HEALTH TIPS

ಸ್ಮಗಲಿಂಗ್ ಕೇಸ್: ಸಿಎಂ ಪಿಣರಾಯಿಗೆ ಮತ್ತೆ ಕಂಟಕ

              ತಿರುವನಂತಪುರಂ: ಅಕ್ರಮ ಹಣವರ್ಗಾವಣೆ, ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆ, ಕಾನೂನು ಬಾಹಿರ ಆರ್ಥಿಕ ವ್ಯವಹಾರ ಮುಂತಾದ ಆರೋಪಗಳನ್ನು ಹೊತ್ತುಕೊಂಡಿರುವ ಸ್ವಪ್ನ ಸುರೇಶ್ ಹಾಗೂ ಇತರೆ ಆರೋಪಿಗಳಿಗೆ ನೆರವಾದ ಆರೋಪವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲೆ ಹೊರೆಸಲಾಗಿದೆ. ಡಾಲರ್ ಸ್ಮಗಲಿಂಗ್ ಪ್ರಕರಣದಲ್ಲಿ ವಿಜಯನ್ ಅವರಿಗೆ ಅಬಕಾರಿ ಇಲಾಖೆಯಿಂದ ಶೋಕಾಸ್ ನೋಟಿಸ್ ಕಳಿಸಲಾಗಿದೆ.


           ಕೇರಳ ಡಾಲರ್ ಹಾಗೂ ಚಿನ್ನದ ಸ್ಮಗಲಿಂಗ್ ಪ್ರಕರಣದಲ್ಲಿ ಸ್ವಪ್ನ ಸುರೇಶ್ ಹಾಗೂ ಸರಿತ್ ಪಿಎಸ್ ಹೇಳಿಕೆ ಆಧಾರದ ಮೇಲೆ ಸಿಎಂ ಪಿಣರಾಯಿ ವಿಜಯನ್ ಹಾಗೂ ಮಾಜಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಅವರಿಗೆ ಶೋಕಾಸ್ ನೋಟಿಸ್ ಕಳಿಸಲಾಗಿದೆ.

               2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.


                  15 ಕೋಟಿ ರೂಪಾಯಿ ಮೌಲ್ಯದ ಚಿನ್ನ

               ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ. ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್‌ಐಎ ತನಿಖೆ ಮುಂದುವರೆಸಿದೆ.

                           ಶಿವಶಂಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪ

          ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಆಪ್ತರಾಗಿರುವ ಅಮಾನತುಗೊಂಡಿರುವ ಐಎಎಎಸ್ ಅಧಿಕಾರಿ ಎಂ ಶಿವಶಂಕರ್ ಅವರನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ದ ಅಧಿಕಾರಿಗಳು, ಕಸ್ಟಮ್ಸ್ ಅಧಿಕಾರಿಗಳು, ಜಾರಿ ನಿರ್ದೇಶನಾಲಯವು ಹಲವು ಬಾರಿ ವಿಚಾರಣೆಗೊಳಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

           ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರಿಗೆ ಸಿಎಂ ಸಚಿವಾಲಯದ ಅಧೀನದ ಐಟಿ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಹುದ್ದೆಯನ್ನು ಕೊಡಿಸುವಲ್ಲಿ ಶಿವಶಂಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪ ಕೇಳಿ ಬಂದಿದೆ. ಆರೋಪ ಕೇಳಿ ಬಂದ ಬಳಿಕ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಿವಶಂಕರ್ ಅವರನ್ನು ತೆಗೆದು ಹಾಕಲಾಗಿತ್ತು. ಜೊತೆಗೆ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಕ್ಲೀನ್ ಚಿಟ್ ಸಿಕ್ಕಿತ್ತು.

                        ವಿಜಯನ್ ವಿರುದ್ಧ ಕಾಂಗ್ರೆಸ್ ಕಿಡಿ

         ''ಕೋಟ್ಯಂತರ ರುಪಾಯಿ ಹಗರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೆಸರು ಹಲವು ಬಾರಿ ಕೇಳಿ ಬಂದಿದೆ. ಸಿಎಂ ಸ್ಥಾನದಲ್ಲಿ ಮುಂದುವರೆಯಲು ಅರ್ಹತೆ ಕಳೆದುಕೊಂಡಿದ್ದಾರೆ, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನದಿಂದ ಕೂಡಲೇ ಕೆಳಗಿಳಿಯುವುದು ಸೂಕ್ತ,'' ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ ಸುಧಾಕರನ್ ಪ್ರತಿಕ್ರಿಯಿಸಿದ್ದಾರೆ.

         ಎಎನ್‌ಐ ಜೊತೆ ಮಾತನಾಡಿದ ಸುಧಾಕರನ್, ''ಯಾವುದೇ ಸಿಎಂ ಇಂಥ ಸ್ಮಗಲಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಇತಿಹಾಸದಲ್ಲೇ ಇಲ್ಲ, ಮುಖ್ಯಮಂತ್ರಿಯೊಬ್ಬರ ಹೆಸರು ಡಾಲರ್ ಸ್ಮಗಲಿಂಗ್ ಕೇಸ್ ನಲ್ಲಿ ಕಾಣಿಸಿಕೊಂಡಿದೆ ಆದರೆ, ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ, ತಕ್ಷಣವೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ'' ಎಂದರು.

                  ಜಾರಿ ನಿರ್ದೇಶನಾಲಯದ ವಿರುದ್ಧ ಸರ್ಕಾರದ ನಿಲುವು

          ಜಾರಿ ನಿರ್ದೇಶನಾಲಯದ ವಿರುದ್ಧ ಸರ್ಕಾರದ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರನ್, ಸಂವಿಧಾನದ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಡಳಿತ ವ್ಯಾಪ್ತಿ ಹಾಗೂ ಕೇಂದ್ರ ಸಂಸ್ಥೆಗಳ ಬಗ್ಗೆ ಇರುವ ನಿಯಮಗಳನ್ನು ಕೇರಳ ಸರ್ಕಾರ ಮತ್ತೊಮ್ಮೆ ಓದಲಿ, ಇಡಿ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸುವುದೆಂದರೆ ಅದು ನಗೆಪಾಟಲಿನ ವಿಷಯ ಎಂದಿದ್ದಾರೆ.

                 ಚಿನ್ನ ಹಾಗೂ ಡಾಲರ್ ಸ್ಮಗಲಿಂಗ್ ಕೇಸ್ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚನೆಗೆ ಕೇರಳ ಸರ್ಕಾರ ಮುಂದಾಗಿತ್ತು. ಜಸ್ಟೀಸ್ ವಿಕೆ ಮೋಹನನ್ ಆಯೋಗ ರಚನೆಗೆ ಕುರಿತಂತೆ ಅಧಿಸೂಚನೆ ನೀಡಲಾಗಿತ್ತು. ಆದರೆ, ಆಯೋಗ ರಚನೆಗೆ ಕೇರಳ ಹೈಕೋರ್ಟ್ ತಡೆ ನೀಡಿದ್ದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries