HEALTH TIPS

ಮತ್ತೆ ಕಾಡಾನೆ ಉಪಟಳ: ಆತಂಕದಲ್ಲಿ ಗಡಿ ಪ್ರದೇಶದ ಕೃಷಿಕರು

                ಮುಳ್ಳೇರಿಯ: ಕೇರಳ-ಕರ್ನಾಟಕ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಕಾಸರಗೋಡಿನ ಗಡಿ ಗ್ರಾಮಗಳಾದ ಮಂಡೆಕೋಲು, ಆಲಟ್ಟಿ, ಅಜ್ಜಾವರ ಹಾಗೂ ಕೇರಳ ಭಾಗದ ದೇಲಂಪಾಡಿಯ ಬಹುತೇಕ ಕಡೆಗಳ ಗ್ರಾಮಗಳ ಜನತೆ ವರ್ಷಗಳಿಂದ ಆನೆ ಉಪಟಳದಿಂದ ಕಂಗಾಲಾಗಿದ್ದಾರೆ.

             ಬೆಳೆ ಕೊಯ್ಯಲು ಸಜ್ಜಾದ ಕೃಷಿತೋಟ ಕಾಡಾನೆ ಹಿಂಡಿನ ವಿಹಾರ ತಾಣವಾಗುತ್ತಿರುವುದನ್ನು ದುಃಖಭರಿತವಾಗಿ ನೋಡುವುದು ಪ್ರದೇಶವಾಸಿಗಳ ವಿಧಿಬರಹವಾಗಿದೆ. ಜೊತೆಗೆ ವರ್ಷಗಳ ಶ್ರಮ ನೀರಲ್ಲಿಟ್ಟ ಹೋಮದಂತೆ ನಷ್ಟವಾಗುತ್ತಿರುವುದು ಒಟ್ಟು ಬದುಕಿನ ಪ್ರಶ್ನೆಯಾಗುತ್ತಿದೆ.  ಕರ್ನಾಟಕದ ಅರಣ್ಯ ಭಾಗದಿಂದ ಓಡಿಸಿದರೆ ಕೇರಳದ ದೇಲಂಪಾಡಿ, ಕಾರಡ್ಕ ಗ್ರಾಮಗಳಿಗೆ ಬರುವ ಕಾಡಾನೆಗಳು ಕೃಷಿ ನಾಶ ಮಾಡಿ ಮತ್ತೆ ಕರ್ನಾಟಕಕ್ಕೆ ಧಾವಿಸುತ್ತವೆ.

            ಕರ್ನಾಟಕ ಅರಣ್ಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶವಾದ ಪಂಜಿಕಲ್ಲಲ್ಲಿ ಕಳೆದ ಕೆಲವು ದಿನಗಳಿಂದ ಹತ್ತರಷ್ಟು ಕಾಡಾನೆಗಳು ಬೀಡುಬಿಟ್ಟಿವೆ. ಗುರುವಾರ ಮುಂಜಾನೆ ಇಲ್ಲಿಯ ಹೊಳೆಯ ಮೂಲಕ ಈ ಕಾಡಾನೆಗಳ ಹಿಂಡು ಕಾಡೊಳಗೆ ತೆರಳಿವೆ. ಈ ಹೊಳೆಯ ಮೂಲಕ ಆನೆಗಳ ಹಿಂಡು ನಿರಂತರ ಸಂಚರಿಸುವುದನ್ನು ಅಭ್ಯಾಸಮಾಡಿಕೊಂಡರೆ ಬಳಿಕ ಅವುಗಳ ನಿಯಂತ್ರಣ ಅಶಕ್ಯವೆಂದು ಅರಣ್ಯ ಇಲಾಖೆಯ ಮೂಲಗಳು ಆತಂಕ ವ್ಯಕ್ತಪಡಿಸಿದೆ.


    ದೇಲಂಪಾಡಿ ಗ್ರಾಮ ಪಂಚಾಯತಿಯ ತಲ್ಪಚ್ಚೇರಿಯಿಂದ ಚಾಮೆಕೊಚ್ಚಿಯ ವರೆಗೆ ಕಳೆದ ನಾಲ್ಕು ತಿಂಗಳುಗಳಿಂದ ಸೌರ ತೂಗುಬೇಲಿ ನಿರ್ಮಿಸಲಾಗಿದೆ. ಈ ಸೌರಬೇಲಿ ಆಚೆ ಕೇರಳ ಅರಣ್ಯ ಇಲಾಖೆಯ ಅಡಿಯಲ್ಲಿರುವ 600 ಹೆಕ್ಟೇರ್ ಅರಣ್ಯದೊಳಗೆ ಕಾಡಾನೆಗಳಿದ್ದು, ಸೌರ ಬೇಲಿಗೆ ಬೆದರಿ ಕಾಡಾನೆಗಳು ಇತ್ತ ಸುಳಿಯುತ್ತಿರಲಿಲ್ಲ.  ಇದೀಗ ಕರ್ನಾಟಕ ಭಾಗದಿಂದ ಗಡಿ ದಾಟಿ ಕಾಡಾನೆಗಳು ಧಾವಿಸುತ್ತಿದ್ದು, ಮಧ್ಯದ ದೇಲಂಪಾಡಿಯ ಹಲವು ಪ್ರದೇಶಗಳ ಕೃಷಿ ತೋಟಗಳು ಕಳೆದ ಕೆಲವು ದಿನಗಳಿಂದ ಧೂಳೀಪಟವಾಗುತ್ತಿದೆ.

       ಈ ಮಧ್ಯೆ ಹಲವೆಡೆ ಅರಣ್ಯ ಇಲಾಖೆ ಸೌರ ವಿದ್ಯುತ್ ಬೇಲಿ ಅಳವಡಿಸಿದ್ದರೂ ಸಮಯೋಚಿತವಾಗಿ ದುರಸ್ತಿ ಕಾಮಗಾರಿಗಳನ್ನು ನಡೆಸದಿರುವುದರಿಂದ ಉಪಯೋಗಶೂನ್ಯವಾದ ಸ್ಥಿತಿಯಲ್ಲಿದೆ.



          ಬೇಲಿಗೆ ಕಾಡುಬಳ್ಳಿ ಆವರಿಸಿ ವಿದ್ಯುತ್ ಪ್ರವಾಹ ಉಂಟಾಗದಿರುವುದು ಆನೆ ಬರಲು ಕಾರಣವಾಗುವ ಸಾಧ್ಯತೆಯೂ ಇದೆ.  ಸೌರ ವಿದ್ಯುತ್ ಪ್ಯಾನಲ್‍ನ ಬ್ಯಾಟರಿಗಳನ್ನು ಚಾರ್ಜ್ ಮಾಡುವುದಿಲ್ಲ ಎಂಬ ದೂರು ಕೇಳಿಬರುತ್ತಿದೆ. ಕರ್ನಾಟಕದ ಅರಣ್ಯ ಗಡಿ ಭಾಗದಲ್ಲಿ ಅಳವಡಿಸಿದ ಸೌರ ವಿದ್ಯುತ್ ಬೇಲಿಗಳಲ್ಲಿ ಹರಡುವ ಕಾಡು ಕಡಿಯಲು ಅರಣ್ಯ ಇಲಾಖೆ ತಾತ್ಕಾಲಿಕ ಸಿಬಂದಿಗಳನ್ನು ನೇಮಿಸಿದೆಯಾದರೂ ಬೇಲಿಗಳನ್ನು ತಪ್ಪಿಸಿ ಕಾಡಾನೆ ಇಳಿಯುವುದು ಸಾಮಾನ್ಯವಾಗಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.


          ಗಡಿ ಭಾಗದಲ್ಲಿ ಕಬ್ಬಿಣದ ಬೇಲಿ ನಿರ್ಮಿಸಿ ಕರ್ನಾಟಕ ಕ್ರಮ ಚುರುಕುಗೊಳಿಸಿರುವುದರಿಂದ ಆನೆಗಳು ಗಡಿ ದಾಟಿ ಕೇರಳಕ್ಕೆ ಬರುತ್ತಿವೆ. ಮುಳಿಯಾರು, ಕಾರಡ್ಕ ಪಂಚಾಯಿತಿಗಳಲ್ಲಿ ಸೌರಬೇಲಿ ನಿರ್ಮಿಸಿರುವುದರಿಂದ ಈಗ ಇವು ಪರಪ್ಪದಲ್ಲಿ ಠಿಕಾಣಿ ಹೂಡುತ್ತಿವೆ.

       ಇದರಿಂದ ಚೆರ್ಕಳ-ಜಾಲ್ಸೂರು ಅಂತಾರಾಜ್ಯ ಹೆದ್ದಾರಿಯ ಪ್ರಯಾಣ ಆತಂಕಕ್ಕೀಡಾಗಿದೆ. ಸಂಜೆಯಾದರೆ ಆನೆಗಳು ರಸ್ತೆ ದಾಟುವುದು ಸಾಮಾನ್ಯವಾಗಿದೆ. ಆನೆಗಳ ಉಪಟಳ ಕಾರಣ ದೇಲಂಪಾಡಿಯ ಗಡಿ ಗ್ರಾಮಗಳಿಂದ ಕೃಷಿಕರು ಮನೆ ಬಿಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿ, ಡಿಎಫ್‍ಒ ಅವರು ಕರ್ನಾಟಕದ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಬೇಕೆಂದು ಕೃಷಿಕರು ಒತ್ತಾಯಿಸುತ್ತಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries