ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಂಡ 108 ದಿನದೊಳಗೆ ದೇಶದಾದ್ಯಂತ ಇರುವ ಸಿಬಿಐನ 58 ಶಾಖಾ ಕಚೇರಿ ಪೈಕಿ 51 ಶಾಖಾ ಕಚೇರಿಗೆ ಭೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. ಉಳಿದ ಏಳು ಶಾಖಾ ಕಚೇರಿಗಳಿಗೆ ಅಕ್ಟೋಬರ್ 15ರ ಒಳಗಾಗಿ ಭೇಟಿ ನೀಡುವ ಸಾಧ್ಯತೆ ಇದೆ.
ಸಿಬಿಐ ಇತಿಹಾಸದಲ್ಲಿ ಇದುವರೆಗೂ ಯಾರೂ ಇಂಥ ದಾಖಲೆ ನಿರ್ಮಿಸಿಲ್ಲ. ಪ್ರವೀಣ್ ಅವರು ಈ ಮೊದಲು ಕರ್ನಾಟಕದ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
'ಸಿಬಿಐನ ತಳಮಟ್ಟದ ಕಾರ್ಯಾಚರಣೆಯ ಶೈಲಿಯನ್ನು ಅರಿಯುವ ಉದ್ದೇಶದಿಂದ ಪ್ರವೀಣ್ ದೇಶದಾದ್ಯಂತ ಇರುವ ಸಂಸ್ಥೆಯ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ' ಎಂದು ಈ ವಿಷಯವನ್ನು ಬಲ್ಲ ಅಧಿಕಾರಿಗಳು ತಿಳಿಸಿದ್ದಾರೆ.
'ಪ್ರವೀಣ್ ಭೇಟಿಯ ವೇಳೆ ಶಾಖಾ ಕಚೇರಿಯ ಸಿಬ್ಬಂದಿಯೊಡನೆ ವೈಯಕ್ತಿಕ ಸಂವಹನ ನಡೆಸಲು ಆದ್ಯತೆ ಕೊಡುತ್ತಾರೆ. ಅವರು ಸಮಸ್ಯೆ, ಅಭಿಪ್ರಾಯಗಳನ್ನು ಆಲಿಸುತ್ತಾರೆ. ಅವರ ಜೊತೆಯಲ್ಲಿಯೇ ಆಹಾರ ಸೇವಿಸುತ್ತಾರೆ. ಈ ರೀತಿಯ ಮಾತುಕತೆಯಿಂದ ದೇಶದಾದ್ಯಂತ ಇರುವ ಕಚೇರಿಗಳ ಕಾರ್ಯನಿರ್ವಹಣೆಯ ವಾಸ್ತವ ಹಾಗೂ ಸಿಬ್ಬಂದಿಯ ಮನಸ್ಥಿತಿ ಅರಿಯಲು ಅವರಿಗೆ ಸಹಾಯಕವಾಗುತ್ತಿದೆ' ಎಂದು ಹೇಳಿದ್ದಾರೆ.
'ಸಮನ್ಸ್ ಸೇವೆಗಳು, ಗುಪ್ತ ಮಾಹಿತಿ ಸಂಗ್ರಹಣೆ, ದೂರುಗಳ ನಿರ್ವಹಣೆ, ಜಾಲಗಳ ನಿಭಾಯಿಸುವಿಕೆ ಹಾಗೂ ಸಿಬ್ಬಂದಿ ಕೊರತೆ- ಇವೆಲ್ಲ ವಿಷಯಗಳಲ್ಲೂ ಇರುವ ಸಮಸ್ಯೆಗಳ ಕುರಿತು ಪ್ರವೀಣ್ ಅವರಿಗೆ ಗೊತ್ತಾಗಿದೆ' ಎಂದಿದ್ದಾರೆ.
'ಶಾಖಾ ಕಚೇರಿಗಳ ಸಮಸ್ಯೆಗಳನ್ನು ಅಲ್ಲಿನ ಸ್ಥಳೀಯ ಸಿಬ್ಬಂದಿಯಿಂದ ತಿಳಿಯುವಷ್ಟು ಯಾವುದೇ ವಿಧಾನದಿಂದ ತಿಳಿಯಲಾಗದು ಎಂಬುದು ಪ್ರವೀಣ ಅವರ ನಂಬಿಕೆಯಾಗಿದೆ' ಎಂದೂ ಅವರು ವಿವರಿಸಿದ್ದಾರೆ.