HEALTH TIPS

ಈ ನೆಲ...ಈ ಸ್ವರ: ಇದು ಗಡಿನಾಡ ಕನ್ನಡ ಕಾವ್ಯದ ಎದೆಯದನಿ: ವಿಶೇಷ ಬರಹ: ಎಂ.ನಾ.ಚಂಬಲ್ತಿಮಾರ್

                        

                                 

          ಕನ್ನಡ ಕಾವ್ಯ ಪರಂಪರೆಗೆ ಗಡಿನಾಡು ಕಾಸರಗೋಡಿನ ಕವಿಗಳು ಕೊಟ್ಟ ಕೊಡುಗೆ ನಿರ್ಲಕ್ಷಿಸಬೇಕಾದುದೇನಲ್ಲ..! ಆದರೆ ರಾಷ್ಟ್ರಕವಿ ಗೋವಿಂದ ಪೈ ಮತ್ತು ಕಯ್ಯಾರ ಕಿಂಞ್ಞಣ್ಣ ರೈಗಳ ಗೀತೆಗಳನ್ನು ಬಿಟ್ಟರೆ ಮತ್ಯಾವ ಕವಿಗಳ ರಚನೆಗಳೂ ಕನ್ನಡ ಸುಗಮ ಸಂಗೀತದಲ್ಲಿ ದೊಡ್ಡ ಸದ್ದು ಮಾಡಲೇ ಇಲ್ಲ. ಅದು ಕವಿ-ಕಾವ್ಯದ ಕೊರತೆಯೇನಲ್ಲ. ನಮ್ಮ ನೆಲದಲ್ಲೂ ಭಾವುಕರೆದೆಯ ತಲ್ಪವನ್ನು ಮುಟ್ಟುವಂತೆ ಬರೆಯಬಲ್ಲ  ಸಮರ್ಥ ಕವಿಹೃದಯದ ಗೀತೆ ರಚನೆಕಾರರಿದ್ದಾರೆ. ಕೇಳುಗನ ಮನ ಸೂರೆಗೊಳ್ಳುವಂತೆ ಹಾಡಬಲ್ಲ ಪ್ರತಿಭೆಗಳೂ ಇದ್ದಾರೆ. ಹೀಗಿರುವಾಗ ನಮ್ಮದೇ ನೆಲದ ಕವಿಗಳ ರಚನೆಗಳನ್ನೇಕೆ ಮುಖ್ಯವಾಹಿನಿಯ ಸುಗಮ ಸಂಗೀತದಲ್ಲಿ ಹಾಡಿ ಜನಪ್ರಿಯಗೊಳಿಸಬಾರದು..? ನಮ್ಮ ನೆಲದ ಉದಯೋನ್ಮುಖ ಗಾಯಕರೇಕೆ ಈ ಮೂಲಕ ಗಡಿನಾಡಿನ ಗಡಿದಾಟಿ ಬೆಳೆಯಬಾರದು..?

           ಅರೆ..ಹೌದಲ್ವಾ..?

          ಹೀಗೊಂದು ಕಲ್ಪನೆ ಹೊಳೆದದ್ದೇ ತಡ..ಕಾಸರಗೋಡಿನ ಆಯ್ದ ಕವಿಗಳು ರಚಿಸಿದ ಗೀತೆಗಳ ಶೋಧ ನಡೆಯಿತು. ಅದರಿಂದ ಆಯ್ದ ಗೀತೆಗಳಿಗೆ ವಾದ್ಯ-ರಾಗ ಸಂಯೋಜಿಸಿ ಹಾಡುವಂತೆ ರೂಪಿಸುವ ಪ್ರಕ್ರಿಯೆಯೂ ನಡೆಯಿತು. ಈ ನೆಲದ ಭರವಸೆಯ ಯುವಪೀಳಿಗೆಯ ಗಾಯಕ, ಗಾಯಕಿಯರಿಂದಲೇ ಮೊದಲ ಪ್ರಯೋಗವೂ ನಡೆಯಿತು. ತನ್ಮೂಲಕ ವಾಚ್ಯವಾಗಿ ಪದಗಳಲ್ಲಿ ಅಡಗಿದ್ದ ಕಾವ್ಯಗಳು ಮೈವೊಡೆದು ಸಿಂಗರಿಸಿ ಪದ್ಯಗಳಾಗಿ ಚಿಮ್ಮಿತು. ಅದು ಕೇಳುಗರೆದೆಯಲ್ಲಿ ಭಾವಸೃಜಿಸಿ ಜೀವೋನ್ಮುಖಿಯಾಯಿತು.


ಇದುವೇ..."ಈಸ್ವರ-ಈ ನೆಲ" ಎಂಬ ಶೀರ್ಷಿಕೆಯಲ್ಲಿ ಕಾಸರಗೋಡಿನ ರಂಗಚಿನ್ನಾರಿಯ ಅಂಗಸಂಸ್ಥೆ 'ಸ್ವರ ಚಿನ್ನಾರಿ' ಯ ಅನಾವರಣದೊಂದಿಗೆ ಅನುಷ್ಠಾನಕ್ಕೆ ಬಂದ ನೂತನ ಸುಗಮ ಸಂಗೀತ ವೇದಿಕೆ. ಇದು ಗಡಿನಾಡು ಕಾಸರಗೋಡಿನ ಕವಿಗಳ ಕಾವ್ಯದ ಎದೆಯ ದನಿಯೂ ಹೌದು. ಉದಯೋನ್ಮುಖ ಗಾಯಕ, ಗಾಯಕಿಯರ ಅನಾವರಣದ ವೇದಿಕೆಯೂ ಹೌದು. ಸುಗಮ ಸಂಗೀತವೆಂದರೆ ಸುಲಲಿತ ರಚನೆಯ ಭಾವೋದ್ದೀಪಕ ಗೀತೆಗಳು. ಅದು ಚಿತ್ರಗೀತೆಯೋ, ಭಜನೆಯೋ, ಶಾಸ್ತ್ರೀಯ ಸಂಗೀತವೋ, ಸಂಕೀರ್ತನೆಯೋ ಅಲ್ಲ. ಅದರ ರಚನೆ, ಗಾಯನದ ಮನೋಧರ್ಮ, ತಾಳವಾದ್ಯ ಸಂಯೋಜನೆಗಳೆಲ್ಲ ಲಾಲಿತ್ಯವನ್ನು ಅವಲಂಬಿಸಿ ಭಾವತೀವ್ರತೆಯನ್ನು ಅಪೇಕ್ಷಿಸುತ್ತದೆ. ಇಂಥ ಗಾನಪರಂಪರೆಗೆ ಕನ್ನಡದಲ್ಲಿ ಅತ್ಯಂತ ಜನಪ್ರಿಯತೆ, ಬೇಡಿಕೆ ಇದೆ.

             ಏಕೆಂದರೆ ಭಾವಗೀತೆಯೆಂಬ ಸುಗಮಸಂಗೀತ ಶಾಖೆ ಕನ್ನಡದಲ್ಲಿ ಅಲ್ಲದೇ ಮತ್ಯಾವ ಭಾಷೆಯಲ್ಲೂ ಇಲ್ಲ ಎಂಬುದೇ ವೈಶಿಷ್ಟ್ಯ. ಹೀಗಿರುವಾಗ ಕಾಸರಗೋಡಿನ ಕನ್ನಡದ ಕವಿಗಳೇಕೆ ಇದರಿಂದ ಹೊರದಬ್ಬಲ್ಪಡಬೇಕು..? ಈ ಆಶಯದಿಂದಲೇ ರಂಗಚಿನ್ನಾರಿ ಸಾರಥ್ಯದಲ್ಲಿ "ಈ ನೆಲ..,ಈ ಸ್ವರ" ಎಂಬ ಕಲ್ಪನೆಯೊಂದಿಗೆ ಸ್ವರ ಚಿನ್ನಾರಿ ಅಸ್ತಿತ್ವಕ್ಕೆ ಬಂದಿದೆ. ಇದು ಗೀತೆ ರಚನೆಕಾರರ ಮತ್ತು ಸುಗಮ ಸಂಗೀತ ಗಾಯಕರ ವೇದಿಕೆ. ಗಡಿನಾಡಿನ ನೆಲದಲ್ಲೂ ಸುಗಮ ಸಂಗೀತ ಪರಂಪರೆಯನ್ನು ಬೆಳೆಸುವುದೇ ಇದರ ಧ್ಯೇಯ. ಮೊನ್ನೆ ಮೊನ್ನೆ ಸೆ. 9ರಂದು ಕಾಸರಗೋಡು ಮುನ್ಸಿಪಲ್ ಕಾನ್ಫರೆನ್ಸ್ ಹಾಲ್ ನಲ್ಲಿ ಅನಾವರಣ ಕಂಡ ಈ ವೇದಿಕೆ ಈಗ ಮೊದಲ ಹೆಜ್ಜೆಯನ್ನಷ್ಟೇ ಎತ್ತಿದೆ. ಇದರ ಹಜ್ಜೆ ಗಡಿನಾಡಿನಿಂದ ಬೆಳಗಾವಿಯ ತನಕ ಈ ನೆಲದ ಸ್ವರ ಧ್ವನಿಸಲಿದೆ ಎಂಬುದು ಕಣ್ಣೆದುರಿನ ಕನಸು.


'ಸ್ವರ ಚಿನ್ನಾರಿ' ಯೆಂಬ ಅಂಗಸಂಸ್ಥೆಯನ್ನು ಉದ್ಘಾಟಿಸಿದವರು ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ, ಗಾಯಕ ವೈ.ಕೆ. ಮುದ್ದುಕೃಷ್ಣ. ಅವರು ಕಳೆದ 3ದಶಕದಲ್ಲಿ ಗಡಿನಾಡ ನೆಲದಲ್ಲಿ ನಡೆದ ಸುಗಮಸಂಗೀತ ಚಟುವಟಿಕೆಗಳನ್ನು ನೇರ ಕಂಡವರು, ಪಾಲ್ಗೊಂಡವರು. ಗಡಿನಾಡಿನ ಗ್ರಾಮಗಳಿಗೆ ಗೀತಸಂಗೀತ ರಥವೆಂಬ ಭಾವಗೀತೆಯ ಪಯಣ ನಡೆದಾಗ ಅದರಲ್ಲೊಬ್ಬರಾಗಿ ಹಳ್ಳಿ, ಹಳ್ಳಿಯಲ್ಲಿ ಕನ್ನಡ ಭಾವಗೀತೆ ಮೊಳಗಿಸಿದವರು. ಆದ್ದರಿಂದಲೇ ಗಡಿನಾಡು ಕಾಸರಗೋಡಿನಲ್ಲೂ ಸುಗಮಸಂಗೀತ ಪರಂಪರೆ ಬೆಳೆಯಬೇಕು. ಈ ದಿಶೆಯಲ್ಲಿ ಸುಗಮ ಸಂಗೀತ ಪರಿಷತ್ತಿನ ಗಡಿನಾಡ ಘಟಕ ಈ ನೆಲದಲ್ಲಿ ಅಸ್ತಿತ್ವಕ್ಕೆ ಬರಬೇಕು. ಆ ಮೂಲಕ ಉದಯೋನ್ಮುಖ ಪ್ರತಿಭೆಗಳ ಅನಾವರಣವಾಗಬೇಕು ಎಂದರು.

              ಹೌದಲ್ವೇ...?

          ನಮ್ಮ ನೆಲದ ಎಳೆಯ ಪೀಳಿಗೆಯನ್ನು ಕನ್ನಡದ ಮನಸ್ಸುಗಳಿಂದ ರೂಪಿಸಬೇಕಿದ್ದರೆ ಕನ್ನಡದಲ್ಲಿ ಇಂಥ ಕೆಲಸಗಳು ಆಗಬೇಕಿದೆ. ಇದು ವರ್ತಮಾನದ ಅಗತ್ಯ. ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯ ಅವಕಾಶ ಮತ್ತು ಬೆನ್ತಟ್ಟಿ ಪ್ರೋತ್ಸಾಹಿಸುವ ಬೆಂಬಲಗಳ ಜತೆ ಮಾಗದರ್ಶನ ಸಿಗದೇ ಹೋದರೆ ನಮ್ಮ ಸಾಂಸ್ಕøತಿಕ ಸಮಾಜವನ್ನು ರುಚಿ ಶುದ್ಧತೆಯಿಂದ ಕಾಪಾಡುವುದು ಹೇಗೆ? ಸುಗಮಸಂಗೀತ ಕನ್ನಡದ ಸಾಂಸ್ಕøತಿಕ ಮುಖ. ಅದು ರಸಮಂಜರಿಯಂತೆ ಗುಲ್ಲೆಬ್ಬಿಸುವ ಕಾರ್ಯಕ್ರಮವಲ್ಲ. ಅದು ಕನ್ನಡ ಕಾವ್ಯದ ಶಕ್ತಿಯನ್ನು ಆವಾಹಿಸಿ ಕೇಳುಗನೆದೆಗೆ ಸ್ಪರ್ಶಿಸುವ ಭಾವದ ಸಂಭ್ರಮ. ವರ್ತಮಾನದ ಗುಲ್ಲುಗಳ ನಡುವೆ, ಸಂಘರ್ಷಭರಿತ ಮನೋಸ್ಥಿತಿಯ ನಡುವೆ ಮನುಷ್ಯ ಮನಸ್ಸಿಗೆ ಸಾಂತ್ವನ ಬೇಕಿದ್ದರೆ ಮನುಷ್ಯರೆನಿಸಿಕೊಂಡವರು ಭಾವಗೀತೆಯಂಥ ಮಂದ್ರ ಸಂಗೀತವನ್ನು ಅವಲಂಬಿಸಿತ್ತಾರೆ. ನಮ್ಮದೇ ನೆಲದಲ್ಲಿ ಇಂಥ ಸುಗಮ ಸಂಗೀತ ಪರಂಪರೆ ಬೆಳೆಸಬಾರದೇಕೆ...?

           ಅದಕ್ಕಿರುವ ನಾಂದಿಯೇ 'ಈ ಸ್ವರ-ಈ ನೆಲ' ಎಂಬ ಸ್ವರ ಚಿನ್ನಾರಿಯ ವೇದಿಕೆ. ಇದು ಅನುಷ್ಠಾನಕ್ಕೆ ಬಂದ ಪ್ರಥಮ ಕಾರ್ಯಕ್ರಮ ಕುವೆಂಪು ಅವರ ನಾಡಗೀತೆಯೊಂದಿಗೆ ಆರಂಭವಾಯಿತು. ಬಳಿಕ ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಂಞಣ್ಣ ರೈ, ಪುಂಡೂರು ವೆಂಕಟ್ರಾಜ ಪುಣಿಂಚಿತ್ತಾಯ, ಕೆ.ವಿ.ತಿರುಮಲೇಶ್, ಬಿ. ಕೃಷ್ಣ ಪೈ, ರಮಾನಂದ ಬನಾರಿ, ನಾ. ದಾಮೋದರ ಶೆಟ್ಟಿ, ಶ್ರೀಕೃಷ್ಣಯ್ಯ ಅನಂತಪುರ, ರಾಧಾಕೃಷ್ಣ ಉಳಿಯತ್ತಡ್ಕ, ಡಾ. ಯು. ಮಹೇಶ್ವರಿ, ವಿಜಯಲಕ್ಷ್ಮಿ ಶಾನುಭೋಗ್, ಅನ್ನಪೂರ್ಣ ಬೆಜಪ್ಪೆ, ಶ್ನೇಹಲತಾ ದಿವಾಕರ್,  ಸೌಮ್ಯ ಪ್ರವೀಣ, ಸರ್ವಮಂಗಳಾ ಜಯ್ ಪುಣೀಂಚಿತ್ತಾಯ ಇವರ ರಚನೆಗಳನ್ನು ಹಾಡಲಾಯಿತು.


            ಕವಿಗಳನ್ನು ವೇದಿಕೆಯಲ್ಲಿ ಕುಳ್ಳಿರಿಸಿ, ಗಾಯಕರಿಂದಲೇ ಅವರನ್ನು ಗೌರವಿಸಿ ಅವರ ಸಮ್ಮುಖದಲ್ಲೇ ಅವರ ಕೃತಿ ಗಾಯನವಾಗಿ ಹೊಮ್ಮಿರುವುದು ಇದರ ವೈಶಿಷ್ಟ್ಯ. ತಾನು ಯಾವುದೋ ಸಂದರ್ಭದಲ್ಲಿ ಎಂದೋ ಬರೆದ ಕವಿತೆಯೊಂದು ಮತ್ತೆಂದೋ ಗೀತೆಯಾಗಿ ತಮ್ಮೆದುರೇ ಅನಾವರಣಗೊಳ್ಳುವುದನ್ನು ಕವಿಗಳು ಭಾವಪರವಶತೆಯಿಂದ ಅನುಭವಿಸಿದ ಇದರ ಸನ್ನಿವೇಶ ಅಸುಲಭ. ಗಾಯಕರಾದ ಕಿಶೋರ್ ಪೆರ್ಲ, ರತ್ನಾಕರ ಓಡಂಗಲ್ಲು, ಗಣೇಶ ಪ್ರಸಾದ ನಾಯಕ್ ಹಾಗೂ ಗಾಯಕಿಯರಾದ ಪ್ರತಿಜ್ಞಾ ರಂಜಿತ್, ಅಕ್ಷತಾ ಪ್ರಕಾಶ್, ಬಬಿತಾ ಆಚಾರ್ಯ ಮುನ್ನೆಲೆಯಲ್ಲಿ ಹಾಡಿದರೆ ವಾದ್ಯವೃಂದದಲ್ಲಿ ಪುರುಷೋತ್ತಮ ಕೊಪ್ಪಲ್, ಸತ್ಯನಾರಾಯಣ ಐಲ, ಗಿರೀಶ್ ಪೆರ್ಲ, ಶರತ್ ಪೆರ್ಲ, ಪ್ರಭಾಕರ ಮಲ್ಲ ಪಾಲ್ಗೊಂಡರು. 

                                                                           _ ಎಂ.ನಾ. ಚಂಬಲ್ತಿಮಾರ್

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries