HEALTH TIPS

ಆನ್‌ಲೈನ್‌ ಟ್ಯೂಷನ್‌: ಶಿಕ್ಷಣದ 'ಹೊಸರುಚಿ'

           ಪರೀಕ್ಷೆ ಹೇಗೆ ನಡೆಸಬೇಕು, ಶಾಲೆ ಆರಂಭಿಸಬೇಕೇ ಬೇಡವೇ ಎಂಬ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದನ್ನು ಮುಂದುವರಿಸಿದ್ದೇವೆ. ಕಾಲೇಜುಗಳು ಭಯದಿಂದಲೇ ಆರಂಭವಾಗಿವೆ. ಇಲ್ಲಿಯವರೆಗೆ ಒಂದೇ ಗತಿಯಲ್ಲಿ ಮುಂದುವರಿದುಕೊಂಡು ಬಂದಿದ್ದ ಶಾಲೆಗಳಲ್ಲಿನ ಕಲಿಕೆ ಇದ್ದಕ್ಕಿದ್ದ ಹಾಗೆ ತನ್ನ ನಡೆ ಬದಲಿಸಿಬಿಟ್ಟಿದೆ.

        ಈ ಮೊದಲು ಶಾಲೆಯ ಜೊತೆಗೆ ಟ್ಯೂಷನ್ ಆಯ್ಕೆಗಳಿರುತ್ತಿದ್ದವಷ್ಟೆ. ಈಗ ಆನ್‍ಲೈನ್ ವ್ಯವಸ್ಥೆಯಿಂದಾಗಿ ಮನೆಯಲ್ಲಿಯೇ ಕುಳಿತು ಮಕ್ಕಳನ್ನು ಯಾವ ಟ್ಯೂಷನ್‍ಗೂ ಸೇರಿಸಬಹುದು. ಒಂದೇ ಅಲ್ಲ, ಒಂದೊಂದು ವಿಷಯಕ್ಕೆ ಒಂದೊಂದು
ಟ್ಯುಟೋರಿಯಲ್ಸ್‌ಗೆ ಸೇರಬಹುದು. ಅದರಲ್ಲೂ ಅಷ್ಟೆ, ಕಂಪನಿಗಳು ವಿಮೆ- ಸಾಲ ಎಂದು ಹಿಂದೆ ಬಿದ್ದಂತೆ ಇಂತಹ ಆನ್‍ಲೈನ್ ಕೋರ್ಸುಗಳ ಉದ್ಯೋಗಿಗಳು ಪೋಷಕರ ಹಿಂದೆ ಬೀಳುತ್ತಾರೆ. ಕುತೂಹಲಕ್ಕೆಂದು ನೀವೇನಾದರೂ 'ಟ್ರಯಲ್ ಕ್ಲಾಸ್' ಮಾಡಿಸಿದರೆ, ಮಕ್ಕಳು ಹೇಗಾದರೂ ಆ 'ಟ್ಯುಟೋರಿಯಲ್ ಕ್ಲಾಸ್' ಸೇರುವಂತೆ ನಿಮ್ಮ ಮನವೊಲಿಸಿಯೇ ತೀರುತ್ತಾರೆ. ಅಪ್ಪ-ಅಮ್ಮಂದಿರಿಗೆ 'ಶಾಲೆಯಿಲ್ಲದೆ ಮಕ್ಕಳು ಹಾಳಾಗುತ್ತಿದ್ದಾರಲ್ಲ' ಎಂಬ ಸಂಕಟವಂತೂ ಮನದಾಳದಲ್ಲಿ ಕೊರೆಯುತ್ತಿರುತ್ತದೆ. ಈ ಸಂಕಟದ ಪ್ರಯೋಜನ ಪಡೆಯುವುದು ಜಗತ್ತಿನ ಎಲ್ಲೆಡೆ, ಭಾರತದ ತುಂಬಾ                               ಹುಟ್ಟಿಕೊಂಡಿರುವ ಆನ್‍ಲೈನ್ ಟ್ಯೂಷನ್ ಕೇಂದ್ರಗಳು.

       'ಶಾಲೆ ಪೂರ್ತಿಯಾಗಿ ತೆರೆಯದೆ, ಕಲಿಕೆ ಹೇಗೋ ಮುಂದುವರಿದರೆ ತಪ್ಪೇನು' ಎಂದು ನಾವು ಪ್ರಶ್ನಿಸಲು ಸಾಧ್ಯವಿದೆ. ಆದರೆ ಕೊರೊನಾ ನಮ್ಮ ಮಧ್ಯೆ ಇರುವುದು ನಮಗೆ ಅಭ್ಯಾಸವಾಗಿ, ಶಾಲೆಗಳನ್ನು ತೆರೆದರೂ ಅಪ್ಪ-ಅಮ್ಮ ಈ ಟ್ಯೂಷನ್‍ಗಳ ರುಚಿ ನೋಡಿದ್ದರೆ, ಅದನ್ನು ಬಿಡುವುದು ಕಷ್ಟ! ಶಾಲೆಯ ತರಗತಿಗಳಲ್ಲಿ ಏನು ನಡೆಯುತ್ತದೆ, ಹೇಗೆ ಪಾಠ ಮಾಡುತ್ತಾರೆ ಎಂಬ ಬಗ್ಗೆ ಅಪ್ಪ-ಅಮ್ಮ ಪಾಠ ನೋಡಲಸಾಧ್ಯ. ಆದರೆ ಆನ್‍ಲೈನ್ ಟ್ಯೂಷನ್ ತರಗತಿಯಲ್ಲಿ ಹಾಗಲ್ಲ. ಹೇಗಿದ್ದರೂ, ಆನ್‍ಲೈನ್ ಶಿಕ್ಷಕರು ರಾತ್ರಿ 8 ಗಂಟೆಗೂ ಕಲಿಸಲು ಸಿದ್ಧರಿದ್ದಾರೆ!

             ಕೊರೊನಾ ನೆಪದಿಂದ ಕಲಿಕೆಯ ಹಾದಿ, ಒತ್ತಡದ ರೀತಿಗಳು ಮತ್ತಷ್ಟು ವಿಸ್ತರಿಸಿವೆ ಎನ್ನುವುದು ಇಂದಿನ ಶಿಕ್ಷಣ ಪದ್ಧತಿಯ ಸಮೀಪದೃಷ್ಟಿಗೆ ಗೋಚರಿಸುವುದು ಸಾಧ್ಯವಿಲ್ಲ. ಹಾಗೆಯೇ ಈವರೆಗಿನ ಕಲಿಕೆಯ ಕ್ರಮದಲ್ಲಿ ಇದ್ದ 'ಗಣಿತ-ವಿಜ್ಞಾನಗಳಿಗೆ ಅತಿ ಪ್ರಾಮುಖ್ಯ'ವನ್ನು ಈಗ ನಾವು ಮತ್ತೂ ಏರಿಸಿದ್ದೇವೆ. ನಾನು ಓದುವಾಗ, ಅಂದರೆ ಸುಮಾರು 20 ವರ್ಷಗಳ ಹಿಂದೆ ಪಿಯುಗೆ ಬಂದಾಗ ಮಾತ್ರ ಭಾಷಾ ವಿಷಯಗಳನ್ನು ಬದಿಗಿರಿಸಿ, ಗಣಿತ- ವಿಜ್ಞಾನಗಳ ಹಿಂದೆ ಓಡುವ ಪ್ರವೃತ್ತಿಯಿತ್ತು. ಆದರೆ ಈಗ ಒಂಬತ್ತನೇ ತರಗತಿಗಾಗಲೇ ಭಾಷಾ ವಿಷಯಗಳು ಹಿಂದೆ ಸರಿಯುತ್ತವೆ. ಕೆಲವು ಆನ್‍ಲೈನ್ ಟ್ಯೂಷನ್ ಸಂಸ್ಥೆಗಳಂತೂ ನೇರವಾಗಿ ಎಂಟನೇ ತರಗತಿಯಿಂದಲೇ ಐಐಟಿ- ಜೆಇಇ- ನೀಟ್‍ ಕೋಚಿಂಗ್ ಆರಂಭಿಸುತ್ತವೆ, ವಿಜ್ಞಾನ- ಗಣಿತಗಳ ಬಗ್ಗೆ ಮಾತ್ರ ಹೇಳಿಕೊಡುತ್ತವೆ.

              ಇನ್ನು ಕನಿಷ್ಠ ಒಂಬತ್ತನೇ ತರಗತಿಯವರೆಗಾದರೂ ಆಟ, ಕರಕುಶಲ, ಸಂಗೀತ, ನಾಟಕಗಳ ಕಡ್ಡಾಯ ಅವಧಿಗಳು ಮಕ್ಕಳಿಗೆ ಶಾಲೆಗಳಲ್ಲಿ ದೊರೆಯುತ್ತಿದ್ದವು. ಆದರೆ ಈಗ? ಇನ್ನೂ ಮೊದಲೇ ಇವಕ್ಕೆಲ್ಲ ಕಡಿವಾಣ! ಶಾಲೆಗಳು ಆನ್‍ಲೈನ್ ಶಿಕ್ಷಣದ ಮುಖಾಂತರ, ಯುಟ್ಯೂಬ್‍ನಲ್ಲಿ ಅಥವಾ ಪೋಷಕರು ಆನ್‍ಲೈನ್ ಟ್ಯೂಷನ್‍ಗಳಿಗೆ ಸೇರಿಸಿ, ಮಕ್ಕಳು ಪಠ್ಯಪುಸ್ತಕ, ಬರೆಯುವ ನೋಟ್ಸ್‌ನಲ್ಲಿ 'ಅಪ್‌ಡೇಟ್' ಆಗಿರುವಂತೆ ಮಾಡಿದ್ದಾರೆ. ಅದೇ ಆಟದ ಬಗ್ಗೆ, ಪ್ರಾಯೋಗಿಕ ಚಟುವಟಿಕೆಗಳ ಬಗ್ಗೆ ಏನು  ಕ್ರಮ ಕೈಗೊಂಡಿದ್ದೇವೆ?

               ಯುನಿಸೆಫ್ 'ಜೀರೊ ಲರ್ನಿಂಗ್' (ಶೂನ್ಯ ಕಲಿಕೆ) ಬಗ್ಗೆ ಜಗತ್ತಿನ ಗಮನವನ್ನು ಸೆಳೆದಿದೆ. ಮಕ್ಕಳಲ್ಲಿ ಬರವಣಿಗೆ- ಓದಿನ ಕೌಶಲಗಳಲ್ಲಿ ಹಿನ್ನಡೆ, ಈಗಾಗಲೇ ಕಲಿತಿರುವುದನ್ನು ಮರೆಯುವುದು ಇವೆಲ್ಲವೂ 'ಜೀರೊ ಲರ್ನಿಂಗ್' ಪರಿಧಿಗೇ ಬರುತ್ತವೆ. ಪರೀಕ್ಷೆ ಬೇಕು ಅಥವಾ ಬೇಡ ಎನ್ನುವ ಚರ್ಚೆಗಿಂತ ಮುಖ್ಯವಾಗ ಬೇಕಾದದ್ದು ಇಂತಹ 'ಶೂನ್ಯ ಕಲಿಕೆ'ಯ ಅವಧಿಗಳಲ್ಲಿ ಕಲಿಕೆಯ ಮೌಲ್ಯಮಾಪನ ಹೇಗಾಗಬೇಕು ಎಂಬುದರ ಬಗ್ಗೆ ಗಂಭೀರ ಚರ್ಚೆ, ಪ್ರಾಯೋಗಿಕ ಅನುಷ್ಠಾನ, ಪರಿಶೀಲಿಸಿ ತಿದ್ದುವಿಕೆ, ಪುನರ್ ಅನುಷ್ಠಾನ. ಸುಮಾರು ಕಳೆದ ಮೂವತ್ತು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕತ್ತೆತ್ತಿ ನೋಡುವಂತಹ ಬದಲಾವಣೆಗಳಾಗಿಲ್ಲ. ಅದಕ್ಕೆ ಕಾರಣ, ವ್ಯವಸ್ಥೆಯ ಬದಲಾಗುವಿಕೆಗೆ ನಮ್ಮ ಹಿಂಜರಿಕೆ.

              ಕೊರೊನಾದ ಪರಿಸ್ಥಿತಿ ನಾವ್ಯಾರೂ ಊಹಿಸದಂತಹ ಒಂದು ಸವಾಲನ್ನು, ಅವಕಾಶವನ್ನು ನಮಗೆ ನೀಡಿದೆ. ಹೀಗಿರುವಾಗ ನಮ್ಮ ಆಡಳಿತ ವ್ಯವಸ್ಥೆ ಕೇವಲ ಪರೀಕ್ಷೆಗಳ ಬಗೆಗಷ್ಟೇ ಅಲ್ಲ, ಕೊರೊನಾ ಪರಿಸ್ಥಿತಿಯ ಆನಂತರದ ದಿನಗಳ ಶಿಕ್ಷಣದ ಬಗೆಗೂ ಗಂಭೀರವಾಗಿ, ತುರ್ತಾಗಿ ಯೋಚಿಸಿ ಕೆಲವು ಹೊಸ ಸೂತ್ರಗಳನ್ನು ರೂಪಿಸಬೇಕಿದೆ.

         ವಿದ್ಯಾರ್ಥಿಗಳಲ್ಲಿ ವಿವಿಧ ಮಾನಸಿಕ ಸಮಸ್ಯೆಗಳು, ಅಪ್ಪ-ಅಮ್ಮಂದಿರಲ್ಲಿ ಮಕ್ಕಳ ಕಲಿಕೆಯ ವಿಷಯದಿಂದಾಗಿಯೇ ಈ ಕೊರೊನಾ ಸಮಯದಲ್ಲಿ ಹೆಚ್ಚಿದ ಒತ್ತಡ, ಖಿನ್ನತೆಯ ವರದಿಗಳು ಈಗಾಗಲೇ ಬಲವಾಗಿ ಬರುತ್ತಿವೆ. ಹೆಚ್ಚು ಅಂಕ ಗಳಿಸಬಹುದಾಗಿದ್ದ ಬುದ್ಧಿವಂತ ವಿದ್ಯಾರ್ಥಿಗಳು ಹತಾಶೆಯಿಂದ, ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳು ಪರೀಕ್ಷೆಯ ಆತಂಕ ತಗ್ಗಿದ್ದರೂ ಕಲಿಯಲಾರದೆ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಕೊರೊನಾ ಸಾಂಕ್ರಾಮಿಕವು ಅಜ್ಞಾನದ ಸಾಂಕ್ರಾಮಿಕವಾಗದಿರುವಂತೆ, ಕಲಿಕೆಯಲ್ಲಿ ಇಡೀ ಸಮಾಜ ಹೊಸ ಹೊಸ ದಾರಿಗಳನ್ನು ಹುಡುಕಿ, ಅರಿವನ್ನು ಕಾಯಬೇಕಾಗಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries