HEALTH TIPS

ಹೀಗೊಂದು ಜಲಾಂದೋಲನ-'ನೀರ ನೆಮ್ಮದಿಯತ್ತ ಪಡ್ರೆ'- ಸ್ವರ್ಗ ತೋಡಲ್ಲಿ ವರ್ಷಪೂರ್ತಿ ನೀರು ಹರಿಸುವ ವಿಶ್ವಾಸ- ಉಗಮ ಸ್ಥಾನದಿಂದ 7 ಕಿ.ಮೀ. ವ್ಯಾಪ್ತಿಯಲ್ಲಿ ಸರಣಿ ಕಟ್ಟ ನಿರ್ಮಿಸಲು ಪಣತೊಟ್ಟ ಜಲಯೋಧರು!

     

    ಪೆರ್ಲ:  ಸ್ವರ್ಗ ತೋಡಿನ ಪುನರುದ್ಧಾರ ಹಾಗೂ ವರ್ಷಪೂರ್ತಿ ನೀರು ಹರಿಸುವ ಕನಸಿನೊಂದಿಗೆ 'ನೀರು ನೆಮ್ಮದಿಯತ್ತ ಪಡ್ರೆ' ಜಲಯೋಧರ ಪಡೆ ತೋಡಿನ ಉಗಮ ಸ್ಥಾನ ಕಿಂಞÂಣ್ಣಮೂಲೆಯಲ್ಲಿ ಆರಂಭಿಸಿದ ನಡಿಗೆ ಅಧ್ಯಯನ ಬುಧವಾರ ಪೊಯ್ಯೆ, ಅಜಕ್ಕಳಮೂಲೆ ತಲಪಿದೆ.
    ಈ ಹಿಂದೆ ಕಿಂಞÂಣ್ಣಮೂಲೆಯಿಂದ ಅಜಕ್ಕಳಮೂಲೆ ವರೆಗೆ ಸುಮಾರು 7ಕಿ.ಮೀ.ತೋಡಿನಲ್ಲಿ ಸ್ಥಳೀಯ ಕೃಷಿಕರು ಪ್ರತಿ ವರ್ಷ ಕಟ್ಟುವ ಕಟ್ಟಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಸ್ವರ್ಗದಿಂದ ಮೊಳಕ್ಕಾಲು, ಪಾಲೆಪ್ಪಾಡಿ, ಪೊಯ್ಯೆಗಳಲ್ಲಿ ಕಟ್ಟ ನಿರ್ಮಿಸದೆ ಇರುವುದೆ ಈ ಬಾರಿಯ ಜಲಕ್ಷಾಮಕ್ಕೆ ಕಾರಣ ಎಂದು ಅಲ್ಲಲ್ಲಿನ ಕೃಷಿಕರು ಬೊಟ್ಟು ಮಾಡಿ ತೋರಿಸಿದ್ದಾರೆ.  ಕೃಷಿ ಅಗತ್ಯಕ್ಕೆ ಕೊಳವೆ ಬಾವಿಯ ಉಪಯೋಗದಲ್ಲಿ ತೊಡಗಿರುವುದೇ ಕಟ್ಟಗಳ ಸಂಖ್ಯೆ ಕಡಿಮೆಯಾಗಲು, ಹಾಗೂ ಇದರಿಂದ ತೋಡು ಸಂಪೂರ್ಣ ಬತ್ತಿ ಬರಡಾಗಲು ಪ್ರಮುಖ ಕಾರಣ. ಸರಕಾರ ಅಥವಾ ಆಡಳಿತ ವ್ಯವಸ್ಥೆಯ ಸಹಾಯಕ್ಕೆ ಕೈಚಾಚದೆ ಹಿಂಗಾರು ಮಳೆ ಬಳಿಕ 7ಕಿ.ಮೀ.ತೋಡಿನ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸುವ ಗುರಿ ಇರಿಸಲಾಗಿದೆ.ಅಧ್ಯಯನ ತಂಡದ ಅಂದಾಜು ಪ್ರಕಾರ ಸುಮಾರು 30ರಿಂದ 40ರಷ್ಟ ಸರಣಿ ಕಟ್ಟ ಕಟ್ಟಬಹುದು. ಪ್ರಥಮ ಕಟ್ಟವನ್ನು ಉತ್ಸವ ರೀತಿಯಲ್ಲಿ ಉದ್ಘಾಟಿಸುವ ಮೂಲಕ ಸರಣಿ ಕಟ್ಟಗಳ ನಿರ್ಮಾಣವನ್ನು ಮೊದಲ ವರ್ಷ ಆಂದೋಲನವಾಗಿಸಲು ಉತ್ಸಾಹಿಗಳು ತೀರ್ಮಾನಿಸಿದ್ದಾರೆ. ಕಟ್ಟಗಳ ನಿರ್ಮಾಣದ ಔಚಿತ್ಯ ಹಾಗೂ ಮಹತ್ವದ ಕುರಿತು ಜಾಗೃತಿ ಮೂಡಿಸಲು 'ಕಟ್ಟಗಳು' ಸಂಪೂರ್ಣ ಮಾಹಿತಿಯ ಪುಸ್ತಕ ವಿತರಿಸಲಾಗಿದೆ. ಇವೆಲ್ಲದರ ಜೊತೆ ಸಣ್ಣ ಹಿಡುವಳಿ, ದರ್ಖಾಸುಗಳಲ್ಲಿರುವ ಬಡ ಜನರ ಬಾವಿಗಳ ಮರು ಪೂರಣಕ್ಕೂ ಮಾರ್ಗದರ್ಶನ ನೀಡಲು ಉತ್ಸಾಹಿಗಳು ಮುಂದಾಗಿದ್ದಾರೆ. ಕೆಲಸ ಮಾಡಲು ತಯಾರಾದ ನಾಲ್ಕೈದು ಮನೆಗಳನ್ನು ಕೇಂದ್ರೀಕರಿಸಿ ಅವರಿಗೆ ಮಾರ್ಗದರ್ಶನ ನೀಡಿ 2ರಿಂದ 4ರಷ್ಟು ಮಾನವ ದಿನಗಳ ಕೆಲಸ ನಡೆದರೆ ಬಾವಿಯಲ್ಲಿ ನೀರು ಹೆಚ್ಚಿಸಬಹುದು ಎನ್ನುವುದು ಅವರು ನೀಡುವ ಸೂಚನೆ. ಮಳೆನೀರು ಗುಡ್ಡದ ತುದಿಯಿಂದ ತೋಡಿಗೆ ಹರಿದು ಬರಲು ಕೆಲವೇ ನಿಮಿಷಗಳು ಸಾಕು.ಆದರೆ ಗುಡ್ಡೆಯ ಮೇಲ್ತುದಿಯಲ್ಲಿ ಇಂಗಿಸಿದ ನೀರು ಒರತೆ ರೂಪದಲ್ಲಿ ತೋಡು ಸೇರಲು ಹಲವು ತಿಂಗಳುಗಳೇ ಬೇಕು. ಇದೇ ಕಾರಣದಿಂದ ಸ್ವರ್ಗ ತೋಡಿಗೆ ನೀರುಣಿಸುವ ಮುಖ್ಯ ಕೇಂದ್ರಗಳನ್ನು ಗುರುತಿಸಲು ಉದ್ದೇಶಿಸಲಾಗಿದೆ.ಏರು ಗುಡ್ಡಗಳ ಮೇಲ್ತುದಿಯಲ್ಲಿ ಮಳೆ ನೀರನ್ನು ತಡೆದು ನಿಲ್ಲಿಸಿ ಇಂಗಿಸಲು, ತೋಡಿನ ಎರಡೂ ಬದಿಗಳಲ್ಲಿ ಮಳೆಗಾಲದ ನೀರು ಬರುವ ಕಣಿವೆಗಳನ್ನು ಗುರುತಿಸಲು ನಿರ್ಧರಿಸಲಾಗಿದೆ. ಬಳಿಕ ಹಂತ ಹಂತವಾಗಿ ಸ್ಥಳ ನಿಗದಿ ಪಡಿಸಿ ಅಲ್ಲಿಯೂ ನೀರಿಂಗಿಸುವ ಪ್ರಯತ್ನ ನಡೆಸಲಿದ್ದಾರೆ. ಅವರವರ ಜಮೀನಿನಲ್ಲಿ ಮಳೆ ನೀರು ಹರಿದೋಡದಂತೆ ಅಲ್ಲಲ್ಲಿ ತಡೆ ನಿಲ್ಲಿಸುವುದು ಸುತ್ತು ಬಳಸಿ ಹೋಗುವಂತೆ ಮಾಡುವುದು ಮುಂದಿನ ಕ್ರಿಯಾ ಯೋಜನೆ.ಕ್ಷಾಮ ಪರಿಸ್ಥಿತಿಯಿಂದ ಹೊರ ಬರುವ ಇದಕ್ಕಿಂತ ಸರಳ ಸೂತ್ರ ಬೇರೊಂದಿಲ್ಲ ಎನ್ನುತ್ತಾರೆ ಈ ಯೋಜನೆಯ ಸಾರಥಿ ಜಲತಜ್ಞ ಶ್ರೀ ಪಡ್ರೆ.
        ಈ ಎಲ್ಲಾ ಕ್ರಿಯಾ ಯೋಜನೆಗಳಲ್ಲಿ ಊರ ಸಮಸ್ತರು ಒಂದಾಹಿ ಕೆಲಸ ಮಾಡಿದರೆ ಎರಡು ಮಳೆಗಾಲದ ಬಳಿಕ ಸ್ವರ್ಗ ತೋಡು ವರ್ಷವಿಡೀ ಹರಿಯಬಹುದು ಎನ್ನುವುದು ಜಲಯೋಧರ ವಿಶ್ವಾಸ. ಪ್ರಕೃತಿದತ್ತ,  ಪಂಚಭೂತಗಳಲ್ಲಿ ಒಂದಾದ, ಚರಾಚರ ಜೀವಿಗಳ ಇರುವಿಕೆಗೆ ಕಾರಣವಾದ ಜಲ ಸಂಪನ್ಮೂಲವನ್ನು ಲವ ಲೇಶವೂ ಪೋಲು ಮಾಡದೆ, ಬಳಕೆಯಲ್ಲಿ ಸೂಕ್ಷ್ಮತೆ, ಸ್ವನಿಯಂತ್ರಣ ಪಾಲಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.
       ಅಭಿಮತ:
   ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯಲ್ಲಿ ಖಾಸಗಿ ಜಮೀನು, ಗುಡ್ಡೆಗಳಲ್ಲಿ ಬಹಳಷ್ಟು ಇಂಗು ಗುಂಡಿ ನಿರ್ಮಿಸಲಾಗಿದೆ. ಆದರೆ ಅವೈಜ್ಞಾನಿಕ ರೀತಿಯಲ್ಲಿ ಇಂಗು ಗುಂಡಿ ನಿರ್ಮಿಸಿರುವುದರಿಂದ ನೀರಿಂಗಿಸುವ ಪ್ರಯತ್ನ ಸಫಲಗೊಂಡಿಲ್ಲ. ನೀರಿನ ಹರಿವು, ಮಣ್ಣಿನ ನೀರಿಂಗಿಸುವ ಗುಣದ ಅಧ್ಯಯನ ನಡೆಸಿ ಇಂಗು ಗುಂಡಿ ನಿರ್ಮಿಸುವುದು ಪ್ರಾಯೋಗಿಕ ಹಾಗೂ ಉತ್ತಮ ರೀತಿಯ ಮರು ಪೂರಣ ಸಾಧ್ಯ.
               -ಶ್ರೀಪಡ್ರೆ
               ಜಲತಜ್ಞ,  ಪತ್ರಕರ್ತರು.
................................................................................................

       'ನಾಲ್ಕು ತಿಂಗಳ ಕಾಲ ನಮ್ಮ ತಲೆಮೇಲಿಂದ ಸುರಿಯುವ ಮಳೆ' ಸುಲಭ ಲಭ್ಯವಿದ್ದೇನೆ ಬೇಕಿದ್ದರೆ ಹಿಡಿದಿಟ್ಟುಕೋ ಎಂದುಸುರುತ್ತದೆ.ಮತ್ತೆ ನಾಲ್ಕು ತಿಂಗಳು ನಮ್ಮ ತೋಡು-ಹಳ್ಳ-ಹೊಳೆಗಳು 'ಒಂದು ಕಟ್ಟ ಕಟ್ಟಿ ಸಾಕು ನೀರು ನಿಮ್ಮದು ಎಂದುಲಿಯುತ್ತವೆ.ಈ ಎರಡು ಸಂದೇಶಗಳಿಗೆ ಬೆಲೆ ಕೊಡದಿದ್ದಲ್ಲಿ ಮುಂದಿನ ನಾಲ್ಜು ತಿಂಗಳು ನೀವು ನಿಮ್ಮ ನಿಷ್ಕ್ರಿಯತೆಗೆ ಬೆಲೆ ಕೊಡಬೇಲಾಗುತ್ತದೆ' (ಆಧಾರ-ಕಟ್ಟಗಳು ಪುಸ್ತಕ)
.....................................................................................................
        ಅಭಿಮತ:
   'ನೈಸರ್ಗಿಕ ಜಲಮೂಲಗಳ ಪುನಶ್ಚೇತನಕ್ಕೆ ಒತ್ತು ನೀಡುತ್ತಿದ್ದಲ್ಲಿ ಕೊಳವೆ ಬಾವಿ ಸಂಖ್ಯೆ ಅದೆಷ್ಟೋ ಇಳಿಮುಖವಾಗುತ್ತಿತ್ತು.ನುರಿತ ಕಾರ್ಮಿಕರ ಅಭಾವ, ಪ್ರಾಯೋಗಿಕ ಸಮಸ್ಯೆ, ತಾಳ್ಮೆ ಕೊರತೆಯಿಂದ ಬಾವಿ, ಕೆರೆ ನಿರ್ಮಾಣಕ್ಕೆ ಜನರು ಮುಂದಾಗುತ್ತಿಲ್ಲ.ಹಣವಿದ್ದಲ್ಲಿ ಕೇವಲ ಗಂಟೆಗಳಲ್ಲಿ ನೀರು ಹರಿಸ ಬಹುದು ಎಂಬ ಕಾರಣದಿಂದ ನಿರೀಕ್ಷೆಯನ್ನೂ ಮೀರಿಸಿ ದಿನೇ ದಿನೇ ಅಸಂಖ್ಯ ಸಂಖ್ಯೆಯ ಕೊಳವೆ ಬಾವಿ ನಿರ್ಮಾಣವಾಗುತ್ತಿದೆ'
            - ಕೆ.ವೈ.ಸುಬ್ರಹ್ಮಣ್ಯ ಭಟ್
        ನಿವೃತ್ತ ಮುಖ್ಯ ಶಿಕ್ಷಕರು, ಸ್ವರ್ಗ ಶಾಲೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries