HEALTH TIPS

ಅತ್ಯಾಚಾರ ಪ್ರಕರಣಗಳ ತಪ್ಪು ಸಂದೇಶಕ್ಕೆ ಅವಕಾಶ ಬೇಡ

        ದೇಶದ ಅತ್ಯುನ್ನತ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಿಂದ ಸಮಾಜವು ಆದರ್ಶದ, ಅನುಕರಣೀಯ ನಡೆಯನ್ನೇ ಬಯಸುತ್ತದೆ. ಆ ರೀತಿಯ ಬಯಕೆ ಸಹಜವೂ ಹೌದು, ದೇಶ-ಕಾಲಗಳನ್ನು ಮೀರಿದ್ದೂ ಹೌದು. ಉನ್ನತ ಹುದ್ದೆಗಳನ್ನು ಹೊಂದಿರುವವರು ಬಾಯಿತಪ್ಪಿ ಹಗುರವಾದ ಮಾತುಗಳನ್ನು ಆಡಿದರೂ ಅದು ರವಾನಿಸುವುದು ಕೆಟ್ಟ ಸಂದೇಶವನ್ನೇ. ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ, ಮಹಾರಾಷ್ಟ್ರ ರಾಜ್ಯದ ಸರ್ಕಾರಿ ನೌಕರನೊಬ್ಬ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ದೇಶದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಎ. ಬೊಬಡೆ ಅವರು ಆತನನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗಳು ತೀರಾ ಕಸಿವಿಸಿ ಉಂಟುಮಾಡುವಂಥವು. ಸಿಜೆಐ ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಸಂತ್ರಸ್ತೆಯನ್ನು ಆರೋಪಿ ಮದುವೆ ಆಗುತ್ತಾನಾ ಎಂದು ಅವನ ಪರ ವಕೀಲರಲ್ಲಿ ಕೇಳಿದ್ದಾರೆ ಎಂದು ವರದಿಯಾಗಿದೆ. ಆರೋಪಿಗೆ ಈಗಾಗಲೇ ಮದುವೆ ಆಗಿರುವ ಕಾರಣ, ಸಂತ್ರಸ್ತೆಯನ್ನು ಮದುವೆ ಆಗಲು ಸಾಧ್ಯವಿಲ್ಲ ಎಂದು ವಕೀಲರು ನ್ಯಾಯಪೀಠಕ್ಕೆ ಉತ್ತರಿಸಿದ್ದಾರೆ ಎಂದೂ ವರದಿಯಾಗಿದೆ. ನ್ಯಾಯಪೀಠ ವಿಚಾರಣೆ ನಡೆಸುತ್ತಿದ್ದುದು, ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ ಅರ್ಜಿಯನ್ನು. ವಿಚಾರಣೆ ಸಂದರ್ಭದಲ್ಲಿ, ಮದುವೆಯ ಬಗ್ಗೆ ಪ್ರಸ್ತಾಪ ಬಂದಿದೆ. ಆದರೆ, ಅತ್ಯಾಚಾರ ಎಸಗಿದ ವ್ಯಕ್ತಿಯು ಸಂತ್ರಸ್ತೆಯನ್ನು ಮದುವೆಯಾದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಅತ್ಯಾಚಾರ ಎಂಬುದು ಕ್ರಿಮಿನಲ್‌ ಅಪರಾಧ. ಅತ್ಯಾಚಾರ ಸೇರಿದಂತೆ ಯಾವುದೇ ಕ್ರಿಮಿನಲ್‌ ಅಪರಾಧವನ್ನು ತನ್ನ ವಿರುದ್ಧ ಎಸಗಿದ ಕೃತ್ಯವೆಂದೇ ಪ್ರಭುತ್ವ ಭಾವಿಸುತ್ತದೆ. ಹಾಗಾಗಿಯೇ, ಅದು ತನ್ನ ಭಾಗವೇ ಆಗಿರುವ ಪೊಲೀಸ್, ಪ್ರಾಸಿಕ್ಯೂಷನ್‌ ನೆರವು ಪಡೆದು ತಪ್ಪು ಮಾಡಿದವನಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ನ್ಯಾಯಾಂಗದ ಮೊರೆ ಹೋಗುತ್ತದೆ. ಒಪ್ಪಿತ ವ್ಯವಸ್ಥೆ ಹೀಗಿರುವಾಗ, 'ಸಂತ್ರಸ್ತೆಯನ್ನು ಮದುವೆ ಆಗುತ್ತೀಯಾ' ಎಂಬ ಪ್ರಶ್ನೆಯು ತಪ್ಪು ಸಂದೇಶವನ್ನು ರವಾನಿಸುತ್ತದೆ.


         ಸಿಜೆಐ ಬೊಬಡೆ ಅವರು ಆಡಿರುವ ಮಾತಿಗೆ ಪ್ರತಿರೋಧ ವ್ಯಕ್ತವಾಗಿದೆ. ಇದು ನಿರೀಕ್ಷಿತವೂ ಹೌದು. ಇಂತಹ ಪ್ರತಿರೋಧಗಳಿಗೆ ಕಾರಣಗಳೂ ಇವೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್‌ಗೆ ದೊಡ್ಡ ಹೆಸರಿದೆ. ವಿಶಾಖ ಮಾರ್ಗಸೂಚಿಗಳನ್ನು ರೂಪಿಸಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆ ಆಗುವಂತೆ ನೋಡಿಕೊಂಡ ದೊಡ್ಡ ಸಂಸ್ಥೆ ಭಾರತದ ಸುಪ್ರೀಂ ಕೋರ್ಟ್‌ ಎಂಬುದನ್ನು ಮರೆಯುವಂತಿಲ್ಲ. ಮಹಿಳೆಯರ ಹಕ್ಕುಗಳ ರಕ್ಷಣೆ ಆಗಬೇಕು, ಸಮಾಜದಲ್ಲಿ ಅವರಿಗೆ ಸಮಾನ ಅವಕಾಶ ಸಿಗಬೇಕು, ಅವರು ‍ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎರಡನೇ ದರ್ಜೆಯ ಪ್ರಜೆಗಳಂತೆ ಆಗಬಾರದು ಎಂಬ ಸದಾಶಯದ ಮಾತುಗಳನ್ನು ಸುಪ್ರೀಂ ಕೋರ್ಟ್‌ ಕಾಲಕಾಲಕ್ಕೆ ಆಡಿದ್ದಿದೆ. ಈ ಕಾರಣಗಳಿಂದಾಗಿ, ಅತ್ಯಾಚಾರ ಸಂತ್ರಸ್ತೆಯನ್ನು ಮದುವೆ ಆಗಬಹುದೇ ಎಂಬ ಪ್ರಶ್ನೆಯನ್ನು ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವವನಲ್ಲಿ ಕೇಳುವ ಪ್ರಸಂಗವನ್ನು ಜೀರ್ಣಿಸಿಕೊಳ್ಳುವುದು ಸಮಾಜದ ಪಾಲಿಗೆ ಕಷ್ಟದ್ದಾಗುತ್ತದೆ. ಅತ್ಯಾಚಾರ ಎಂಬುದು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ, ಆರೋಪಿ ಹಾಗೂ ಸಂತ್ರಸ್ತ ವ್ಯಕ್ತಿಯ ನಡುವೆ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದಾದ ಅಪರಾಧ ಅಲ್ಲ. ಅದು ಕಾನೂನು ಪ್ರಕ್ರಿಯೆ ಮೂಲಕವೇ ತಾರ್ಕಿಕ ಅಂತ್ಯ ಕಾಣಬೇಕಾದ ಅಪರಾಧ. ಶಿಂಭು ಮತ್ತು ಹರಿಯಾಣ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವೊಂದು, 'ಅತ್ಯಾಚಾರ ಎಂಬುದು ಇಡೀ ಸಮಾಜದ ವಿರುದ್ಧ ಎಸಗುವ ಅಪರಾಧ' ಎಂದು ಬಣ್ಣಿಸಿದೆ. ಅಷ್ಟೇ ಅಲ್ಲದೆ, ದೂರುದಾರರು-ಆರೋಪಿಗಳು ಕುಳಿತು ರಾಜಿಯ ಮೂಲಕ ಬಗೆಹರಿಸಿಕೊಳ್ಳಬಹುದಾದ ಅಪರಾಧಗಳ ವ್ಯಾಪ್ತಿಗೆ ಕೂಡ ಇದು ಬರುವುದಿಲ್ಲ ಎಂಬುದನ್ನು ಅದೇ ಪ್ರಕರಣದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಅತ್ಯಾಚಾರ ಎಸಗಿದವನ ಜೊತೆಯಲ್ಲೇ ಸಂತ್ರಸ್ತೆ ಮದುವೆ ಆಗುವುದು ಅಂದರೆ, ಆಕೆ ಮತ್ತೊಮ್ಮೆ ಕ್ರೌರ್ಯಕ್ಕೆ ತುತ್ತಾದಂತೆ. ಇಂಥದ್ದಕ್ಕೆಲ್ಲ ಅವಕಾಶ ಕಲ್ಪಿಸಬಾರದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries