HEALTH TIPS

NEET: ಒಬಿಸಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ಎತ್ತಿಹಿಡಿದ 'ಸುಪ್ರೀಂ'

             ನವದೆಹಲಿ: ನೀಟ್‌ ಮೂಲಕ 2021-22ನೇ ಸಾಲಿನ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ ಪ್ರವೇಶದ ಕೌನ್ಸೆಲಿಂಗ್‌ ಅನ್ನು ಆರಂಭಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಅವಕಾಶ ಮಾಡಿಕೊಟ್ಟಿದೆ. ಪ್ರವೇಶ ಪ್ರಕ್ರಿಯೆಯು ತುರ್ತಾಗಿ ಆರಂಭವಾಗಬೇಕಾದ ಅಗತ್ಯ ಇದೆ ಎಂದಿದೆ.

         ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅಖಿಲ ಭಾರತ ಕೋಟಾದಡಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27ರಷ್ಟು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಶೇ 10ರಷ್ಟು ಮೀಸಲಾತಿಯ ಆಧಾರದಲ್ಲೇ ಕೌನ್ಸೆಲಿಂಗ್‌ ನಡೆಸಲು ಮಧ್ಯಂತರ ಆದೇಶದಲ್ಲಿ ಹೇಳಿದೆ.

              ನೀಟ್‌ ಮೂಲಕ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ದಾಖಲಾತಿಯಲ್ಲಿ ಮೀಸಲಾತಿ ಇರಬಾರದು ಎಂದು ಸಲ್ಲಿಸಲಾಗಿದ್ದ ಹಲವು ಅರ್ಜಿಗಳಲ್ಲಿನ ವಾದವನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಎ.ಎಸ್‌.ಬೋಪಣ್ಣ ಅವರಿದ್ದ ಪೀಠವು ತಳ್ಳಿಹಾಕಿದೆ. ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ಮೀಸಲಾತಿ ನೀಡುವುದನ್ನು ಸುಪ್ರೀಂ ಕೋರ್ಟ್‌ ಪೀಠವು ಈ ಮೂಲಕ ಎತ್ತಿಹಿಡಿದಿದೆ.

          2021-22ನೇ ಸಾಲಿನ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈಗಾಗಲೇ ಪರೀಕ್ಷೆ ಬರೆದು, ಕೌನ್ಸೆಲಿಂಗ್‌ಗಾಗಿ ಕಾದಿರುವ ಅಭ್ಯರ್ಥಿಗಳಿಗೆ ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಅನುಕೂಲವಾಗಲಿದೆ. ಇದರಿಂದ ದೇಶದ ಎಲ್ಲಾ ರಾಜ್ಯಗಳ ವೈದ್ಯಕೀಯ ಕಾಲೇಜುಗಳಲ್ಲಿ ಸಾವಿರಾರು ಕಿರಿಯ ವೈದ್ಯರು ಸೇವೆಗೆ ಲಭ್ಯವಾಗಲಿದ್ದಾರೆ. 'ಕೋವಿಡ್‌ ವಿರುದ್ಧ ಹೋರಾಟದಲ್ಲಿ ಇದು ಬಲ ನೀಡಲಿದೆ' ಎಂದು ಶೀಘ್ರ ಕೌನ್ಸೆಲಿಂಗ್‌ಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ವೈದ್ಯರು ಹೇಳಿದ್ದಾರೆ.

2021-22ನೇ ಸಾಲಿನ ವೈದ್ಯಕೀಯ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಪರೀಕ್ಷೆಗಳು ನಡೆದಿದ್ದವು. ನಂತರ ಕೌನ್ಸೆಲಿಂಗ್‌ ನಡೆಸಿ, ದಾಖಲಾತಿಯನ್ನು ಅಂತಿಮಗೊಳಿಸಬೇಕಿತ್ತು.

           ಆದರೆ, 'ವೈದ್ಯಕೀಯ ಉನ್ನತ ಕೋರ್ಸ್‌ಗಳಲ್ಲಿ ಒಬಿಸಿ ಮತ್ತು ಇಡಬ್ಲ್ಯುಎಸ್‌ಗೆ ಮೀಸಲಾತಿ ನೀಡಿರುವುದು ಸಂವಿಧಾನಬಾಹಿರ. ಇಡಬ್ಲ್ಯುಎಸ್‌ ಆದಾಯ ಮಿತಿಯನ್ನು ₹8 ಲಕ್ಷಕ್ಕೆ ನಿಗದಿ ಮಾಡಿರುವುದರ ಹಿಂದೆ ವೈಜ್ಞಾನಿಕ ಆಧಾರಗಳಿಲ್ಲ' ಎಂದು ನೀಟ್‌-ಸ್ನಾತಕೋತ್ತರ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕೌನ್ಸೆಲಿಂಗ್‌ ಅನ್ನು ಮುಂದೂಡಲಾಗಿತ್ತು.

ಇಡಬ್ಲ್ಯುಎಸ್‌ ಮೀಸಲಾತಿ ನೀಡಲು ನಿಗದಿ ಮಾಡಿದ್ದ ಗರಿಷ್ಠ ₹8 ಲಕ್ಷದ ಆದಾಯ ಮಿತಿಯ ಬಗ್ಗೆ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯು 2021ರ ಡಿಸೆಂಬರ್‌ 31ರಂದು ವರದಿಯನ್ನು ಸಲ್ಲಿಸಿತ್ತು. 'ಇಡಬ್ಲ್ಯುಎಸ್‌ ಕುಟುಂಬಗಳಿಗೆ ವಿಧಿಸಿರುವ ವಾರ್ಷಿಕ ₹8 ಲಕ್ಷ ಆದಾಯದ ಗರಿಷ್ಠ ಮಿತಿಯನ್ನು ಉಳಿಸಿಕೊಳ್ಳಬಹುದು. ₹ 8 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ ಅಭ್ಯರ್ಥಿಗಳಿಗೆ ಮಾತ್ರವೇ ಈ ಮೀಸಲಾತಿಯ ಅನುಕೂಲ ದೊರೆಯುತ್ತದೆ' ಎಂದು ಸಮಿತಿಯು ಶಿಫಾರಸು ಮಾಡಿತ್ತು.

             ಸಮಿತಿಯ ಶಿಫಾರಸನ್ನು ಒಪ್ಪಿಕೊಳ್ಳುವುದಾಗಿ ಕೇಂದ್ರ ಸರ್ಕಾರವು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು.

           ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ, 'ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಬಾರದು ಎಂಬ ವಾದಕ್ಕೆ ಕಾನೂನಿನ ಬಲವಿಲ್ಲ' ಎಂದು ವಾದಿಸಿದ್ದರು. ಸರ್ಕಾರದ ಈ ವಾದವನ್ನು ಪೀಠವು ಮಾನ್ಯ ಮಾಡಿತು. ಕೌನ್ಸೆಲಿಂಗ್‌ ನಡೆಸಲು ಆದೇಶಿಸಿತು.

             ಪೀಠ ಹೇಳಿದ್ದು...

         '2021ರ ಜುಲೈ 29ರಂದು ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಒಬಿಸಿಗೆ ಶೇ 27 ಮತ್ತು ಇಡಬ್ಲ್ಯುಎಸ್‌ಗೆ ಶೇ 10ರಷ್ಟು ಮೀಸಲಾತಿ ಘೋಷಿಸಲಾಗಿತ್ತು. ಆ ಅಧಿಸೂಚನೆಯ ಅನ್ವಯವೇ 2021-22ನೇ ಸಾಲಿನ ಕೋರ್ಸ್‌ಗಳಿಗೆ ಕೌನ್ಸೆಲಿಂಗ್‌ ನಡೆಯಬೇಕು' ಎಂದು ಪೀಠವು ಹೇಳಿದೆ.

            2021-22ನೇ ಸಾಲಿನ ಅಧಿಸೂಚನೆಯಲ್ಲಿ ಇಡಬ್ಲ್ಯುಎಸ್‌ಗೆ ₹8 ಲಕ್ಷ ವಾರ್ಷಿಕ ಆದಾಯದ ಮಿತಿ ವಿಧಿಸಲಾಗಿದೆ. ಈ ಸಾಲಿನ ಪ್ರವೇಶಾತಿಗೆ ಈ ಆದಾಯದ ಮಿತಿಯೇ ಅನ್ವಯವಾಗಲಿದೆ. ಆದರೆ, ₹8 ಲಕ್ಷ ಆದಾಯ ಮಿತಿಯ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದ ಅಂತಿಮ ವಿಚಾರಣೆಯನ್ನು ಮಾರ್ಚ್‌ 3ನೇ ವಾರದಲ್ಲಿ ನಡೆಸಲಾಗುತ್ತದೆ. ಅರ್ಜಿಗೆ ಸಂಬಂಧಿಸಿದಂತೆ ನೀಡಲಾಗುವ ತೀರ್ಪು ಮುಂದಿನ ಸಾಲಿನ ಪ್ರವೇಶಾತಿಗೆ ಅನ್ವಯವಾಗಲಿದೆ ಎಂದು ಪೀಠವು ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries