ಕಾಸರಗೋಡು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೆ ತಂದಿರುವ ಬೆಳೆ ವಿಮಾ ರಕ್ಷಣೆ ಯೋಜನೆಯಾಗಿದ್ದು, ಹವಾಮಾನ ಬದಲಾವಣೆ ಆಧುನಿಕ ಕಾಲದಲ್ಲಿ ರೈತರಿಗೆ ಅನುಕೂಲ ಒದಗಿಸಿಕೊಡುತ್ತಿದೆ. ಮಣ್ಣು, ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ನಷ್ಟ ತುಂಬಿಕೊಡುವಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗುತ್ತಿದೆ.
ಕೃಷಿಕರು ಹವಾಮಾನಕ್ಕೆ ಅನುಗುಣವಾಗಿ ಗರಿಷ್ಠ ವಿಮಾ ಮೊತ್ತದ ಶೇ. 2ರಿಂದ 5ರ ವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಡಕೆ ತೆಂಗು, ಬಾಳೆ, ಕೋಕೋ, ರಬ್ಬರ್, ಮೆಣಸು, ಗೋಡಂಬಿ, ಲವಂಗ, ವೀಳ್ಯದೆಲೆ, ಶುಂಠಿ, ನೆಲಗಡಲೆ, ಅಕ್ಕಿ, ಅನಾನಸ್, ಮರಗೆಣಸು, ತಂಬಾಕು, ಅರಿಶಿನ, ಬೇಳೆಕಾಳುಗಳು ( ಬ್ರಾಡ್ ಬೀನ್ಸ್, ಕಡಲೆ, ಹಸಿರು ಬಟಾಣಿ, ಸೋಯಾಬೀನ್), ಗೆಡ್ಡೆಗಳು (ಬೇಳೆ, ಗೆಣಸು, ಕಚಿಲ್, ಸಣ್ಣ ಆಲೂಗಡ್ಡೆ, ಸಿಹಿ ಗೆಣಸು) ಮತ್ತು ತರಕಾರಿ ಬೆಳೆಗಳಿಗೆ(ಸೌತೆಕಾಯಿ, ಪಡುವಲ, ಪಾವಲ್, ಅಲಸಂಡೆ, ಕುಂಬಳ, ಬೆಂಡೆ, ಹಸಿರು ಮೆಣಸಿನಕಾಯಿ ಇತ್ಯಾದಿ)ವಿಮಾ ಸವಲತ್ತು ಲಬ್ಯವಾಗಲಿದೆ.
ಸಾಲ ಪಡೆದು ಕೃಷಿ ನಡೆಸುವ ರೈತರು ವಿಮಾ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್‍ಗಳನ್ನು ಸಂಪರ್ಕಿಸಬಹುದಾಗಿದೆ. ಸಾಲ ಪಡೆಯದ ರೈತರು ಯೋಜನೆಯ ಸದಸ್ಯತ್ವವನ್ನು ಪಡೆಯಲು ಅಕ್ಷಯ ಕೇಂದ್ರ, ಮೈಕ್ರೋ ಇನ್ಶೂರೆನ್ಸ್ ಏಜೆಂಟ್‍ಗಳು, ಅಧಿಕೃತ ಬ್ರೋಕಿಂಗ್ ಸಂಸ್ಥೆಗಳು ಮತ್ತು ಡಿಜಿಟಲ್ ಸೇವಾ ಕೇಂದ್ರಗಳನ್ನು (ಸಿಎಸ್‍ಸಿ) ಸಂಪರ್ಕಿಸಬಹುದು. ಇದಕ್ಕಾಗಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ತೆರಿಗೆ ರಶೀದಿ/ಗುತ್ತಿಗೆ ಚೀಟಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ರೈತರ ಹೆಸರು, ಆಧಾರ್ ಸಂಖ್ಯೆ, ಕೃಷಿ ನಡೆಸುವ ಪಂಚಾಯತಿ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ, ಕೃಷಿ ನಡೆಸುವ ಜಮೀನಿನ ವಿಸ್ತೀರ್ಣ ಮುಂತಾದ ನಿಖರ ಮಾಹಿತಿ ನಿಡಬೇಕು. ಪ್ರೀಮಿಯಂ ಪಾವತಿಸಿದ ನಂತರ ರಸೀದಿಯನ್ನು ಇಟ್ಟುಕೊಳ್ಳಬೇಕು. 2022ನೇ ಸಾಳಿನಲ್ಲಿ ಕಾಸರಗೋಡು ಜಿಲ್ಲೆಯೊಂದರಲ್ಲೇ 2130 ರೈತರು ಖಾರಿಫ್ ಹಂಗಾಮಿನಲ್ಲಿ 2 ಕೋಟಿ ಇಪ್ಪತ್ತು ಲಕ್ಷದ ನಲವತ್ನಾಲ್ಕು ಸಾವಿರದ ಏಳುನೂರ ಮೂವತ್ತೊಂಬತ್ತು ರೂ. ನೆರವು ಪಡೆದಿದ್ದಾರೆ. 2024 ಖಾರಿಫ್ ಸೀಸನ್ ಯೋಜನೆಯಲ್ಲಿ ನೋಂದಣಿಗೆ ಕೊನೆಯ ದಿನಾಂಕ 30 ಜೂನ್ 2024 ಆಗಿರುತ್ತದೆ.