HEALTH TIPS

ಹಿಂದುಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ಸುತ್ತ..; ರಾಜ್ಯಗಳಿಗೂ ಅಧಿಕಾರ ಇದೆ ಎಂದ ಕೇಂದ್ರ

               ಹಿಂದು ಅಥವಾ ಇತರ ಸಮುದಾಯಗಳವರ ಸಂಖ್ಯೆ ಕಡಿಮೆ ಇದ್ದರೆ ಅಥವಾ ಕಡಿಮೆ ಸಂಖ್ಯೆಯಲ್ಲಿರುವ ಭಾಷಾವಾರು ಗುಂಪುಗಳನ್ನು 'ಅಲ್ಪಸಂಖ್ಯಾತರು' ಎಂದು ರಾಜ್ಯ ಸರ್ಕಾರಗಳು ಘೋಷಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

                  ಈ ಕುರಿತ ಮಾಹಿತಿ ಇಲ್ಲಿದೆ.

       ದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸಿ ಅವರಿಗೆ ಸೂಕ್ತ ಮಾನ್ಯತೆ ನೀಡಬೇಕೆಂಬ ಉದ್ದೇಶದಿಂದ 2020ರಲ್ಲಿ ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. 2011ರ ಜನಗಣತಿ ಪ್ರಕಾರ ಲಕ್ಷದ್ವೀಪ (2.5%), ಮಿಜೋರಾಂ (2.75%), ನಾಗಾಲ್ಯಾಂಡ್ (8.75%), ಮೇಘಾಲಯ (11.53%), ಜಮ್ಮು ಕಾಶ್ಮೀರ (28.44%) ಅರುಣಾಚಲ ಪ್ರದೇಶ (29%), ಮಣಿಪುರ (31.39%), ಮತ್ತು ಪಂಜಾಬ್ ನಲ್ಲಿ ಶೇ.38.40ರಷ್ಟು ಹಿಂದುಗಳಿದ್ದಾರೆ. ಈ ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ವಿಪರ್ಯಾಸ ಎಂದರೆ ಈ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಪ್ರಯೋಜನಗಳನ್ನು ಹಿಂದುಗಳಿಗೆ ನಿರಾಕರಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಆಕ್ಷೇಪಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನಿರ್ದಿಷ್ಟ ಸಮುದಾಯಗಳನ್ನು 'ಅಲ್ಪಸಂಖ್ಯಾತ' ಎಂದು ಘೊಷಿಸುವ ಪೂರ್ಣ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟನೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಇದು ರಾಜಕೀಯವಾಗಿಯೂ ಸೂಕ್ಷ್ಮ ವಿಚಾರವಾಗಿರುವುದರಿಂದ ವಿಪಕ್ಷಗಳ ನಿಲುವು ಏನಾಗಿರಲಿದೆ ಎನ್ನುವುದು ಕುತೂಹಲ ಕೆರಳಿಸಿದೆ. ಲಕ್ಷದ್ವೀಪ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಪಂಜಾಬ್​ನಲ್ಲಿ 2002ರ ಸುಪ್ರೀಂಕೋರ್ಟ್​ನ ಟಿಎಂಎ ಪೈ ಫೌಂಡೇಷನ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣ ತೀರ್ಪಿನ ಮಾರ್ಗಸೂಚಿಗಳ ಪ್ರಕಾರ ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎನ್ನುವುದು ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಒತ್ತಾಯ.

           ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ದಾಖಲಾಗಿರುವ ಸಂವಿಧಾನದ ಆರ್ಟಿಕಲ್ 30ನ್ನು ಪರಿಗಣನೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್, ಧಾರ್ವಿುಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು ರಾಜ್ಯವಾರು ಪರಿಗಣಿಸಬೇಕು ಎಂದು ಟಿಎಂಎ ಪೈ ಪ್ರಕರಣದ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು. 1992ರ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ ಸೆಕ್ಷನ್ 2 (ಸಿ) ಪ್ರಕಾರ ದೇಶದಲ್ಲಿ ಮುಸ್ಲಿಂ, ಸಿಖ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಧರ್ಮದವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ. ಮೊದಲಿಗೆ 2017ರಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಅಶ್ವಿನಿ ಉಪಾಧ್ಯಾಯ, ಯಾವ್ಯಾವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹುಸಂಖ್ಯಾತರಿಗಿಂತ ಹಿಂದುಗಳ ಸಂಖ್ಯೆ ಕಡಿಮೆ ಇದೆಯೋ ಅಲ್ಲಿ ಅವರನ್ನು ಅಲ್ಪಸಂಖ್ಯಾತರು ಎಂದು ಘೊಷಿಸಬೇಕು ಎಂದು ಕೋರಿದ್ದರು. 2014ರಲ್ಲಿ ಜೈನ ಧರ್ಮವನ್ನು ಅಲ್ಪಸಂಖ್ಯಾತ ಎಂದು ಪರಿಗಣಿಸಲಾದರೂ, ಹಿಂದುಗಳನ್ನು ಈ ಪಟ್ಟಿಗೆ ಸೇರಿಸಲಿಲ್ಲ. ಹೀಗಾಗಿ, 1992ರ ಕಾಯ್ದೆ ಜಾರಿಗೆ ಹೊರಡಿಸಲಾದ ಅಧಿಸೂಚನೆಯನ್ನೇ ರದ್ದುಪಡಿಸಬೇಕು ಎಂದು ಉಪಾಧ್ಯಾಯ ಆಗ್ರಹಿಸಿದ್ದಾರೆ. ಉಪಾಧ್ಯಾಯ ಅರ್ಜಿಗೆ ಸಂಬಂಧಿಸಿ 2020ರ ಆಗಸ್ಟ್ 8ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಆದರೆ, ಕೇಂದ್ರವು ಅಫಿಡವಿಟ್ ಸಲ್ಲಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಸುಪ್ರೀಂಕೋರ್ಟ್, ಕೇಂದ್ರಕ್ಕೆ 7,500 ರೂ. ದಂಡ ವಿಧಿಸಿ, ಪ್ರಮಾಣಪತ್ರ ಸಲ್ಲಿಕೆಗೆ 4 ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಿತ್ತು.

          ಕೇಂದ್ರದ ವಿವರಣೆ: ಲಡಾಖ್, ಮಿಜೋರಾಂ, ಲಕ್ಷದ್ವೀಪ, ಕಾಶ್ಮೀರ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್ ಮತ್ತು ಮಣಿಪುರದಲ್ಲಿ ಯಹೂದಿಗಳು, ಬಹಾಯಿಗಳು ಮತ್ತು ಹಿಂದುಗಳು ನೈಜ ಅಲ್ಪಸಂಖ್ಯಾತರಾಗಿದ್ದರೂ, ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದ ಸರಿಯಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಈ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿರುವ ಧರ್ಮದ ಅನುಯಾಯಿಗಳು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬಹುದು ಮತ್ತು ನಿರ್ವಹಿಸಬಹುದು. ಇದು ಸಾಧ್ಯವಾಗಿಸಲು, ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸಿ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಲು ಆಯಾ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಿದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಉದಾಹರಣೆ ನೀಡಿರುವ ಕೇಂದ್ರ, 2016ರಲ್ಲಿ ಮಹಾರಾಷ್ಟ್ರ ಯಹೂದಿಗಳನ್ನು ಅಲ್ಪಸಂಖ್ಯಾತ ಸಮುದಾಯವೆಂದು ಘೊಷಿಸಿತ್ತು. ಕರ್ನಾಟಕವು ಉರ್ದು, ತೆಲುಗು, ತಮಿಳು, ಮಲಯಾಳಂ, ಮರಾಠಿ, ತುಳು, ಲಮಾಣಿ, ಹಿಂದಿ, ಕೊಂಕಣಿ ಮತ್ತು ಗುಜರಾತಿಯನ್ನು ಅಲ್ಪಸಂಖ್ಯಾತ ಭಾಷೆ ಎಂದು ಗುರುತಿಸಿದೆ ಎಂದು ಅಫಿಡವಿಟ್​ನಲ್ಲಿ ಮಾಹಿತಿ ನೀಡಿದೆ. ಟಿಎಂಎ ಪೈ ಪ್ರಕರಣದ ತೀರ್ಪನ್ನು ಅವಲೋಕಿಸಿ ನೋಡುವುದಾದರೆ, ಸಮುದಾಯವೊಂದನ್ನು ಅಲ್ಪಸಂಖ್ಯಾತ ಎಂದು ಗುರುತಿಸುವ ಕೇಂದ್ರದ ಅಧಿಕಾರವನ್ನು ಸುಪ್ರೀಂಕೋರ್ಟ್ ಕಸಿದುಕೊಂಡಿಲ್ಲ ಅಥವಾ ಸಂಸತ್ತು ಮತ್ತು ಕೇಂದ್ರ ಸರ್ಕಾರದ ಕಾನೂನಾತ್ಮಕ ಅಧಿಕಾರದ ಮೇಲೆ ನಿರ್ಬಂಧವನ್ನೂ ಹೇರಿಲ್ಲ ಎಂದು ಕೇಂದ್ರ ಹೇಳಿದೆ.

          ಅಲ್ಪಸಂಖ್ಯಾತರಿಗೆ ಸಿಗುವ ಪ್ರಯೋಜನಗಳು ಉದ್ಯೋಗ ಮತ್ತು ಪ್ರವೇಶಾತಿಗಳಲ್ಲಿನ ಕೋಟಾಗಳನ್ನು ಒಳಗೊಂಡಿರುವುದಿಲ್ಲ. ಆದರೆ ಅವರ ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ, ಉದ್ಯೋಗ, ಕೌಶಲ, ಉದ್ಯಮಶೀಲತೆ ಅಭಿವೃದ್ಧಿ ಮತ್ತು ನಾಗರಿಕ ಸೌಕರ್ಯಗಳ ಒದಗಿಸುವಿಕೆ, ಹಾಗೂ ಮೂಲಸೌಕರ್ಯದಲ್ಲಿನ ಕೊರತೆಗಳನ್ನು ತಗ್ಗಿಸುವುದಕ್ಕೆ ಆದ್ಯತೆ ನೀಡುವುದಾಗಿದೆ ಎಂದೂ ಕೇಂದ್ರ ವಿವರಣೆ ನೀಡಿದೆ. ಮೇಲಾಗಿ, ಅಲ್ಪಸಂಖ್ಯಾತ ಸಮುದಾಯದಲ್ಲಿ ಆರ್ಥಿಕ ದುರ್ಬಲರು, ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದೆ.

ಅರ್ಜಿಗೆ ಸಂಬಂಧಿಸಿ 4 ವಾರಗಳ ಒಳಗಾಗಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್​ಗೆ ಸೂಚಿಸಿದೆ. ಅಲ್ಪಸಂಖ್ಯಾತರ ಗುರುತಿಸುವಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಗಳಿಗೂ ಅಧಿಕಾರವಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಅಫಿಡವಿಟ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾನು ಈ ಅಫಿಡವಿಟ್​ನ್ನು ನೋಡಿಲ್ಲ. ಅದನ್ನು ಪರಿಶೀಲಿಸಿ ಸೂಕ್ತ ಉತ್ತರ ನೀಡುವುದಾಗಿ ತಿಳಿಸಿದರು. ವಿಚಾರಣೆಯನ್ನು ಮೇ.10ಕ್ಕೆ ನಿಗದಿಪಡಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries