HEALTH TIPS

ಪುರಿ ಜಗನ್ನಾಥ ದೇಗುಲದಲ್ಲಿ ಮೂಲಸೌಕರ್ಯ ಅತ್ಯವಶ್ಯಕ: ಸುಪ್ರೀಂ ಕೋರ್ಟ್‌

 ನವದೆಹಲಿ: 'ಪುರಿಯ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಭಕ್ತರಿಗೆ ಶೌಚಾಲಯಗಳು ಮತ್ತು ಸ್ನಾನಗೃಹಗಳಂತಹ ಅಗತ್ಯ ಸೌಕರ್ಯ ಕಲ್ಪಿಸಲು ಒಡಿಶಾ ಸರ್ಕಾರ ನಡೆಸುತ್ತಿರುವ ನಿರ್ಮಾಣ ಚಟುವಟಿಕೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಅತ್ಯವಶ್ಯಕ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಹಿಮಾ ಕೊಹ್ಲಿ ಅವರಿದ್ದ ರಜಾಕಾಲದ ಪೀಠವು, ದೇಗುಲದ ಮೂಲಸೌಕರ್ಯ ನಿರ್ಮಾಣ ಕಾಮಗಾರಿ ಪ್ರಶ್ನಿಸಿ ಭಗವಾನ್ ಜಗನ್ನಾಥನ ಭಕ್ತರಾದ ಅರ್ಧೇಂದು ಕುಮಾರ್ ದಾಸ್ ಮತ್ತು ಸುಮಂತ ಕುಮಾರ್ ಘಡೇಯ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿತು.

ಮೃಣಾಲಿನಿ ಪಾಧಿ ಪ್ರಕರಣದಲ್ಲಿ ಈ ನ್ಯಾಯಾಲಯದ ತ್ರಿಸದಸ್ಯ ಪೀಠವು ನೀಡಿದ ನಿರ್ದೇಶನಗಳ ಅನುಸಾರ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ. ದೇವಾಲಯಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಕೈಗೊಂಡಿರುವ ಚಟುವಟಿಕೆಗಳ‌ನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಲಾಗದು ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.

ಇದಕ್ಕೂ ಮೊದಲು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಮಹಾಲಕ್ಷ್ಮಿ ಪಾವನಿ, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಸ್ಥಳಗಳು ಹಾಗೂ ಅವಶೇಷಗಳ ಕಾಯ್ದೆ 1958ರ ‍ಪ್ರಕಾರ ನಿಷೇಧಿತ ಪ್ರದೇಶದಲ್ಲಿ ಅಥವಾ ನಿಯಂತ್ರಿತ ಪ್ರದೇಶದಲ್ಲಿ ಯಾವುದೇ ನಿರ್ಮಾಣ, ಅಸ್ತಿತ್ವದಲ್ಲಿರುವ ಕಟ್ಟಡಗಳ ಪುನರ್‌ನಿರ್ಮಾಣ, ದುರಸ್ತಿ, ನವೀಕರಣ ಕೈಗೆತ್ತಿಕೊಳ್ಳಲು ಸ್ಪಷ್ಟ ನಿರ್ಬಂಧವಿದೆ. ಆದರೆ, ರಾಜ್ಯ ಸರ್ಕಾರ ಇದನ್ನು ಉಲ್ಲಂಘಿಸಿ, ದೇವಸ್ಥಾನದಲ್ಲಿ ಅಕ್ರಮವಾಗಿ ಉತ್ಖನನ ಮತ್ತು ನಿರ್ಮಾಣ ಕೆಲಸಗಳನ್ನು ನಡೆಸುತ್ತಿದೆ. ಇದು ಪ್ರಾಚೀನ ದೇವಾಲಯದ ರಚನೆಗೆ ಗಂಭೀರ ಅಪಾಯ ಉಂಟು ಮಾಡುತ್ತದೆ ಎಂದು ಪೀಠದ ಗಮನಕ್ಕೆ ತಂದರು.

ಆದರೆ, ಈ ವಾದ ತಿರಸ್ಕರಿಸಿದ ಪೀಠವು, ಪುರುಷರು ಮತ್ತು ಮಹಿಳೆಯರಿಗೆ ಶೌಚಾಲಯ, ಸ್ನಾನಗೃಹಗಳು, ವಿದ್ಯುತ್ ಮುಂತಾದ ಅಗತ್ಯ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದೆ.

ಪಿಐಎಲ್‌ ನಾಯಿ ಕೊಡೆಗಳಾಗದಂತೆ ಚಿವುಟಬೇಕು: 'ಸುಪ್ರೀಂ'

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು 'ನಾಯಿ ಕೊಡೆಗಳಂತೆ' ಬೆಳೆಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ ಧಕ್ಕೆಯಾಗದಂತೆ ಕ್ಷುಲ್ಲಕವಾದ ಪಿಐಎಲ್‌ಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ಅದು ಹೇಳಿದೆ.

ಜಗನ್ನಾಥ ದೇವಸ್ಥಾನದ ನಿರ್ಮಾಣ ಚಟುವಟಿಕೆಗಳ ವಿರುದ್ಧದ ಪಿಐಎಲ್ ಅರ್ಜಿಗಳನ್ನು ವಜಾಗೊಳಿಸುವಾಗ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಹಿಮಾ ಕೊಹ್ಲಿ ಅವರಿದ್ದ ರಜಾಕಾಲದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

'ಪಿಐಎಲ್ ಅರ್ಜಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯೇ ಇರುವುದಿಲ್ಲ. ಬಹುತೇಕ ಅರ್ಜಿಗಳು ಪ್ರಚಾರದ ಹಿತಾಸಕ್ತಿ ಅಥವಾ ವೈಯಕ್ತಿಕ ಹಿತಾಸಕ್ತಿ ದಾವೆಗಳಾಗಿವೆ. ನಾವು ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸಲು ಸಮ್ಮತಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಲ್ಲದೇ ಮತ್ತೇನೂ ಅಲ್ಲ' ಎಂದು ಪೀಠವು ಕಟುವಾಗಿ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries