HEALTH TIPS

ಪಬ್ಲಿಕ್‌ನಲ್ಲಿ ಮಕ್ಕಳ ನಡವಳಿಕೆ ಮುಜುಗರ ಉಂಟು ಮಾಡುತ್ತಿದೆಯೇ? ಪೋಷಕರೇ ನೀವೇನು ಮಾಡಬೇಕು ಗೊತ್ತಾ?

 ಮಕ್ಕಳೆಂದರೆ ಮುಗ್ಧತೆ, ಮುಗ್ಥತೆಯೆಂದರೆ ಮಕ್ಕಳು ಎನ್ನಬಹುದು. ಮಕ್ಕಳಿಗೆ ಸರಿ ಯಾವುದು ತಪ್ಪು ಯಾವುದು ಎನ್ನುವ ಅರಿವು ಇರುವುದಿಲ್ಲ. ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಬೆಳೆದ ಮಗು, ಹೊರಬಂದ ತಕ್ಷಣ ಹೇಗೆ ಪ್ರತಿಕ್ರಿಯಿಸಬೇಕೇನ್ನುವುದು ತಿಳಿಯುವುದಿಲ್ಲ.

ಇತ್ತೀಚಿನ ಮಕ್ಕಳಂತೂ ತುಂಬಾ ಚೂಟಿ. ಅದು ಟಿವಿ, ಮೊಬೈಲ್‌ನ ಪ್ರಭಾವದಿಂದ ಎನ್ನಬಹುದು. ಈಗಿನ ಮಕ್ಕಳು ದೊಡ್ಡವರಂತೆಯೇ ಪಟ ಪಟನೆ ಮಾತನಾಡುವಾಗ ನಿಬ್ಬರಗಾಗುವ ಸರದಿ ನಮ್ಮದಾಗುತ್ತದೆ. ಕೆಲವೊಮ್ಮೆ ಯಾರೊಂದಿಗೆ ಹೇಗಿರಬೇಕು, ಏನು ಮಾತನಾಡಬೇಕು ಎನ್ನುವುದು ಮಕ್ಕಳಿಗೆ ತಿಳಿದಿರುವುದಿಲ್ಲ, ಇಂತಹ ಸಂದರ್ಭ ಬಂದಾಗ ಮುಜುಗರಕ್ಕೊಳಗಾಗುವ ಸನ್ನಿವೇಶ ತಂದೆತಾಯಿಯದ್ದಾಗಿರುತ್ತದೆ.

ಮಕ್ಕಳ ವರ್ತನೆಯಾಗಿರಬಹುದು ಅಥವಾ ಮಾತುಗಳಾಗಿರಬಹುದು, ಎಷ್ಟೋ ಬಾರಿ ನಮ್ಮನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡು ಮಾಡಿರಬಹುದು. ಅಂತಹ ಸಂದರ್ಭದಲ್ಲಿ ಎಲ್ಲರ ಕಣ್ಣು ಪೋಷಕರ ಮೇಲಿರುತ್ತದೆ, ಮಕ್ಕಳ ವರ್ತನೆಗೆ ತಂದೆತಾಯಿಯೇ ಜವಾಬ್ದಾರರಾಗುತ್ತಾರೆ, ಅಯ್ಯೋ ಮಕ್ಕಳನ್ನು ಹೀಗೇನಾ ಬೆಳೆಸುವುದು, ಆ ಮಗು ಮಾತಾಡೋದು, ಆಡೋದು ನೋಡಿ ಎನ್ನುವ ಇತರರ ಮಾತು ಮುಜುಗರಕ್ಕೀಡುಮಾಡುತ್ತದೆ. ಕೆಲವೊಮ್ಮೆ ನಮ್ಮ ತಾಳ್ಮೆ ಕೆಡಿಸಬಹುದು. ಇಂತಹ ಸಂದರ್ಭಗಳು ಬಾರದಂತೆ ತಡೆಯುವುದು ಹೇಗೆ, ಅಥವಾ ಈ ರೀತಿಯ ಸನ್ನಿವೇಶಗಳು ಎದುರಾದಾಗ ಅದನ್ನು ನಿಭಾಯಿಸುವುದು ಹೇಗೆ ಎನ್ನುವುದಾದರೆ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ.

1. ಮಕ್ಕಳ ಮೇಲೆ ನಿರೀಕ್ಷೆಯನ್ನಿಡಬೇಡಿ

ನನ್ನ ಮಗು ಹೀಗೆಯೇ ಇರಬೇಕು, ಹೀಗೆಯೇ ಬೆಳೆಯಬೇಕು ಎನ್ನುವ ಆಸೆಯನ್ನಿಟ್ಟುಕೊಳ್ಳುವುದು ಸಹಜ. ಆದರೆ ನಿಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರಬೇಡಿ. ತೊದಲು ನುಡಿಯುತ್ತಾ, ಓಡಾಡಲು ಪ್ರಾರಂಭಿಸಿದ ಮಗುವಿಗೆ ಹೊರಗಿನ ಪ್ರಪಂಂಚವೇ ಹೊಸ ಜಗತ್ತಾಗಿರುತ್ತದೆ. ಸಾರ್ವಜನಿಕವಾಗಿ ಹೇಗಿರಬೇಕು ಎನ್ನುವುದನ್ನು ಕಲಿಯುವಷ್ಟು ಮಕ್ಕಳು ಬೆಳವಣಿಗೆ ಹೊಂದಿರುವುದಿಲ್ಲ ಎನ್ನುವುದನ್ನು ಪೋಷಕರಾಗಿ ನೀವು ಅರ್ಥಮಾಡಿಕೊಳ್ಳಬೇಕು. ಅವರ ಭಾವನೆಗಳು, ಅವರ ಮಿದುಳುಗಳು ಆಗಷ್ಟೇ ಅಭಿವೃದ್ಧಿ ಹೊಂದುತ್ತಿರುತ್ತದೆ, ಹೊರಗಿನ ಪ್ರಪಂಚಕ್ಕೆ ಮಕ್ಕಳು ಬಂದಾಗ ಅವರ ನಡವಳಿಕೆಯಲ್ಲಾಗುವ ಬದಲಾವಣೆ ಅವರ ಬೆಳವಣಿಗೆಯ ಒಂದು ಭಾಗವಾಗಿರುತ್ತೆ.

2. ಮಕ್ಕಳು ನಿಮ್ಮನ್ನೇ ಅನುಕರಿಸುತ್ತಾರೆ

ಮನೆಯಲ್ಲಿ ಮಾತ್ರವಲ್ಲ, ಮನೆಯಿಂದ ಹೊರಗೆ ಕಾಲಿಟ್ಟಾಗಲೂ ಮಕ್ಕಳು ನಿಮ್ಮಂತೆಯೇ ಆಡಲು ಶುರು ಮಾಡುತ್ತಾರೆ. ಎದುರಿಗೆ ಸಿಕ್ಕವರನ್ನು ಮಾತನಾಡಿಸುವುದರಿಂದ ಹಿಡಿದು ಶಾಪಿಂಗ್‌ ಮಾಡುವ ವಸ್ತುಗಳನ್ನೂ ಮಕ್ಕಳು ಗಮನಿಸುತ್ತಾರೆ ಎನ್ನುವುದನ್ನು ನೆನಪಿಡಿ. ನಿಮ್ಮ ಗುಣವೇ, ಮಕ್ಕಳಲ್ಲಿ ರಿಫ್ಲೆಕ್ಟ್‌ ಆಗುತ್ತದೆ. ನಿಮ್ಮ ಅನುಕರಣೆಯನ್ನೇ ಮಕ್ಕಳೂ ಮಾಡುತ್ತಾರೆ. ಮಕ್ಕಳು ನೀವು ಮಾಡುವ ಕೆಲಸವನ್ನೂ ತಾವು ಮಾಡಿದರೆ ಹೇಗೆ, ಅದಕ್ಕೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ನೋಡಲು ಬಯಸುತ್ತಾರೆ. ಮಕ್ಕಳಿಗೆ ಅದು ಕುತೂಹಲ, ನಮಗೆ ಅದು ಅಸಾಮಾನ್ಯ ಸಂಗತಿ. ನೀವು ಆ ಕ್ಷಣದಲ್ಲಿ ಅವರ ಮೇಲೆ ಎಗರಾಡದೇ ಶಾಂತವಾಗಿದ್ದರೆ, ಮಕ್ಕಳೂ ಶಾಂತವಾಗಿರುತ್ತಾರೆ. ಶಾಂತಚಿತ್ತತೆಯು ಅವರ ಪ್ರತಿಕ್ರಿಯೆಗೆ ಸ್ಪಂದಿಸುವುದಿಲ್ಲ ಎನ್ನುವುದನ್ನು ಮಕ್ಕಳು ಅರಿತುಕೊಳ್ಳುತ್ತಾರೆ.

3. ಮಕ್ಕಳ ಗಮನವನ್ನು ಬೇರೆಡೆಗೆ ತಿರುಗಿಸಿ

ಕೆಲವೊಮ್ಮೆ ಕಣ್ಣಿಗೆ ಆಕರ್ಷಕವಾಗಿ ಕಂಡ ವಸ್ತು ಬೇಕೆಂದು ರಚ್ಚೆ ಹಿಡಿದಾಗ, ಏನು ಮಾಡುವುದೋ ತಿಳಿಯುವುದಿಲ್ಲ, ಒಂದು ರೀತಿಯ ಗೊಂದಲ ಉಂಟಾಗುತ್ತೆ, ಕೊಡುವುದೋ, ಬಿಡುವುದೋ ಎನ್ನುವ ಸಂದರ್ಭ ಬಂದಾಗ, ಸಾಧ್ಯವಾದಷ್ಟು ಅವರ ಗಮನವನ್ನು ಬೇರೆಡೆಗೆ ತಿರುಗುವಂತೆ ಮಾಡಿ. ಮಕ್ಕಳಿಗೆ ಕೋಪ ಬಂದಾಗ ಅದನ್ನು ವ್ಯಕ್ತಪಡಿಸಲು ಕಿರುಚುವುದು, ಹೊಡಿಯುವುದೋ, ಕೂದಲು ಹಿಡಿದೆಳೆಯುವುದು, ಕಚ್ಚುತ್ತಾರೆ, ಸಿಕ್ಕಿದ್ದನ್ನೆಲ್ಲಾ ಬಿಸಾಕುತ್ತಾರೆ. ಹೀಗಿದ್ದಾಗ ಅವರಿಗೆ ಆಸಕ್ತಿ ಹುಟ್ಟಿಸುವಂತಹ ಇನ್ನೇನೋ ಒಂದು ವಸ್ತುವನ್ನು ತೋರಿಸುವುದಾಗಲಿ, ಕಥೆಯನ್ನು ಹೇಳುವುದು, ಹಾಡನ್ನು ಹೇಳುವ ಮೂಲಕ ಅವರ ಗಮನವನ್ನು ಬದಲಾಯಿಸಿ. ಅವರ ಮನಸ್ಸನ್ನು ಬೇರೆ ಕಡೆ ಹರಿಸುವಲ್ಲಿ ನೀವು ಸಕ್ಸಸ್‌ ಆದಲ್ಲಿ ನೀವೂ ಮುಜುಗರಕ್ಕೊಳಗಾಗುವುದು ತಪ್ಪುತ್ತೆ..!

4. ನೀವೂ ತಾಳ್ಮೆ ವಹಿಸಿ

ಹೆಚ್ಚಿನ ಬಾರಿ ಮಕ್ಕಳು ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದಾಗ, ಹೊಡಿಯುವ ಮೂಲಕ, ಅಥವಾ ಬೈಯುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಿಬಿಡುವುದು ಪೋಷಕರೇ..ಕೆಲವೊಮ್ಮೆ ಮಗು ತುಂಬಾನೇ ಹಠ ಮಾಡಿದಾಗ ತಾಳ್ಮೆ ಕಳೆದುಕೊಂಡು, ಒಂದು ಬಾರಿಸಿಯೇ ಬಿಡುತ್ತೇವೆ. ಆದರೆ ತಾಳಿ..! ಕೋಪವನ್ನು ಏರಿಸಿಕೊಳ್ಳುವ ಮುಂಚೆ, ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ, ದೀರ್ಘವಾಗಿ ಉಸಿರು ತೆಗೆದುಕೊಳ್ಳಿ. ಶಾಂತವಾಗಿ ಮಗುವನ್ನು ಸಮಾಧಾನ ಮಾಡಲು ಪ್ರಯತ್ನಿಸಿ.

5 ಮುಖದಲ್ಲಿ ನಗುವಿರಲಿ

ಮಕ್ಕಳು ಕೋಪಮಾಡಿಕೊಂಡಾಗ, ನಮ್ಮ ಅಸಹನೆಯೂ ಕಟ್ಟೆಯೊಡೆದುಬಿಡುತ್ತದೆ ಒಮ್ಮೊಮ್ಮೆ. ಎಲ್ಲರ ಮುಂದೆ ಮುಜುಗರಕ್ಕೊಳಗಾಗುವಂತೆ ವರ್ತಿಸುವ ಮಗುವನ್ನು ಕಂಡಾಗ ಕೋಪ ನೆತ್ತಿಗೇರುತ್ತದೆ. ಆದರೆ ಮುಖ ಗಂಟಿಕ್ಕಬೇಡಿ. ಮನಃಪೂರ್ವಕವಾಗಿ ಮಗುವಿನ ಮುಂದೆ ನಗುವೊಂದನ್ನು ಹೊರಹಾಕಿ. ಇದು ನಿಮ್ಮ ಶಕ್ತಿಯನ್ನು ತೋರಿಸುತ್ತದೆ ಮಾತ್ರವಲ್ಲ, ನಿಮ್ಮನ್ನೂ ಶಾಂತವಾಗಿರಿಸುತ್ತದೆ. ಆ ನಗುವಿನಿಂದ ಮಗುವಿನ ನಡವಳಿಕೆಯು ನಿಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ನಿಮ್ಮ ಮಗುವಿಗೆ ಕಲಿಸುತ್ತದೆ. ಆಗಿ ಹೋದ ವಿಷಯದ ಬಗ್ಗೆ ಮುಜುಗರ ಪಡುವಂಥಾದ್ದು ಏನಿಲ್ಲ ಎನ್ನುವುನ್ನು ಕಲಿಯುವಿರಿ. ಅಲ್ಲದೇ ಇದು ಮಗುವಿನ ಕಲಿಕಾ ಮತ್ತು ಬೆಳವಣಿಗೆಯ ಹಂತವಾಗಿರುತ್ತದೆ. ನಿಮ್ಮ ಒಂದು ಸಣ್ಣ ಮುಗುಳ್ನಗೆಯೂ ಮಕ್ಕಳ ಮನಸ್ಸಿನಲ್ಲಿ ಸಮಾಧಾನ ಮೂಡಿಸುತ್ತದೆ.

6 ಮರುಪರಿಶೀಲಿಸಿ

ಬಿರುಗಾಳಿ ಬಂದು ನಿಂತ ಮೇಲೆ ಎಲ್ಲವೂ ಶಾಂತವಾಗುತ್ತದೆ. ಹಾಗೇನೆ ಮಕ್ಕಳೂ ಕೂಡಾ, ಎಷ್ಟೇ ಕಿರುಚಾಡಿ, ಕೂಗಿದರೂ ಮತ್ತೊಂದು ಕ್ಷಣದಲ್ಲಿ ಸರಿಹೋಗುತ್ತಾರೆ. ಮಕ್ಕಳೂ ಸರಿಹೋದಾಗ ಹಿಂದಿನ ಘಟನೆಯ ಬಗ್ಗೆ, ಯಾಕೆ ಹಾಗೆ ಮಾಡಿದೆ ಎನ್ನುವುದನ್ನು ಮೃದುವಾಗಿಯೇ ಕೇಳಿ. ಮಗುವಿನೊಂದಿಗೆ ಸಾಧ್ಯವಾದಷ್ಟೂ ಮಾತನಾಡಿ. ಅವರ ಮನಸ್ಸಿನಲ್ಲಿರುವ ಮಾತನ್ನು ಆಡಲು ಅವರನ್ನು ಪ್ರೋತ್ಸಾಹಿಸುತ್ತಲೇ ಇರಿ.ಮಗು ನಿಮ್ಮೊಂದಿಗೆ ಸುರಕ್ಷತೆಯ ಭಾವನೆಯನ್ನು ಅನುಭವಿಸುವಂತೆ ಮಾಡಿ, ನೀವು ಮಗುವಿನ ವಿಶ್ವಾಸಾರ್ಹತೆಯನ್ನು ಗಳಿಸಿ. ಹೀಗಿದ್ದಾಗ ಮಗುವು ನಿಮ್ಮೊಂದಿಗೆ ಎಲ್ಲಾ ಮಾತನ್ನೂ ತೆರೆದುಬಿಡುತ್ತದೆ.ಸಂದರ್ಭಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸುವ ಇತರ ವಿಧಾನವನ್ನು ಮಕ್ಕಳಿಗೆ ಕಲಿಸಲು ಪ್ರಯತ್ನಿಸಿ.

7. ಧ್ಯಾನ ಮತ್ತು ಪ್ರಾಣಾಯಾಮ ಮಕ್ಕಳಿಗೆ ಭಾವನಾತ್ಮಕ ನಿಯಂತ್ರಣವನ್ನು ಕಲಿಸಲು ಮತ್ತು ಮೆದುಳಿನ ಬೆಳವಣಿಗೆಯಲ್ಲಿ ಅವರಿಗೆ ಸಹಾಯ ಮಾಡಲು, ಮಕ್ಕಳು ಧ್ಯಾನ ಮತ್ತು ಪ್ರಾಣಾಯಾಮವನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಸಹಾಯ ಮಾಡುವುದು ಉತ್ತಮ. ಇದು ನಿಧಾನ, ದೀರ್ಘ ಪ್ರಕ್ರಿಯೆಯಾಗಿದ್ದು ಅದು ವರ್ಷಗಳಲ್ಲಿ ಕೆಲಸ ಮಾಡುತ್ತದೆ. ಆದರೆ, ಮುಜುಗರಕ್ಕೊಳಗಾದ ಮಕ್ಕಳು ಮತ್ತು ಅವರ ಭಾವನೆಗಳನ್ನು ಸಾರ್ವಜನಿಕವಾಗಿ ನಿರ್ವಹಿಸಲು ನಾವು ಎಷ್ಟು ಸಮರ್ಥರಾಗುತ್ತೇವೋ ಅಷ್ಟು ಬೇಗನೇ ಮಕ್ಕಳೂ ಹೊರಗಿನ ಪ್ರಪಂಚಕ್ಕೆ, ನಮಗೆ ಹೊಂದಿಕೊಳ್ಳುತ್ತಾರೆ.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries