗಳ ಹಬ್ಬವಾದರೆ…. “ಶಿವರಾತ್ರಿ” ಕತ್ತಲನ್ನು ಕರ್ಪೂರ ದೀಪ ಮಾಡಿ ಬೆಳಗುವ ಅಂತರಂಗದ ಆಧ್ಯಾತ್ಮಿಕ ಹಬ್ಬ. ಈ ಪಂಚಭೂತಗಳ ಭೌತಿಕ ಧರಣಿಯಲ್ಲಿ ಶಿವಪಂಚಾಕ್ಷರಿಯ ಗಾನ ತುಂಬುವ ಹಬ್ಬ ಶಿವರಾತ್ರಿಯೊಂದೇ. ಶಿವರಾತ್ರಿ ಹಬ್ಬ ಮಾತ್ರವಲ್ಲ…. ಈ ಬದುಕನ್ನು ಭಗವಂತನೊಂದಿಗೆ ಬೆಸೆಯುವ ಮಹಾ ಪರಿವರ್ತನೆಯ ದಿಬ್ಬ ! ಆದ್ದರಿಂದ ಶಿವಯೋಗದ ಯೋಗವೇ ಶಿವರಾತ್ರಿಯ ಜೋಗ ! ಸಮಸ್ತ ಮನುಕುಲ ಕಲ್ಯಾಣಕ್ಕಾಗಿ ಸಮಗ್ರ ತ್ಯಾಗವೇ ಶಿವರಾತ್ರಿಯ ಭೋಗ ! ಜೀವನದ ಏನೆಲ್ಲ ಕಾರ್ಯ ಕ್ಷೇತ್ರಗಳ ದುಡಿಮೆಗಳಲ್ಲಿ…. ಶಿವನ ನೆನಹು…. ಶಿವ ಧ್ಯಾನ…. ಶಿವ ಸಮಾಗಮದ ಸುಮ್ಮಾನ…. ಈ ನಿಜ ನಿರಂತರ ಯಾತ್ರೆಯೇ ಶಿವರಾತ್ರಿಯ ಸುಂದರ ಗಾನ !

     ನೇಗಿಲಯೋಗಿ ರೈತ ತನ್ನ ಬಿಡುವಿಲ್ಲದ ಹೊಲದ ಕೆಲಸದಲ್ಲಿ ಒಂದಿಷ್ಟು ಪಡುವು ಮಾಡಿಕೊಂಡು…. ಹರನನ್ನು ಹಾಡಿ ಕೊಂಡಾಡುವ ಅಂತರಂಗದ ಆಧ್ಯಾತ್ಮಿಕ ಯಾತ್ರಿಯಾಗುತ್ತಾನೆ. ಕಣ್ಣು ಮುಚ್ಚಿದರೆ ಶಿವಯೋಗ…. ಕಣ್ಣರಳಿದರೆ ಕಾಯಕ. ಶ್ರಮಜೀವಿಗಳಿರಲಿ, ಆಫೀಸಿನಲ್ಲಿ ದುಡಿಯುವ ಬುದ್ಧಿಜೀವಿಗಳಿರಲಿ, ಪರೀಕ್ಷೆಗಳನ್ನು ಎದುರಿಸುವ ಅಕ್ಷರಯೋಗಿ ವಿದ್ಯಾರ್ಥಿಗಳಿರಲಿ, ಕ್ರೀಡಾಪಟುಗಳಿರಲಿ, ಕಲಾವಿದರಿರಲಿ, ಗೃಹಕೃತ್ಯದ ಗರತಿ ಗಂಗವ್ವೆ ಇರಲಿ , ಆಪರೇಶನ್ ಟೇಬಲ್ ಮೇಲೆ ಅತಿ ಸೂಕ್ಷ್ಮ ಶಸ್ತ್ರ ಚಿಕಿತ್ಸಾಮಗ್ನ ಪರಿಣತ ವೈದ್ಯನಾರಾಯಣನಿರಲಿ ….. ಎಲ್ಲರಿಗೂ ಜೀವದ್ರವ್ಯವಾದ ಶಾಂತಿ- ಸಹನೆ- ಕೇಂದ್ರೀಕರಣದ ಶಕ್ತಿ ನೀಡಬಲ್ಲ ಒಂದೇ ಒಂದು ಹಗುರ ದಾರಿ….ಶಿವನ ಒಲವು…. ಶಿವನ ನೆನಹು…. ಶಿವನಯೋಗ ! ಆದ್ದರಿಂದ ಶಿವಯೋಗವು ಕೇವಲ ಯೋಗಮಾತ್ರ ಆಗಿರದೇ ಕುಶಲ ಜೀವನದ ಕಲೆಯೂ ಹೌದು…. ಗೆಲುವಿನ ಕಾರ್ಯಕ್ಷೇತ್ರದ ತಂತ್ರವೂ ಹೌದು !

     ನಮ್ಮ ಹಬ್ಬಗಳು ಕವಿಕಲ್ಪನೆಗಳಲ್ಲ…. ಕಟ್ಟು ಕಥೆಗಳಲ್ಲ. ಪ್ರಕೃತಿ ಪರಿಸರದೊಂದಿಗೆ ತಾಳ-ಲಯ ಬದ್ಧವಾಗಿ ಸ್ಪಂದಿಸುವ ಮಧುರ ಮೃದಂಗಗಳು. “ಹೊಸ್ತಿಲು ಹುಣ್ಣಿಮೆ”ಯಲ್ಲಿ ಚಳಿಯಿಂದ ಹೊಸ್ತಿಲು ನಡುಗುತ್ತದೆ ! “ಎಳ್ಳ ಅಮವಾಸಿ”ಗೆ ಎಳ್ಳು ಕಾಳಿನಷ್ಟು ಹೊತ್ತು ನಿಲ್ಲುತ್ತದೆ. “ಬನದ ಹುಣ್ಣಿಮೆ”ಗೆ ಬನ ನಡುಗುತ್ತದೆ. “ಭಾರತ ಹುಣ್ಣಿಮೆ”ಗೆ ಬಾರಿಕಾಯಿ ಗಾತ್ರದ ಮಿಡಿಮಾವಿನ ಕಾಯಿಗಳು ಮರತುಂಬುತ್ತವೆ. “ಹೋಳಿ ಹುಣ್ಣಿಮೆ”ಯಲ್ಲಿ ಹಿಟ್ಟು ಚಲ್ಲಿದಂತೆ ಬೆಳದಿಂಗಳು ಚಲ್ಲವರಿಯುತ್ತದೆ. ಈ ಮಧ್ಯದಲ್ಲಿ…. ಶಿವರಾತ್ರಿ….ಶಿವಶಿವಾ ಎನ್ನುತ್ತ…. ಬಿಸಿಲು ತೂರುತ್ತ ಬರುತ್ತದೆ. ಸುಂದರ ಪ್ರಕೃತಿಯೊಂದಿಗೆ ನಮ್ಮ ಅನ್ನದಾತ ರೈತನ ಸಾಮರಸ್ಯ ಎಷ್ಟೊಂದು ಅಗಾಧವಾಗಿದೆ ನೋಡಿರಿ !

     ಶಿವರಾತ್ರಿಯಲ್ಲಿ “ಶಿವಶಿವಾ” ಎಂದು ಗಗನದತ್ತ ನೋಡಿದಾಗ ಕಣ್ತುಂಬ ಗ್ರಹ-ತಾರೆ- ನಕ್ಷತ್ರಗಳ ಮಿನುಗು ಮಾಯಾಲೋಕ ತೋರುತ್ತದೆ. ಈ ಬೆಚ್ಚನೆಯ ಸಮಯದಲ್ಲಿ ಒಕ್ಕಲು ಮಕ್ಕಳು ರಾತ್ರಿಯ ಸೆರಗಿನಲ್ಲಿ ಶಿವಭಜನೆ- ಶಿವಕೀರ್ತನೆಗಳಲ್ಲಿ, ಶಿವನ ನೆನಹಿನ ಜಾಗರಣೆಯಲ್ಲಿ ಮೈಮರೆಯುತ್ತಾರೆ. ಸಮಸ್ತ ಪ್ರಕೃತಿಯೇ ಶಿವರಾತ್ರಿಯಲ್ಲಿ ಶಿವಶಿವಾ ಶಿವಶಿವಾ ಅನ್ನುತ್ತದೆ !

    ಪಂಚತತ್ತ್ವಗಳಾದ ನೆಲ- ನೀರು- ಗಾಳಿ- ಬಿಸಿಲು- ಬಯಲುಗಳೊಂದಿಗೆ ಹಾಣಾಹಣಿ ಮಾಡಿ ಬಳಲಿ ಬೆಂಡಾದ ದುಡಿಮೆಗಾರ; ಶಿವರಾತ್ರಿಯಲ್ಲಿ ಶೂನ್ಯ ಗಗನವನ್ನು ನೋಡುತ್ತ…. “ನಾನು ಯಾರು?”…. “ಶಿವನೆಂದರೆ ಯಾರು?”…. “ನನಗೂ ಶಿವನಿಗೂ ಏನು ಸಂಬಂಧ?”…. ” ಈ ಪ್ರಕೃತಿ -ಪುರುಷ- ಪರಮಾತ್ಮನ ತ್ರಿವೇಣಿ ಸಂಬಂಧದ ಗುಟ್ಟು ಏನು?”…. “ಕಾಲ- ಕಲ್ಪ- ಕರ್ಮಗಳ ರಹಸ್ಯವೇನು?”…. “ಜನನ-ಮರಣಗಳ ಪ್ರಯಾಣ ಎತ್ತಣಿಂದ ಎತ್ತಣಕ್ಕೆ?”…. “ಮರಣದಿಂದ ಮುಂದೇನು?”…. ಎಂದು ತನಗೆ ತಾನೆ ಕೇಳಿಕೊಳ್ಳುತ್ತಾನೆ. ಇದೇ ಪ್ರಶ್ನೆಯನ್ನು ಶರಣರು- ಸಂತರು- ಸಿದ್ಧರು- ಸ್ವಾಮಿಗಳು -ಸನ್ಯಾಸಿಗಳು- ವಿಶ್ವಪ್ರಸಿದ್ಧ ಜ್ಞಾನಿಗಳು ಸಹಸ್ರ ಬಾರಿ ಕೇಳಿದ್ದು ಬಹುಶಃ ಇದೇ ಕಾಲದಲ್ಲಿ !

ಇದರಿಂದಾಗಿ ಶಿವನ ಹಂಬಲು ಹೃದಯದ ಹಾಡಾಗುತ್ತದೆ. ನಂಬಿ ಕರೆದಡೆ ಓ ಎನ್ನನೇ ಶಿವನು ?

ಸವಣ್ಣನವರು ಕೂಡ ಬದುಕಿನ ಇಂಥದೇ ಒಂದು ಕಾರಿರುಳಿನ ಹೋಹುಯ್ಲಿನ ಪ್ರಶ್ನಾರ್ಥಕ ಕಾಲದಲ್ಲಿ….

“ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ….

ಇವ ನಮ್ಮವ ಇವ ನಮ್ಮವ ಇವನಮ್ಮವ ಎಂದೆನಿಸಯ್ಯಾ….

ಕೂಡಲಸಂಗಮ ದೇವಾ…. ನಿಮ್ಮ ಮನೆಯ ಮಗನೆಂದೆನಿಸಯ್ಯಾ…. ನಿಮ್ಮ ಧರ್ಮ !”….

    ಎಂದು ಸೆರಗೊಡ್ಡಿ ಬೇಡಿದ್ದುಂಟು. ಬಹುಶಃ ವಿಶ್ವದ ಮಹಾನ್ ಮಹಾನ್ ಕವಿ- ದಾರ್ಶನಿಕ- ಚಿಂತಕರಿಗೆಲ್ಲ ಶಿವರಾತ್ರಿಯ ಅನಂತ ಗಗನದ ಹೆಬ್ಬಯಲು ಸಹಸ್ರ ನಕ್ಷತ್ರಗಳೊಂದಿಗೆ ಸಹಸ್ರ ಪ್ರಶ್ನೆಗಳನ್ನು ತೂರಿದ್ದರೆ ಆಶ್ಚರ್ಯವಿಲ್ಲ !

     ಸರ್ವ ಜೀವರಿಗೂ ಶಿವರಾತ್ರಿ ನಂಬಿಗೆಯ ಕಾಲ. ಅಂತರಂಗದಲ್ಲಿ ತೂಗು ತೊಟ್ಟಿಲು ತೂಗುವ ಕಾಲ. ಶಿವರಾತ್ರಿ ಶ್ರೀಶಿವನ ಪ್ರತ್ಯಕ್ಷತೆಯ ಪರಮ ಸಿದ್ಧಿಯ ಸಹಜ ಸುಂದರ ಕಾಲ.

ಶಿವಭಕ್ತಿಯಲ್ಲಿ ನಿಚ್ಚಳವಾಗಿ ಎರಡು ವಿಧ…

ಒಂದು ಭಕ್ತಿ ಮಾರ್ಗ…..!

ಇನ್ನೊಂದು ಜ್ಞಾನ ಮಾರ್ಗ….!!

     ಪುರಾಣ ಪುಣ್ಯ ಕಥೆಗಳಲ್ಲಿ ಶಿವನ…. ಅಂದರೆ ಶಂಕರಪಾರ್ವತಿಯರ…. ೨೫ ಲೀಲೆಗಳ ವರ್ಣನೆ ಇದೆ. ಶಿವರಾತ್ರಿಯ ದಿನ ಯಾವ ಗುಡಿ-ಮಠಗಳಿಗೆ ಹೋದರೂ ಬೇಡರ ಕಣ್ಣಪ್ಪನ ಕಥೆ, ಗೋಕರ್ಣೇಶ್ವರ ಕಥೆ, ಹನ್ನೆರಡು ಜ್ಯೋತಿರ್ಲಿಂಗಗಳ ಸ್ತುತಿ, ತಿರುನೀಲ ಕಂಠರ ಕಥೆ, ಕುಂಬಾರ ಗುಂಡಯ್ಯನ ಕಥೆ, ರುದ್ರಾಕ್ಷಿ ಮಹಿಮೆ, ಪಂಚಾಕ್ಷರಿ ಮಹಿಮೆ, ಬಿಲ್ವ ಪತ್ರೆಯ ಮಹಿಮೆ, ಭಸ್ಮಾಸುರ ಸಂಹಾರ ಕಥೆ, ಬಾಣಾಸುರನ ಕಥೆ, ಶಿವಭಕ್ತ ಮಾರ್ಕಂಡೇಯನ ಕಥೆ, ಶಿವಭಕ್ತ ಸಿರಿಯಾಳನ ಕಥೆ, ಶಿವಭಕ್ತೆ ನಲ್ಲೂರ ನಂಬಿಯಕ್ಕನ ಕಥೆ, ಕೋಳೂರ ಕೊಡಗೂಸಿನ ವೃತ್ತಾಂತ, ಅಕ್ಕ ಮಹಾದೇವಿ ಚರಿತ್ರೆ, ಹೇಮರಡ್ಡಿ ಮಲ್ಲಮ್ಮನ ಪುರಾಣಗಳು ವಿಜೃಂಭಿಸುತ್ತವೆ. ಶಿವ ಪುರಾಣದ ಪವಿತ್ರ ಪಠನ ಕರ್ಣಾನಂದದ ಕಂಪು ನೀಡುತ್ತದೆ.

     ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯೇ ಮಹಾಶಿವರಾತ್ರಿ ! ಈ ದಿವಸ ಶಿವಲೋಕದ ಹೆಬ್ಬಾಗಿಲು ಸರುವರಿಗೂ ತೆರೆಯುತ್ತದೆ! ಇಂದು ಗೈಯುವ ಶಿವನಾಮ ಸ್ಮರಣೆ, ಭಜನೆ, ಕೀರ್ತನೆ, ಆರಾಧನೆಗಳಿಂದ ಸಕಲ ಪಾಪಗಳು ನಾಶ ಹೊಂದುವವೆಂದು ಸೂತ ಪುರಾಣಿಕರು, ಶೌನಕ ಮೊದಲಾದ ಮುನಿಗಳು ಹೇಳಿದ್ದುಂಟು.

    ” ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ…. ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ…. ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ…. ಕೂಡಲ ಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡ ನೋಡಯ್ಯಾ….!” …. ಎಂಬ ಶರಣರ ಸೂಳ್ನುಡಿ ಸತ್ಯವಾಗಿಯೂ ಸುಜ್ಞಾನದ ಹೆಬ್ಬಾಗಿಲು ತೆರೆದು ಶಿವಜ್ಞಾನದ ಬೆಳಗು ನೀಡುವಲ್ಲಿ ಸಂಶಯವೇ ಇಲ್ಲ !

      ಬಿಲ್ವ ವೃಕ್ಷ ಶಿವಭಕ್ತರಿಗೆ ಅತ್ಯಂತ ಪವಿತ್ರವಾದ ಮರ. ಶಿವನಿಗೂ ಬಿಲ್ವ ವೃಕ್ಷಕ್ಕೂ ಅನಾದಿ ಕಾಲದ ಸಂಬಂಧ. ಬೇಡರ ಕಣ್ಣಪ್ಪ ಜಿಂಕೆಯ ಬೇಟೆ ಆಡಲು ಶಿವರಾತ್ರಿಯ ಕತ್ತಲಲ್ಲಿ ಬಿಲ್ವವೃಕ್ಷ ಏರಿ ಕುಳಿತನಂತೆ. ಅವನಿಗೆ ಅದು ಬಿಲ್ವ ವೃಕ್ಷವೆಂದು ಗೊತ್ತಿಲ್ಲ. ಈ ದಿನ ಶಿವರಾತ್ರಿ ಎಂಬುದೂ ತಿಳಿದಿಲ್ಲ. ಅದೇ ಬಿಲ್ವ ವೃಕ್ಷದ ಕೆಳಗೆ ಶಿವಲಿಂಗ. ಕೆಲ ಭಕ್ತರು ಶಿವಲಿಂಗಕ್ಕೆ ಬಂದು…. ಭಯಭಕ್ತಿಯಿಂದ…. ಶಿವಾ…. ಶಿವಾ…. ಶಿವಾ…. ಎನ್ನುತ್ತ ದರ್ಶನ ಪಡೆದು ಹೋದದ್ದನ್ನು ಕಣ್ಣಪ್ಪ ಕಣ್ಣಾರೆ ಕಂಡ.

     ಕಣ್ಣಪ್ಪನೂ…. ಕಣ್ಣರಿಯದಿದ್ದರೂ ಕರುಳರಿದು…. ಶಿವಾ ಶಿವಾ ಎನ್ನುತ್ತ ಕುಳಿತುಬಿಟ್ಟ. ಅದೊಂದು ಅರಿತವಿಲ್ಲದ ಅರ್ಚನೆಯಾಯಿತು…. ಜಲವಿಲ್ಲದ ಜಪವಾಯಿತು…. ತತ್ವ ತಿಳಿಯದ ತಪವಾಯಿತು. ನೆನಹು ನಂದಾದೀಪವಾಯಿತು. ಆ ರಾತ್ರಿ ಯಾವ ಬೇಟೆಯೂ ಸಿಗಲಾರದೇ ಇಡೀ ರಾತ್ರಿ ಅವನಿಗೆ ಉಪವಾಸವೂ ಆಯಿತಂತೆ ! ಬೇಟೆಯ ಪ್ರಾಣಿಗಾಗಿ ಬೆಳತನಕ ಎಚ್ಚರದಿಂದ ಇದ್ದ ಅವನಿಗೆ ಅವನಿಗರಿಯದಂತೆ ಜಾಗರಣೆಯೂ ಆಗಿಬಿಟ್ಟಿತು. ಅಬ್ಬಾ…. ಶಿವರಾತ್ರಿಯ ನಿಯಮಗಳಾದ ಉಪವಾಸ- ಜಾಗರಣೆ- ಮಂತ್ರ ಪಠಣ….. ಕ್ರಿಯೆಗಳು ಅವನಿಗರಿಯದಂತೆ ನಡೆದುಹೋದವು. ಇಷ್ಟೇ ಅಲ್ಲ…. ರಾತ್ರಿಯ ಬೇಸರ ಕಳೆಯುಲು ಕಣ್ಣಪ್ಪ ಆ ಬಿಲ್ವ ವೃಕ್ಷದ ಒಂದೊಂದೇ ಎಲೆಗಳನ್ನು ಕಿತ್ತು ಕಿತ್ತು ಎಸೆದನಂತೆ. ಅವೆಲ್ಲಾ ಆ ಗಿಡದ ಬುಡಕ್ಕೆ ಇದ್ದ ಶಿವಲಿಂಗದ ಮೇಲೆ ಬಿದ್ದು…. ಸಹಜ ಶಿವಾರ್ಚನೆಯೂ ಆಯಿತು !

      ಹೇಳೀ ಕೇಳಿ ಕೈಲಾಸ ವಾಸಿ ಶಿವ…. ಬೋಳೇ ಶಂಕರ….ಎಂಬ ಬಿರುದು ಪಡೆದವ. ನನ್ನ ಮಕ್ಕಳು ನನ್ನನ್ನು ಹೇಗಾದರೂ ಆಗಲಿ ನೆನಪು ಮಾಡಿದರೆ ಸಾಕು…. ಎಂಬ ಹಂಬಲವುಳ್ಳವನೇ ಹರನಲ್ಲವೇ? ಬೇಡರ ಕಣ್ಣಪ್ಪನ ಅಪ್ರತ್ಯಕ್ಷ ಶಿವಾರ್ಚನೆಯಿಂದಲೇ ಪ್ರತ್ಯಕ್ಷನಾಗಿಬಿಟ್ಟ ಪರಮೇಶ್ವರ ! ಆದ್ದರಿಂದ ಶಿವನಿಗೆ “ಸುಲಭ ಶಿವ” ಎಂಬ ಬಿರುದೂ ಉಂಟಲ್ಲವೇ ? ಶಿವ ಬೇಡರ ಕಣ್ಣಪ್ಪನನ್ನು ತನ್ನ ಹೂವಿನ ವಿಮಾನದಲ್ಲಿ ನೇರವಾಗಿ ಕೈಲಾಸಕ್ಕೇ ಕರೆದೊಯ್ದುಬಿಟ್ಟ !

     ಈ ಮುಗ್ಧ ಭಕ್ತಿಯ ಭಾವಪೂರ್ಣ ಒಡಲಾಳದಲ್ಲಿ ಜ್ಞಾನರತ್ನಗಳೂ ಉಂಟು. ಬಿಲ್ವ ವೃಕ್ಷವೆಂದರೆ ಸಾಧನೆಗೆ ಪ್ರಶಸ್ತವಾದ ಹಸಿರು ಮರಗಳ ಪರಿಸರ ಅಂತ ಅರ್ಥ. ಬೇಡರ ಕಣ್ಣಪ್ಪ ಜಿಂಕೆಯ ಬೇಟೆಗೆ ಬಂದವ…. ಎಂದರೆ… ಮಾಯಾಮೃಗವೆಂಬ ದೇಹ ಮೋಹದ ಜಿಂಕೆಯ ಸಂಹಾರಕ್ಕೆ ಬಂದನೆಂದು ಅರ್ಥ. ರಾತ್ರಿಯ ಕಾಲವೆಂದರೆ ಆತ್ಮನ ಕತ್ತಲೆಯ ಕಾಳರಾತ್ರಿ ಎಂದೇ ಅರ್ಥ. ಆ ಕರಾಳ ಕಾರಿರುಳ ಕತ್ತಲೆಯಲ್ಲಿ ಕಣ್ಣಪ್ಪನಿಗೆ ಕಣ್ಣುಕೊಟ್ಟವನೇ ಮುಕ್ಕಣ್ಣನೂ ತ್ರಿಲೋಕೀನಾಥನೂ ಆದ ತ್ರ್ಯಂಬಕೇಶ್ವರ.

ಹೌದು…. ನಾವೆಲ್ಲರೂ ಬೇಡರಕಣ್ಣಪ್ಪಗಳು ! ನಮ್ಮೊಳಗಿನ ಅರುಹಿನ ಕಣ್ಣೇ ಬೇಡರ ಕಣ್ಣಪ್ಪ !

     ಶಿವರಾತ್ರಿ ನಮ್ಮ ಹಬ್ಬ ! ನಮ್ಮ ಮಾನಸಿಕ ಹೋ ಹುಯ್ಲುಗಳಿಗೆ ….ಜೊಂಯ್ ಜಿಟ್ಟುಗಳಿಗೆ…. ಹಗುರತೆ- ಪ್ರೀತಿ- ಶಾಂತಿ- ಶೀತಲತೆ ತುಂಬುವ ಅರುಹಿನ ಹಬ್ಬವೇ ಶಿವರಾತ್ರಿ ಹಬ್ಬ !!

    ಕಣ್ಣಪ್ಪನಿಗೆ ಕಣ್ಣುಬಂತು. ಅಂತರಂಗದ ಜ್ಞಾನದ ಕಣ್ಣು ತೆರೆದಾಗ ಜ್ಞಾನೇಶ್ವರ ಶಿವನ ದರ್ಶನವಾಯಿತು. ಶಿವರಾತ್ರಿಯ ಒಡಲಾಳದ ಈ ಸುಂದರ ರಹಸ್ಯ ತಿಳಿದಾಗಲೇ ಈ ಹಬ್ಬದ ಆಧ್ಯಾತ್ಮಿಕ ಚಲುವಿನ ಚಂಬೆಳಗು ಚಿಮ್ಮಬಲ್ಲುದು !

    ಕಣ್ಣಪ್ಪ ಕಂಡದ್ದು ಚರ್ಮಾಂಬರಧಾರಿ ಶಿವನನ್ನಲ್ಲ…. ಆದರೆ ಚರ್ಮಾಭಿಮಾನ ಎಂಬ…. “ದೇಹೋಹಂ”…. “ನಾನೇ ದೇಹ”…. ಎಂಬ ಅಹಂಕಾರವನ್ನು ಕಿತ್ತುಕೊಂಡ ಪರಂಜ್ಯೋತಿ ಶಿವನನ್ನು. ಪಾರ್ವತೀಪತಿಯಾದ ಶಿವನನ್ನಲ್ಲ…. ಆದರೆ…. ಆತ್ಮನೆಂಬ ಪಾರ್ವತಿಯರ ಪರಮ ಪತಿ ಪರಮೇಶ್ವರನ್ನು.

     ಬೇಡರ ಕಣ್ಣಪ್ಪ ಹರಿತವಾದ ಬಾಣಗಳಿಂದ ತನ್ನ ಕಣ್ಣು ಕಿತ್ತು ಶಿವನಿಗೆ ಕೊಟ್ಟನೆಂಬ ಪುರಾತನ ವೃತ್ತಾಂತ ಉಂಟು. ಇದರ ನಿಜವಾದ ಅರ್ಥವೆಂದರೆ …. ಕಣ್ಣಪ್ಪ…. ಜ್ಞಾನವೆಂಬ ಪ್ರಖರ ಅಸ್ತ್ರದಿಂದ…. ತನ್ನ ಆತ್ಮನ ಅರುಹಿನ ಕಣ್ಣನ್ನು …. ಮೂರನೇ ಕಣ್ಣನ್ನು…. ಶಿವನಿಗೆ ಸಮರ್ಪಿಸಿದನೆಂದೇ ಅರ್ಥ. ಬೇಡರ ಕಣ್ಣಪ್ಪ ಶಿವನಿಗೆ ಖಂಡಿತವಾಗಿಯೂ ಕೊಟ್ಟದ್ದು ಚರ್ಮದ ಕಣ್ಣು ಅಲ್ಲ… ಜ್ಷಾನದ ಕಣ್ಣು!

         ಈ ಚರ್ಮದ ಕಣ್ಣು ಶಿವನಿಗೆ ಬೇಕಾದರೂ ಯಾತಕ್ಕೆ? ಅಶರೀರಿಯಾದ ಅವನಿಗೆ ಈ ಶರೀರದ ಕಣ್ಣಾದರೂ ಏಕೆ ಬೇಕು ಹೇಳಿ? ಆದ್ದರಿಂದ ಕಣ್ಣಪ್ಪ ಶಿವನಿಗೆ ಕೊಟ್ಟದ್ದು…. ಆತ್ಮನ ಕಣ್ಣು…. ಅರುಹಿನ ಕಣ್ಣು…. ಅಂತರಂಗದ ಅರುಹಿನ ಅಕ್ಷಿ…. ಜ್ಞಾನಾಕ್ಷಿ…. ಪ್ರಜ್ಞಾಚಕ್ಷು…. ಆಯ್ ಆಫ್ ಕಾನ್ಸೆಸ್‌ನೆಸ್…. ! ಇದೇ ಸತ್ಯ ಶಿವದರ್ಶನದ ಶರಣರ ಸುಂದರ ದಾರಿಯಲ್ಲವೇ?


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries