HEALTH TIPS

ಕುಂಟಾರಿನಲ್ಲಿ ವಿಜೃಂಬಿಸಿದ ಸಾಹಿತ್ಯೋತ್ಸವ-. ಸಾಹಿತ್ಯ ಗ್ರಾಮೀಣ ಪ್ರದೇಶದ ಜನರ ಹೃದಯವನ್ನು ಮುಟ್ಟಿಸುವಲ್ಲಿ ಕುಂಟಾರು ಸಾಹಿತ್ಯೋತ್ಸವ ಪರಿಣಾಮಕಾರಿ: ಡಾ.ತಾಳ್ತಜೆ ವಸಂತ ಕುಮಾರ

ಮುಳ್ಳೇರಿಯ: ಎ.ಯು.ಪಿ ಶಾಲೆ ಕುಂಟಾರು ಮತ್ತು ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಗಡಿನಾಡ ಘಟಕ, ಹಳೆವಿದ್ಯಾರ್ಥಿಗಳ ಸಂಘ ಎ.ಯು.ಪಿ.ಶಾಲೆ ಕುಂಟಾರು ಇವರ ಸಹಕಾರದೊಂದಿಗೆ ಕುಂಟಾರು ಸಾಹಿತ್ಯೋತ್ಸವ- 2026 ಭಾನುವಾರ ಕುಂಟಾರು ಶಾಲೆಯಲ್ಲಿ ನಡೆಯಿತು. 


ಬೆಳಿಗ್ಗೆ ದಿ.ಮಾಟೆಡ್ಕ ಪುರುಷೋತ್ತಮ ರಾವ್ ದ್ವಾರವನ್ನು ಎಂ.ನಾ.ಚಂಬಲ್ತಿಮಾರ್ ಉದ್ಘಾಟಿಸಿದರು. ಬಳಿಕ ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ಸಾಹಿತ್ಯೋತ್ಸವ ನಡೆಯುವ ವೇದಿಕೆಗೆ ಬರಲಾಯಿತು. ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಿದರು.  ಸಾಹಿತ್ಯ ಗ್ರಾಮೀಣ ಪ್ರದೇಶದ ಜನರ ಹೃದಯವನ್ನು ಮುಟ್ಟಿಸುವಲ್ಲಿ ಕುಂಟಾರು ಸಾಹಿತ್ಯೋತ್ಸವ ಕಾರ್ಯಕ್ರಮದಿಂದ ಸಾಧ್ಯ ಎಂದು ಹೇಳಿದರು. ಕನ್ನಡದಲ್ಲಿ ಕೆಲವು ಪದಗಳೇ ಕಾಣೆಯಾಗುತ್ತಿದೆ ಮತ್ತು ಅದರ ವೇಗ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕೆಲವು ಪದಗಳ ಅಧ್ಯಯನ ನಡೆಯಬೇಕೆಂದರು. ಉದಾಹರಣೆಗೆ ಮಹೋತಾಭಾರ ಎಂಬ ಪದ ಅರೇಬಿಕ್ ನ ಮಹತಬರ್ ಪದವಾಗಿದೆ, ಅದು ಸಂಸ್ಕøತ ಪದವಲ್ಲ ಎಂದರು.

ನಾವು ಸಾಹಿತ್ಯ ಮತ್ತು ಬದುಕಿನ ದಿನ ಬಳಕೆಯ ಪದಗಳತ್ತ ಮುಖ ಮಾಡಬೇಕೆಂದ ಅವರು ನಮ್ಮ ಓದು ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸಬೇಕು ಮತ್ತು ನಾವೇ ಅದರ ಉತ್ತರ ಕಂಡುಕೊಳ್ಳಬೇಕು ಎಂದರು.  

ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಕಾಸರಗೋಡು ಅಧ್ಯಕ್ಷತೆ ವಹಿಸಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು. ವಸ್ತು ಪ್ರದರ್ಶನವನ್ನು ಕಾರಡ್ಕ ಗ್ರಾಮ ಪಂ. ಅಧ್ಯಕ್ಷೆ ಜನನಿ.ಎಂ ಉದ್ಘಾಟಿಸಿದರು. ಚಿತ್ರ ಮತ್ತು ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಿರಿಯ ವ್ಯಂಗ್ಯಚಿತ್ರಗಾರ ಎಚ್.ಎಸ್.ವಿಶ್ವನಾಥ್ ಬೆಂಗಳೂರು ಉದ್ಘಾಟಿಸಿದರು. ಡಾ.ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಂಟಾರಿಗೆ ಸಾಂಸ್ಕøತಿಕ ಹಿನ್ನೆಲೆ ಇದೆ. ಆದರೆ ಸಾಹಿತ್ಯಕ ಹಿನ್ನೆಲೆಯ ಕೊರತೆ ಇದೆ. ಅದು ನೀಗಬೇಕು. ಹೊಸ ಪೀಳಿಗೆ ಮೂಡಬೇಕೆಂಬ ಸಂಕಲ್ಪದಿಂದಲೇ ಸಾಹಿತ್ಯೋತ್ಸವ ಆಯೋಜಿಸಲಾಗಿದೆ. ಇದು ಹೊಸ ತಲೆಮಾರನ್ನು ಹುಟ್ಟಿಸುವ ಮತ್ತು ಮುಟ್ಟುವ ಪ್ರಯತ್ನ. ಸಾಹಿತ್ಯೋತ್ಸವದಂಗವಾಗಿ ಪ್ರದರ್ಶಿಸಿದ ಪುಸ್ತಕಗಳ ಪ್ರದರ್ಶನ ಕುಂಟಾರು ಪರಿಸರದವರ ಓದಿಗೆ ಕನ್ನಡಿ. ವಸ್ತು ಪ್ರದರ್ಶನ ಈ ನಾಡಿನ ಹಿರಿಯರು ಬಳಸಿದ ವಸ್ತುಗಳ ಸಂಕೇತ. ಇವೆಲ್ಲ ಹೊಸ ಪೀಳಿಗೆಗೆ ಅರಿಯಬೇಕು ಮತ್ತು ಸಾಹಿತ್ಯ ಅಭಿರುಚಿಯಿಂದ ಅವರಲ್ಲಿ ಮಾನವತೆ ಮೂಡಬೇಕೆಂಬ ಕಾಳಜಿಯಿಂದ ಸಾಹಿತ್ಯೋತ್ಸವ ಆಯೋಜಿಸಲಾಗಿದೆ ಎಂದರು.

ಗ್ರಾಮ ಪಂ. ಸದಸ್ಯೆ ಬೇಬಿ ಕಟ್ಟತ್ತಬಯಲು, ಮುಖ್ಯ ಶಿಕ್ಷಕಿ  ದಾಕ್ಷಾಯಣಿ ಉಪಸ್ಥಿತರಿದ್ದರು. ಸಾಹಿತ್ಯೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಮಾಸ್ತರ್ ಸ್ವಾಗತಿಸಿ, ಉಪಾಧ್ಯಕ್ಷ ಜಗದೀಶ ಮಾಸ್ತರ್ ವಂದಿಸಿದರು. ಡಾ.ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.



ಬಳಿಕ ನಡೆದ ಒಂದನೇ ಗೋಷ್ಠಿಯಲ್ಲಿ ಪಂಪನ ವಿಕ್ರಮಾರ್ಜುನ ವಿಜಯ ವಿಷಯವಾಗಿ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ರಾಘವಾಂಕನ ಹರಿಶ್ಚಂದ್ರ ಕಾವ್ಯ ವಿಷವಾಗಿ ಡಾ.ಮೀನಾಕ್ಷಿ ರಾಮಚಂದ್ರ, ಮಂಗಳೂರು, ವಚನ ಸಾಹಿತ್ಯ ವಿಷಯವಾಗಿ ಡಾ. ಟಿ.ಎ.ಎನ್ ಖಂಡಿಗೆ ಮೂಡುಬಿದಿರೆ ಮಾತನಾಡಿದರು. 2ನೇ ಗೋಷ್ಠಿಯಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸಾಹಿತ್ಯ ವಿಷಯವಾಗಿ  ಡಾ.ವರದರಾಜ ಚಂದ್ರಗಿರಿ ಪುತ್ತೂರು, ಕೃಷಿಕ ಮಹಿಳೆ ಮತ್ತು ಸಾಹಿತ್ಯ ವಿಷಯವಾಗಿ ಸಹನಾ ಕಾಂತಬೈಲು ಸಂಪಾಜೆ, ಜಾನಪದ ಸಾಹಿತ್ಯ ವಿಷಯವಾಗಿ ಡಾ. ಸುಂದರ ಕೇನಾಜೆ ಸುಳ್ಯ ಮಾತನಾಡಿದರು. 
ಮಧ್ಯಾಹ್ನ 2 ಗಂಟೆಗೆ ನಡೆದ 3ನೇ ಗೋಷ್ಠಿಯಲ್ಲಿ ಕುವೆಂಪು ಕವಿತೆಗಳು ವಿಷಯವಾಗಿ ಡಾ.ಸುಧಾರಾಣಿ ಮೂಡುಬಿದಿರೆ, ಕೀರ್ತನ ಸಾಹಿತ್ಯ ವಿಷಯವಾಗಿ ಡಾ. ಬೇಸೀ ಗೋಪಾಲಕೃಷ್ಣ ಭಟ್ ಬದಿಯಡ್ಕ, ಸಣ್ಣಕತೆ, ಕಾದಂಬರಿ ವಿಷಯವಾಗಿ ಡಾ.ರಾಧಾಕೃಷ್ಣ ಬೆಳ್ಳೂರು ಮಾತನಾಡಿದರು. 
ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ದಿವ್ಯಗಂಗಾ (ಕನ್ನಡ), ದಿಲೀಪ್ ನಾಯರ್(ಮಲಯಾಳಂ), ರೇಣುಕಾ ಸುಧೀರ್ ಅರಶಿನಮಕ್ಕಿ (ಕನ್ನಡ), ವಿರಾಜ್ ಅಡೂರು (ಕನ್ನಡ), ರಾಮಭಟ್ ಚೆನ್ನಂಗೋಡು(ಕರ್ಹಾಡ), ದಯಾನಂದ ರೈ ಕಳುವಾಜೆ (ಕನ್ನಡ), ರವೀಂದ್ರನ್ ಪಾಡಿ (ಮಲಯಾಳಂ), ಚಂದ್ರಿಕಾ ಶೆಣೈ ಮುಳ್ಳೇರಿಯ(ಕೊಂಕಣಿ), ಕೃಷ್ಣೋಜಿ ಮಾಸ್ತರ್(ಕನ್ನಡ) ಕವನಗಳನ್ನು ವಾಚಿಸಿದರು. 
ಸಂಜೆ ಸಮಾರೋಪ ಸಮಾರಂಭ ನಡೆಯಿತು. ಡಾ.ಮೋಹನ ಕುಂಟಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಸಮಾರೋಪ ಭಾಷಣಗೈದರು. ಆಯಿಷಾ ಪೆರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಸಾಪ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾರಡ್ಕ ಗ್ರಾಮ ಪಂ. ಉಪಾಧ್ಯಕ್ಷ ದಾಮೋದರ.ಎಂ, ರವೀಶ ತಂತ್ರಿ ಕುಂಟಾರು, ಕುಂಟಾರು ಎ.ಯು.ಪಿ. ಶಾಲೆಯ ವ್ಯಸ್ಥಪಕ ವಿಷ್ಣು ಪ್ರಸಾದ್ ಭಾಗವಹಿಸಿದ್ದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಂಜೆ 5ರಿಂದ ಡಾ.ವಾಣಿಶ್ರೀ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ಇವರಿಂದ ಭಾವಗಾನಾಮೃತ, ಕುಂಟಾರು ಎಯುಪಿ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. 

ಗಮನ ಸೆಳೆದ ಪ್ರದರ್ಶನಗಳು:
ಈ ಸಂದರ್ಭ ಆಯೋಜಿಸಲಾದ ವ್ಯಂಗ್ಯಚಿತ್ರ, ಪುಸ್ತಕ ಹಾಗೂ ಪ್ರಾಚ್ಯವಸ್ತು ಪ್ರದರ್ಶನಗಳು ಗಮನ ಸೆಳೆಯಿತು. ವ್ಯಂಗ್ಯಚಿತ್ರ ಪ್ರದರ್ಶನ ನಡೆದ ವಠಾರದಲ್ಲೇ ಸ್ಥಳದಲ್ಲೇ ಆಸಕ್ತರ ಚಿತ್ರ ಬಿಡಿಸುವ ಕಲಾವಿದರೊಬ್ಬರ ಸುತ್ತಲೂ ಜನಜಂಗುಳಿ ಕಂಡುಬಂತು. ಕೈಬರಹದ (ಹಸ್ತಪ್ರತಿ) ಹಲವುಯ ಪುಸ್ತಕಗಳು ಕುಂಟಾರು ಪರಿಸರದ ಜನರ ಓದುವ ಆಸಕ್ತಿಯನ್ನು ಜಾಹಿರುಗೊಳಿಸುವ ಮೂಲಕ ಅಚ್ಚರಿಮೂಡಿಸಿತು. ಹಲವು ಪುರಾಣ ಸಹಿತ ಹಲವು ಪ್ರಾಚೀನ ಕೃತಿಗಳ ಕೈಬರಹ ಮತ್ತು ಮುದ್ರಿತ ಪುಸ್ತಕಗಳು ಪ್ರದರ್ಶನದಲ್ಲಿದ್ದವು. ಜೊತೆಗೆ ಪ್ರಾಚ್ಯವಸ್ತುಗಳ ಪ್ರದರ್ಶನವೂ ವಿಶೇಷ ಆಕರ್ಷಣೆ ಮೂಡಿಸಿತು. ಅಯೋಧ್ಯೆಯಿಂದ ತಂದ ಕಲ್ಲು, ಪ್ರಾಚೀನ ದೀಪ, ನೇಗಿಲು, ಬಟ್ಟೆ ಸಹಿತ ವಿವಿಧ ವಸ್ತುಗಳನ್ನು ಪೇರಿಸಲಿರುವ ಪೆಟ್ಟಿಗೆ, ಶಾವಿಗೆ ಮಣೆ ಮೊದಲಾದವುಗಳು ಕುತೂಹಲ ಮೂಡಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries