HEALTH TIPS

ನಾಗನೆಂಬ ಮನೋಮಂಡಲ: ಸಂಸ್ಕೃತಿ ಪಥ

       ಆದಿಮ ಸಂಸ್ಕೃತಿಯಿಂದ ತೊಡಗಿ ಇಂದಿನವರೆಗಿನ ಕಲಾಸಂಸ್ಕೃತಿಯನ್ನು ಮೆಲುಕು ಹಾಕುವಾಗ ನಾಗಾರಾಧನೆಯು ಎಲ್ಲ ಹಂತಗಳಲ್ಲಿಯೂ ಕಂಡುಬರುತ್ತದೆ. ಜನಪದೀಯ ಮೂಲದ ನಾಗಾರಾಧನೆಯನ್ನು ಮೂಢನಂಬಿಕೆಯೆಂದು ಆಧುನಿಕ ವಿಚಾರವಾದಿಗಳು ಗೊಣಗಬಹುದಾದರೂ ನಾಗರಾಜ ಪ್ರಪಂಚದ ಬಹುತೇಕ ಸಂಸ್ಕೃತಿಗಳಲ್ಲಿ ಪೂಜಾರ್ಹನಾಗಿದ್ದಾನೆ. ನಾಗರಾಜನು ಮಂದಿರದ ಶಿಲ್ಪಗಳಲ್ಲಿ ಆರಾಧನಾ ಮೂರ್ತಿಯಾಗಿಯೂ ವಾಸ್ತುಶಿಲ್ಪಗಳಲ್ಲಿ ಮಂಗಳಕಾರಕ ವಿನ್ಯಾಸವಾಗಿಯೂ ರಾಜಮುದ್ರೆ-ಕಿರೀಟಗಳಲ್ಲಿ ಅಧಿಕಾರ ಸೂಚಕವಾಗಿಯೂ ಕುಲಪಂಗಡಗಳ ಲಾಂಛನವಾಗಿಯೂ ಮಳೆ-ಬೆಳೆ, ಫ‌ಲವತ್ತತೆ, ಸಂತಾನಾಭಿವೃದ್ಧಿ, ರೋಗಶಮನ, ಸಂಪದಭಿವೃದ್ಧಿ ಮುಂತಾದ ಭಾಗ್ಯಗಳ ಅಧಿದೇವತೆಯಾಗಿಯೂ ಮನುಕುಲದ ರಕ್ಷಕ ಎಂಬ ಕೀರ್ತಿಗೆ ಪಾತ್ರವಾಗಿದ್ದಾನೆ. ಕಲಾವಿದರಿಗೆ ನಾಗರೂಪ ಅಚ್ಚುಮೆಚ್ಚಿನದಾಗಿದ್ದು ಆಧುನಿಕ ಕಲಾ ಸಂಸ್ಕೃತಿಯಲ್ಲಿ ನಡೆಯುವ ನಾಗಮಂಡಲದಂತಹ ಆಚರಣೆಗಳು ವಿವಿಧ ವರ್ಗದ ಕಲಾವಿದರಿಗೆ ಪೋಷಣೆ ನೀಡುತ್ತಿದೆ.  
       ಆದಿಮಾನವನು ದೈವತ್ವವನ್ನು ಕಲ್ಪನೆ ಮಾಡಿದ ಅತಿಪ್ರಾಚೀನ ಪ್ರಾಣಿಚಿಹ್ನೆ ಸರ್ಪ (ಟೋಟಂ) ಎನ್ನಲಾಗಿದೆ. ಯಾಕೆಂದರೆ ಮಾನವ ಆರಂಭದಲ್ಲಿ ಪ್ರಕೃತಿಯನ್ನು ಪೂಜಿಸಿದ. ನಾಗ ಪ್ರಕೃತಿ ಸ್ವರೂಪ. ನಾಗನ ದೇಹ ಬಳ್ಳಿಗಳ ತೆರನಾಗಿದೆ.  ನಾಗ ವಾಸಿಸುವ ಜಾಗವೂ ವನವಾಗಿದೆ. ಹಾಗಾಗಿ ಜೀವಂತ ರೂಪಗಳಲ್ಲಿ ಪೂಜಿಸಲ್ಪಡುವ ಪ್ರಾಣಿಗಳಲ್ಲಿ ನಾಗರಹಾವು ಅಗ್ರಗಣ್ಯವಾಗಿದೆ. ಸರ್ಪದ ಆಕರ್ಷಕ ಭಂಗಿಗೆ ಮರುಳಾಗದವರುಂಟೇ? 
       ಮಗು ರೂಪಿಸುವ ಮೊದಲ ಅಕ್ಷರವೇ ಸೊನ್ನೆ. ಸಂಖ್ಯಾಶಾಸ್ತ್ರದಲ್ಲಿ ಈ ಸೊನ್ನೆಗಿರುವ ಬೆಲೆ ವಿಶೇಷವಾದುದು. ನಾಗ ಸುರುಳಿಯಾಗಿ ಸುತ್ತಿ ನಿರ್ಮಿಸುವ ರೂಪದಿಂದ‌ ಪೂಜನೀಯವಾಗಿದ್ದಾನೆ. ಈ ಭೂಮಂಡಲದ ಸಂಕೇತವಾಗಿ ದ್ದಾನೆ. ಅದನ್ನು ತಾನು ಎತ್ತಿ ಹಿಡಿದಿದ್ದೇನೆ ಎಂಬ ಜನಪದರ ನಂಬಿಕೆಗೆ ಇಂಬುಕೊಡುತ್ತಿದ್ದಾನೆ. ನಮ್ಮ ದೇಹ ರಕ್ತನಾಳ, ನರಗಳಿಂದ ಕೂಡಿದ್ದು ನಾಗರ ಹಾವಿನ ದೇಹದ ಬಳುಕುವ ಭಂಗಿಗೆ ಸಂವಾದಿಯಾಗಿದೆ. ನರದ ಕಾಯಿಲೆ ಬಂದಾಗ ನಾಗಪೂಜೆಯನ್ನು ಜನಪದರು ನಡೆಸುತ್ತಾರೆ. 

      ನಾಗನ ವಿಶೇಷ ಹಬ್ಬ ನಾಗರಪಂಚಮಿ. ಆಷಾಢದ ಮೌಡ್ಯ ಕಳೆದು ಬರುವ ಶ್ರಾವಣಮಾಸದಲ್ಲಿ, ಮಳೆಗಾಲದ ಮೇಘಗಳ ನೀರುಣಿಸುವಿಕೆಯಿಂದ ಹಚ್ಚಹಸುರಾಗಿ ಅರಳಿರುವ ಪೃಕೃತಿಯ ಮೋಹಕರೂಪದೆದುರು ಈ ಹಳದಿಯ ಹಬ್ಬ ಮೊದಲ ಪೂಜೆಯಾಗಿ ಬರುತ್ತದೆ. ಊರಿಗೆ ಊರೇ ಸೇರಿ ನಾಗರಪಂಚಮಿಯನ್ನು ಸಡಗರದಿಂದ ಆಚರಿಸುತ್ತಾರೆ. ಅಂದು ನಾಗನ ಶಿಲೆಗಳಿಗೆ ಪಂಚಾಮೃತಗೈದು ಅರಶಿಣದಿಂದ, ಹೂವಿನಿಂದ ಅಲಂಕಾರ ಮಾಡಿ ಪಂಚಾರತಿ ಬೆಳಗುತ್ತಾರೆ. ಇದರಿಂದ ಮಳೆ-ಬೆಳೆ-ನೆಮ್ಮದಿ ಊರಿಗೆ ಸಿಗುತ್ತದೆ ಎಂದು ಜನರು ನಂಬಿದ್ದಾರೆ. ಇಲ್ಲಿಂದ ಆರಂಭವಾಗಿ ನಾಗನ ವಿವಿಧ ಪ್ರಕಾರದ ಪೂಜೆಗಳನ್ನು ವರ್ಷವಿಡೀ ಗೈಯ್ಯುತ್ತಾರೆ. ನಾಗನ ಪೂಜೆಯು ಜನಪದ ಕಲೆಯ ವಿಶಿಷ್ಟ ಅಂಗ ವಾಗಿದ್ದು ಬಹಳ ಕಲಾತ್ಮಕವಾಗಿ ನಡೆಯುತ್ತದೆ. ಅವುಗಳಲ್ಲಿ ಆಶ್ಲೇಷಾ ಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ನಾಗಸಂದರ್ಶನ ಹಾಗೂ ವಿಶೇಷ ವಾಗಿ ತನುತರ್ಪಣ ಮಂಡಲ, ನಾಗಮಂಡಲ- ಬ್ರಹ್ಮಮಂಡಲ- ಡಕ್ಕೆಬಲಿ ಸೇವೆಗಳು ನಡೆಯತ್ತವೆ. ಇವೆಲ್ಲದರ ಹಿಂದೆ ವರ್ಣಾಲಂಕಾರ ಮತ್ತು ಕಲಾತ್ಮಕತೆ ತುಂಬಾ ಇದೆ. ನಾಗಪೂಜೆಯೆಂಬುದು ದೊಡ್ಡ ಕಲಾರಾಧನೆ.

    ನಾಗನ ಮೈಬಣ್ಣವಾದ ಹಳದಿ ಶ್ರೀಮಂತ ವರ್ಣ. ಆತನ ಪೂಜೆಯಲ್ಲೂ ಹಳದಿ ಬಣ್ಣದ ಅರಶಿಣದ ಬಳಕೆ ಅಧಿಕ. ಆತನಿಗೆ ಪ್ರಿಯವಾದ ಹೂವುಗಳಾದ ಕೇದಿಗೆ-ಸಂಪಿಗೆಗಳೂ ಹಳದಿ ವರ್ಣದವೇ. ನಾಗನನ್ನು ತಮ್ಮ ಜತೆಗೆ ಸೇರಿಸದ ದೇವತೆಗಳಿಲ್ಲ. ಅವರ ಕಿರೀಟದಲ್ಲಿ, ಆಭರಣಗಳಲ್ಲಿ, ಆಯುಧಗಳ ರೂಪದಲ್ಲಿ ನಾಗ ಸೇರಿಕೊಂಡಿದ್ದಾನೆ. ಕಲಾವಿದರಿಗಂತೂ ನಾಗನ ಬಳುಕು ದೇಹ ವಿನ್ಯಾಸಕ್ಕೆ ಬೇಕೇ ಬೇಕು. ಅದು ಗುಹಾಲಯವಾಗಲೀ ರಥವಾಗಲೀ ದೇವಾಲಯವಾಗಲೀ ಶಿಲ್ಪವೈಭವದ ಗುಡಿಯಾಗಲೀ ಅಥವಾ ವಾಸ್ತುವೈಭವದ ಕಟ್ಟಡವಾಗಲೀ ಅಲ್ಲಿರುವ ಮರ-ಕಲ್ಲು-ಕಬ್ಬಿಣ- ಗಾರೆ ಎಲ್ಲೆಂದರಲ್ಲಿ ಕಲಾವಿದರು ನಾಗನ ರೂಪವನ್ನು ಸೇರಿಸಿಕೊಂಡು ವಿಶೇಷ ಸೌಂದರ್ಯ ಮೂಡಿಸುತ್ತಾರೆ. ಹಾಗಾಗಿ ವಿಶ್ವಕಲೆಯಲ್ಲಿ ನಾಗನರೂಪ ಎಲ್ಲೆಡೆ ಕಾಣಸಿಗುತ್ತದೆ. 

     ಒಟ್ಟಿನಲ್ಲಿ ನಾಗಪೂಜೆ ವರ್ಣರಂಜಿತವಾಗಿ ಲಲಿತಕಲೆಗಳ ಸಂಗಮವಾಗಿರುತ್ತದೆ. ಇದರ ಹಿಂದೆ ಪ್ರಕೃತಿಯೆಂಬ ಕಲಾರಾಧನೆಯೂ ಇದೆ. ಪ್ರಕೃತಿಯನ್ನು ರಕ್ಷಿಸದೆ ಹೋದರೆ ನಾಗನೂ ಇಲ್ಲ; ಕಲಾರಾಧನೆಯೂ ಇಲ್ಲ ಎಂದಾಗಬಹುದು. ಹಾಗಾಗದಂತೆ ರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.  

         ಭೌತ ವಿಜ್ಞಾನ ಹೇಳುವಂತೆ ಹುತ್ತಕ್ಕೆ ಹಸುವಿನ ಹಾಲೆರೆದು ಆ ಮಣ್ಣಿನ ಸ್ವೀಕಾರದಿಂದ ಸಂತಾನ ಪ್ರಾಪ್ತಿಯಾಗುವುದೆಂದು ನಂಬಿದ್ದಾರೆ. ಅದು ಮೌಢ್ಯವಲ್ಲ; ಹುತ್ತದಲ್ಲಿ ಹಸಿವೆಯಿಂದ ಕಂಗೆಟ್ಟ ಹಾವುಗಳು ಚಲಿಸುವಾಗ ಅವುಗಳ ರಜಸ್ಸು ಮತ್ತು ತೇಜಸ್ಸು ಹುತ್ತದ ಪರಿಷ್ಕೃತ ಮಣ್ಣಿಗೆ ಅಂಟಿಕೊಂಡಿದ್ದು, ಅದರ ಮೇಲೆ ಗೋವಿನ ಹಾಲು ಬಿದ್ದಾಗ ಆರೋಗ್ಯಕ್ಕೆ ಹಿತವಾದ ವಿಶಿಷ್ಟ ಬಗೆಯ ವಾಯುವೊಂದು ಹೊರಹೊಮ್ಮುತ್ತದೆ. ಅದು ಕೆಲವು ಲೈಂಗಿಕ ದೋಷಗಳಿಗೆ ವಿಶಿಷ್ಟ ಪರಿಹಾರವಾಗುತ್ತದೆ ಎನ್ನಲಾಗಿದೆ.

     ನಾಗನ ಬಗ್ಗೆ ಮನೋವಿಜ್ಞಾನ ಹೇಳುವಂತೆ, ಪುರಾಣಗಳಲ್ಲಿ ಬರುವ ಐದೇಳು ಹೆಡೆಗಳುಳ್ಳ ಶೇಷನೆಂದರೆ ಅದು ಮೆದುಳಿನ ಬಳ್ಳಿಗಳು. ಸೂಕ್ಷ್ಮನಾಳಗಳೇ ಅನಂತ ಫಣಗಳು. ಇವುಗಳ ಮೇಲೆ ನಲಿದು ನಿಯಂತ್ರಿಸಿ ಅವುಗಳಲ್ಲಿರುವ ವಿಷ ಆಕರ್ಷಣವೇ ‘ಕಾಳಿಂಗ ಮರ್ದನ’ ಎಂದು ಕರೆಯಲಾಗುತ್ತದೆ.

     ಯೋಗ ವಿಜ್ಞಾನದ ಪ್ರಕಾರ ಮಂಡಲಗಳಲ್ಲಿ ಮಂಡಿತನಾಗುವ ನಾಗದೇವ, ಅದು ನರನಾಡಿ ಮಂಡಲಗಳಲ್ಲಿ ಅವಿತಿರುವ ‘ಕುಂಡಲಿನಿ’. ಅದು ಜಾಗೃತವಾಗಿ ಹೆಡೆ ಬಿಚ್ಚಿದಾಗಲೇ ಮನುಷ್ಯ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಲ್ಲ.

    ಖಗೋಳ ವಿಜ್ಞಾನಿಗಳು ಹೇಳುತ್ತಾರೆ– ಗುರುತ್ವಾಕರ್ಷಣ ಶಕ್ತಿಯ ಜಾಲವನ್ನೇ ಪುರಾಣಿಕರು ಸಂಕರ್ಷಣನ ಹೆಡೆಗಳ ಮೂಲಕ ಚಿತ್ರಿಸಿದ್ದಾರೆ ಎಂದು.

      ನಾಗಾರಾಧನೆಯ ಬಗ್ಗೆ ಆರೋಗ್ಯ ವಿಜ್ಞಾನ ಹೀಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸಪ್ತಧಾತುಗಳ ಸ್ಥಿತಿ ಗತಿಗಳ ಮೇಲೆ ಆಧೃತವಾದ ಕಾಯ, ಲತೆಯ ಸಂಕೇತವಿರಬೇಕು ಎಂದು. ಶ್ರಾವಣ ಮಾಸದಲ್ಲಿ ಫಸಲು ಬಿಡುವ ಸಂದರ್ಭ, ಇಲಿ ಕೀಟಗಳ ಬಾಧೆ ತಡೆಯಲು ಸರ್ಪಗಳ ಅನುಗ್ರಹವೇ ಬೇಕು. ಈ ಕಾರಣಕ್ಕಾಗಿ ಆ ಸಂದರ್ಭಗಳಲ್ಲಿ ಸರ್ಪಗಳಿಗೆ ಹಾಲಿನ ಉಪಚಾರ ಎಂದು ಕೃಷಿ ವಿಜ್ಞಾನ ಹೇಳುತ್ತದೆ.

     ಸರ್ಪ ಮನ್ಮಥನ ಚಿಹ್ನೆ. ಇದನ್ನು ಗೂಢವಾಗಿ ಯೋಚಿಸಿದಾಗ ನಮ್ಮ ಸಾಹಿತ್ಯದಲ್ಲಿ ಹಾಸು ಹೊಕ್ಕಾದ ಲಾಂಛನವಾಗಿದೆ ಎಂದು ಹೇಳುತ್ತದೆ ಕಾಮ ವಿಜ್ಞಾನ, ನಮ್ಮ ಜಾತಿಯೊಳಗಿರುವ ಬಾಂಧವ್ಯ ಪ್ರಜ್ಞೆ, ಮಾನವ ಜಾತಿ ಅನುಸರಿಸಬೇಕಾದದ್ದು ಸರ್ಪ ಸಂಸ್ಕಾರ ಮಾನವ ಸಂಸ್ಕೃತಿಗೆ ಬೇಕು ಎಂದು ಸಮಾಜ ವಿಜ್ಞಾನ ಹೇಳುತ್ತದೆ. ಅದಕ್ಕಾಗಿ ಅವುಗಳಿಗೆ ಈ ಬಗೆಯ ಗೌರವ ಎಂದು.

     ವಿಷ್ಣುವು ಕ್ಷೀರ ಸಾಗರದಲ್ಲಿ ಹೋಗಿ ಹೋಗಿ ಸರ್ಪನ ಮೇಲೇಕೆ ಪವಡಿಸಿದ ಎಂಬುದಕ್ಕೆ ಹಾಸ್ಯ ವಿಜ್ಞಾನ ಹೇಳುವ ಕಾರಣ ಹೀಗಿದೆ. ನಿದ್ರಾದೇವಿ ತನ್ನನ್ನು (ವಿಷ್ಣುವನ್ನು) ಆಲಂಗಿಸಿದಾಗ ಲಕ್ಷ್ಮೀ ದೇವಿಯನ್ನು ಕಾಯಬೇಕಾದರೆ ಸರ್ಪಗಾವಲು ಬೇಕು. ಆದ್ದರಿಂದಲೇ ಲಕ್ಷ್ಮೀ ಇದ್ದಲ್ಲಿ ಸರ್ಪನ ಕಾವಲು.

     ನಾಗರಾಜ ಕೇವಲ ಕಾಯುವ ದೇವತೆಯಲ್ಲ; ಕಲಾರಸಿಕನಲ್ಲ, ಕಾಯಿಲೆ ನಿವಾರಕನೂ ಹೌದು. ಆತ ಶಿವನ ತಲೆಯ ಮೇಲೆ ಹೂವಾಗಿ ಕಂಡರೆ ಗಣಪನ ಹೊಟ್ಟೆಯ ಮೇಲೆ ಹಗ್ಗವಾಗಿ ಕಾಣುತ್ತಾನೆ. ಸಮುದ್ರ ಮಂಥನ ಕಾಲಕ್ಕೆ ಕಡೆಯುವ ಹಗ್ಗವಾದರೆ ಮತ್ತೊಂದೆಡೆ ಸರ್ಪಾಸ್ತ್ರನಾಗುತ್ತಾನೆ. ಕಣ್ಣುಗಳೇ ಕಿವಿಯಾದ, ಹೊಟ್ಟೆಯೇ ಕಾಲಾಗಿರುವ ಈ ನಾಗರಾಜ, ನವ ನಾಗರಿಕರ ಕಣ್ಣು, ಕಿವಿ ತೆರೆಯಿಸಲಿ. ಹಾಲಿನ ಕಡಲಿನ ನಡುವೆ ಒಡಲಲ್ಲಿ ಒಡೆಯನನ್ನು ಹೊತ್ತು, ಹೆಡೆ ಬಿಡಿಸಿ, ಕೊಡೆಯಾಗಿ ಈ ಹಾವು ನಮ್ಮ ಜೀವನವನ್ನು ಹಾಲಾಗಿಸಲಿ, ಹಾಯಾಗಿಸಲಿ.

    
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries