ಕಾಸರಗೋಡು: 1995ರಿಂದ ಜಾರಿಯಾದ ಪಿಂಚಣಿಯನ್ನು ಕಳೆದ ಮೂರು ದಶಕಗಳಿಂದ ನವೀಕರಿಸದಿದ್ದು, ಪ್ರತೀ ವರ್ಷವೂ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ನಿವೃತ್ತರಾದ ಬ್ಯಾಂಕ್ ನೌಕರರ ದೈನಂದಿನ ಬದುಕು ಕಷ್ಟಸಾಧ್ಯವಾಗಿದೆ. ನಿವೃತ್ತಿ ಹೊಂದಿದ ಬ್ಯಾಂಕ್ ನೌಕರರು ಹಿರಿಯ ನಾಗರಿಕರಾಗಿರುವುದರಿಂದ ವಯೋ ಸಹಜವಾಗಿಯೇ ಆರೋಗ್ಯ ಹಾಗೂ ವೈದ್ಯಕೀಯ ಖರ್ಚು ವೆಚ್ಚಗಳು ದಿನ ಕಳೆದಂತೆ ಏರಿಕೆಯಾಗುತ್ತಿವೆ ಎಂದು ಕೆನರಾ ಸಿಂಡಿಕೇಟ್ ಬ್ಯಾಂಕ್ ರಿಟೈರ್ಡ್ ಸ್ಟಾಫ್ ಆರ್ಗನೈಸೇಷನ್‍ನ ವಾರ್ಷಿಕ ಮಹಾಸಭೆ ತಿಳಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿಯನ್ನು ಕಾಲಕಾಲಕ್ಕೆ ನವೀಕರಿಸಿದರೂ ರಾಷ್ಟ್ರೀಕೃತ ಬ್ಯಾಂಕ್‍ಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿವೆ. ಈ ಧೋರಣೆಯನ್ನು ಬೆಂಗಳೂರಿನಲ್ಲಿ ಜರಗಿದ ಸಂಘಟನೆಯ ಮಹಾಸಭೆಯಲ್ಲಿ ಖಂಡಿಸಲಾಯಿತು.
ಅಧಿಕೃತ ದಾಖಲೆ ಪ್ರಕಾರ ಪಿಂಚಣಿ ಸಂಚಿತ ನಿಧಿ 4.57 ಲಕ್ಷ ಕೋಟಿ ರೂ. ಮೀರಿ ಸಂಗ್ರಹವಾಗಿದೆ. ಪ್ರತೀ ವರ್ಷ ಪಿಂಚಣಿ ವಿತರಣೆಯ ಬಳಿಕ ಹೆಚ್ಚುವರಿಯಾಗಿ 22 ಸಾವಿರ ಕೋಟಿ ರೂ. ಸಂಚಿತ ನಿಧಿ ಉಳಿದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‍ನ ನಿವೃತ್ತ ನೌಕರರ ಸಂಘಟನೆಗಳು ಹಲವು ವರ್ಷಗಳಿಂದ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ನ್ಯಾಯಯುತ ವ್ಯವಸ್ಥೆ ಜಾರಿಯಾಗದಿರುವುದು ವಿಷಾದನೀಯ. ಆದ್ದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯವೆಸಗುತ್ತಿರುವ ಎಲ್ಲಾ ನಿವೃತ್ತ ನೌಕರರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಡಲು ಮತ್ತು ಸಂಯುಕ್ತ ವೇದಿಕೆ ರಚಿಸುವ ನಿಟ್ಟಿನಲ್ಲಿ ಕರೆ ನೀಡಲಾಯಿತು.
ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ:
ಸಭೆಯಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಹೇಮಂತ್ ಡಿ.ಪೈ ಬೆಂಗಳೂರು, ಉಪಾಧ್ಯಕ್ಷರಾಗಿ ಅಶೋಕ ನಾಯಕ್ ಉಡುಪಿ, ವೈ.ಕೆ.ಜೈನ್ ಹಾಪುರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಶಂಕರ ಭಟ್ ಕಾಸರಗೋಡು, ಉಪ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಚ್.ಆಚಾರ್ ಕುಂದಾಪುರ, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಪಿ.ಹರಿಕುಮಾರ್ ಪತ್ತನಂತ್ತಿಟ್ಟ, ಕೋಶಾಧಿಕಾರಿಯಾಗಿ ಸುಧಾಕರ ಭಟ್ ಬೆಂಗಳೂರು, ಕಾಯದರ್ಶಿಗಳಾಗಿ ಕೆ.ಶ್ರೀಕಾಂತನ್ ಕೊಯಂಬತ್ತೂರು, ಕೆ.ಕೆ.ಬಾಳಿಗಾ ಬೆಂಗಳೂರು, ಎ.ವೆಂಕಟೇಶ್ ತಿರುವನಂತಪುರ, ದಿನಕರ ಪಂಡಿತ್ ಉಡುಪಿ ಅವರನ್ನು ಆಯ್ಕೆ ಮಾಡಲಾಯಿತು.

-side.jpg)
