HEALTH TIPS

ಸಾವಿರದ ಸವಾಲುಗಳ ಮಧ್ಯೆ ಭರವಸೆಯ ಬೆಳಕಾಗಿ ಮರಳಿ ಯುಗಾದಿ ಬಂದಿದೆ

 ಶ್ರೀ ಶಕೆ 1946 ಕ್ರೋಧಿನಾಮ ಸವಂತ್ಸರ, ಉತ್ತರಾಯಣ ವಸಂತ ಋತು, ಚೈತ್ರ ಮಾಸ, ಯುಗಾದಿ ಹಬ್ಬದ ಹಾಗೂ ಹೋಸ ವರ್ಷದ ಹಾರ್ದಿಕ

ಶುಭಾಶಯಗಳು. ಎಲ್ಲರಿಗೂ ಶುಭಾವಾಗಲಿ.

*ಯುಗಾದಿ ಹಬ್ಬದ ಮಹತ್ವ ಹಾಗೂ ಹಿನ್ನೆಲೆ*

ಶ್ರೀ ಶಾಲಿವಾಹನ ಶಕೆ ೧೯೪೬, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸವಾದ ಹೊಸ ವರ್ಷದ ಅಂದರೆ “ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” ಎಂಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ.ರಾ.ಬೇಂದ್ರೆಯವರ ವಾಣಿಯು ಇಂದಿಗೂ ಜನಮನದಲ್ಲಿ ಅಚ್ಚಳಿಯದೆ ಉಳಿದಿದೆ. ರಾಷ್ಟ್ರಕವಿ ಕುವೆಂಪುರವರು “ಸುರಲೋಕದ ಸುರನದಿಯಲ್ಲಿ ಮಿಂದು ಸುರಲೋಕದ ಸಂಪದವನು ತಂದು ನವಸಂವತ್ಸರ ಭೂಮಿಗೆ ಬಂದು ಕರೆಯುತ್ತಿದೆ ನಮ್ಮನ್ನು ಇಂದು” ಎಂದು ಯುಗಾದಿಯ ಬಗ್ಗೆ ಹಾಡಿ ವರ್ಣಿಸಿದ್ದಾರೆ. ಅಲ್ಲದೆ ಕೆ.ಎಸ್ ನರಸಿಂಹಸ್ವಾಮಿಯವರು “ಮಾವು ನಾವು ಬೇವು ನಾವು ನೋವು ನಲಿವು ನಮ್ಮವು, ಹೂವು ನಾವು ಹಸಿರು ನಾವು ಬೇವು ಬೆಲ್ಲ ನಮ್ಮವು” ಎಂದಿದ್ದಾರೆ. ಈ ನೂತನ ವರ್ಷವು ವಸಂತ ಋತುವಿನಂತೆ ಲವಲವಿಕೆಯಿಂದ, ಆಯುರಾರೋಗ್ಯದಿಂದ ಇದ್ದು ಸುಖ, ಶಾಂತಿ, ನೆಮ್ಮದಿಯನ್ನು ಭಗವಂತನು ಸರ್ವರಿಗೂ ನೀಡಲೆಂದು ಹಾರ್ದಿಕ ಶುಭಾಶಯಗಳೊಂದಿಗೆ ಈ ಕಿರು ಲೇಖನ ಓದುಗ ಸಹೃದಯರಿಗೆ.

*ಬ್ರಹ್ಮಾಂಡ ನಿರ್ಮಾಣದ ಮೊದಲ ದಿನ* :-
ಯುಗಾದಿ ಪಾಡ್ಯ ಎಂದರೆ ಬ್ರಹ್ಮದೇವನು ಬ್ರಹ್ಮಾಂಡದ ನಿರ್ಮಾಣ ಮಾಡಿದ ದಿನ. ಬ್ರಹ್ಮದೇವನ ಹೆಸರಿನಿಂದಲೇ ‘ಬ್ರಹ್ಮಾಂಡ’ ಈ ಹೆಸರು ಬಂದಿದೆ. ಬ್ರಹ್ಮತತ್ತ್ವವು ಸತ್ಯಯುಗದಲ್ಲಿ ಮೊದಲ ಬಾರಿಗೆ ಯುಗಾದಿ ಪಾಡ್ಯದ ದಿನ ನಿರ್ಗಣದಿಂದ ನಿರ್ಗಣ ಮತ್ತು ಸಗುಣ ಮಟ್ಟಕ್ಕೆ ಬಂದು ಪೃಥ್ವಿಯಲ್ಲಿ ಕಾರ್ಯನಿರತವಾಯಿತು. ಸತ್ಯ ಮತ್ತು ತ್ರೇತಾಯುಗಗಳಲ್ಲಿ ಬ್ರಹ್ಮದೇವನ ಬಗ್ಗೆ ಅನೇಕ ಋಷಿಮುನಿಗಳಿಗೆ ಮತ್ತು ದಾನವರಿಗೆ ತಿಳಿದಿತ್ತು. ದ್ವಾಪರಯುಗದ ನಂತರ ಬ್ರಹ್ಮದೇವನ ಮಹತ್ವವು ಕ್ರಮೇಣ ಕಡಿಮೆಯಾಯಿತು. ಕಲಿಯುಗದಲ್ಲಿರುವ ಜೀವಗಳಿಗೆ ಸೃಷ್ಟಿಕರ್ತ ಬ್ರಹ್ಮದೇವನ ಬಗ್ಗೆ ಸ್ವಲ್ಪವೂ ಮಾಹಿತಿಯಿಲ್ಲ. ಬ್ರಹ್ಮತತ್ತ್ವದ ಲಾಭವಾಗಬೇಕಾದರೆ ಜೀವಗಳಲ್ಲಿ ಶೇ. 40ರಷ್ಟು ಭಾವವಿರಬೇಕು. ಜೀವಗಳಲ್ಲಿ ಭಾವವಿದ್ದರೆ ಮಾತ್ರ ಅವರಿಗೆ ಪ್ರತಿಯೊಂದು ಹಬ್ಬ ಮತ್ತು ಈಶ್ವರನಿಂದ ಆಯಾಯ ಸಮಯದಲ್ಲಿ ಹರಡುವ ಜ್ಞಾನಲಹರಿ, ಶಕ್ತಿ, ಚೈತನ್ಯ, ಸತ್ತ್ವಲಹರಿ ಮತ್ತು ವಿಶಿಷ್ಟ ದೇವತೆಗಳ ತತ್ತ್ವಲಹರಿಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

*ನೈಸರ್ಗಿಕ ಹಿನ್ನೆಲೆ* :-
ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಬಿಂದು ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ ಮಕರ ಮತ್ತು ಕರ್ಕಾಟಕ ವೃತ್ತಗಳು ಪರಸ್ಪರ ಛೇದಿಸುವಂತಹ ಬಿಂದು) ಮತ್ತು ವಸಂತಋತು ಪ್ರಾರಂಭವಾಗುತ್ತದೆ. “ಎಲ್ಲ ಋತುಗಳಲ್ಲಿ ಕುಸುಮಾಕರಿ ವಸಂತ ಋತುವು ನನ್ನ ವಿಶೇಷ ಶಕ್ತಿಯಾಗಿದೆ” ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (10:35) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದದಾಯಕ ಹವಾಗುಣವಿರುತ್ತದೆ. ಶಿಶಿರಋತುವಿನಲ್ಲಿ ಮರಗಳ ಎಲೆಗಳು ಉದುರಿದರೆ, ಪಾಡ್ಯದ ಹೊತ್ತಿಗೆ ಮರಗಳಿಗೆ ಹೊಸ ಚಿಗುರು ಬರುತ್ತಿರುವುದರಿಂದ ವೃಕ್ಷ-ಬಳ್ಳಿಗಳು ಚೈತನ್ಯಮಯವಾಗಿ ಕಾಣುತ್ತವೆ.


*ನಿಸರ್ಗದ ಮರುಹುಟ್ಟು* :-
ಕ್ರಿಸ್ತಶಕವು ಜನವರಿ 1ರಿಂದ. ಆರ್ಥಿಕ ವರ್ಷವು ಏಪ್ರಿಲ್ 1ರಿಂದ, ಹಿಂದೂವರ್ಷವು ಚೈತ್ರ ಶುದ್ಧ ಪಾಡ್ಯದಿಂದ, ವ್ಯಾಪಾರೀವರ್ಷವು ಕಾರ್ತಿಕ ಶುದ್ಧ ಪಾಡ್ಯದಿಂದ, ಶೈಕ್ಷಣಿಕ ವರ್ಷವು ಜೂನ್​ನಿಂದ ಪ್ರಾರಂಭವಾಗುತ್ತದೆ. ಈ ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯವಾದುದೆಂದರೆ ಚೈತ್ರಶುದ್ಧ ಪಾಡ್ಯ. ಜನವರಿ 1ರಂದು ವರ್ಷಾರಂಭ ಏಕೆ ಮಾಡಬೇಕು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಚೈತ್ರ ಶುದ್ಧ ಪಾಡ್ಯದಂದು ವರ್ಷಾರಂಭ ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ವಿಕ್ರಮ ಶಕೆಯ ಮೊದಲ ದಿನವಾದ ಕಾರ್ತಿಕ ಶುದ್ಧ ಪಾಡ್ಯವನ್ನು ಯುಗಾದಿ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿರುವುದನ್ನು ಕಾಣುತ್ತೇವೆ. ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಹೊಸ ಪುಳಕ. ಗಿಡ ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದರೆ, ಸುಡು ಬಿಸಿಲ ನಡುವೆಯೂ ಆಗಾಗ್ಗೆ ಬೀಸುವ ತಂಗಾಳಿ ಮನಕ್ಕೆ ಮುದನೀಡುತ್ತದೆ. ನಿಸರ್ಗದ ಮಡಿಲಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅರಳಿ ನಿಂತು ಸುವಾಸನೆ ಬೀರುವ ಕುಸುಮಗಳು ಅವುಗಳ ಮೇಲೆ ಹಾರಾಡಿ ಮಕರಂದ ಹೀರುವ ಜೇನು ನೊಣಗಳ ಝೇಂಕಾರ ಎಲ್ಲೆಡೆ ಕಂಡು ಬರುತ್ತದೆ. ಹಾಗೆ ನೋಡಿದರೆ ಯುಗಾದಿ ಎನ್ನುವುದು ನಿಸರ್ಗಕ್ಕೊಂದು ಮರುಹುಟ್ಟು ಅಷ್ಟೇ ಅಲ್ಲ ಮುಂದೆ ಬರಲಿರುವ ಎಲ್ಲಾ ಹಬ್ಬಗಳಿಗೂ ಇದು ಮುನ್ನುಡಿ ಎಂದರೂ ತಪ್ಪಾಗಲಾರದು.

*ಜ್ಯೋತಿಷ್ಯ ಶಾಸ್ತçದ ಹಿನ್ನೆಲೆ* :-
ಯುಗಾದಿ ಆಚರಣೆಯಲ್ಲಿ ಬಾರ್ಹಸ್ಪತ್ಯಮಾನ, ಚಾಂದ್ರಮಾನ ಮತ್ತು ಸೌರಮಾನವೆಂಬ ಮೂರು ರೀತಿಯ ಲೆಕ್ಕಾಚಾರ ಜ್ಯೋತಿಷ್ಯ ಶಾಸ್ತçದಲ್ಲಿದೆ. ಭಾರತದಲ್ಲಿ ಯುಗಾದಿ ಆಚರಣೆಯೂ ಕೂಡ ವಿಭಿನ್ನವಾಗಿದೆ. ಉತ್ತರ ಭಾರತದಲ್ಲಿ ಬಾರ್ಹಸ್ಪತ್ಯಮಾನದಲ್ಲಿ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಯನ್ನು ಆಚರಿಸುವ ಪದ್ಧತಿಯಿದೆ. ಈ ಎರಡು ಯುಗಾದಿ ಆಚರಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಚಂದ್ರ ಮತ್ತೊಂದು ಸೂರ್ಯನನ್ನು ಅವಲಂಭಿಸಿರುವುದು ಸ್ಪಷ್ಟವಾಗುತ್ತದೆ. ಚಾಂದ್ರಮಾನ ಯುಗಾದಿ ಕುರಿತಂತೆ ಹೇಳುವುದಾದರೆ, ಚಂದ್ರನ ಚಲನೆಯನ್ನು ಆಧರಿಸಿ ಸಾಮಾನ್ಯವಾಗಿ ಅಮಾವಾಸ್ಯೆ-ಹುಣ್ಣಿಮೆಯನ್ನು ಮತ್ತು ಇವುಗಳ ಆಧಾರದಲ್ಲಿ ತಿಂಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಪದ್ಧತಿಯೇ ಚಾಂದ್ರಮಾನವಾಗಿದೆ. ಈ ಪದ್ಧತಿಯಲ್ಲಿ ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ಕೂಡ ನಿರ್ಧಿಷ್ಟ ದಿನಾಂಕದಲ್ಲಿ ಬಾರದಿರುವುದನ್ನು ನಾವು ಕಾಣಬಹುದು. ಸೌರಮಾನ ಯುಗಾದಿಯನ್ನು ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನದಂದು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷದ ಚೈತ್ರಮಾಸದಲ್ಲಿ ಬರುವ ಮೊದಲ ದಿನವನ್ನು ಸಂವತ್ಸರಾದಿ ಪಾಡ್ಯಮಿ ಎಂದು ಪರಿಗಣಿಸಿ ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದ ಕೆಲವೆಡೆ ಸೌರಮಾನ ಯುಗಾದಿಯನ್ನು ಆಚರಿಸುವುದು ಕೂಡ ಕಂಡು ಬರುತ್ತದೆ.
ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷದಲ್ಲಿ ಬರುವ ಮೂರೂವರೆ ದಿನಗಳ ಶುಭಗಳಿಗೆ ಅತ್ಯಂತ ಶ್ರೇಷ್ಠವಾದದು ಎಂದು ಹೇಳಲಾಗಿದೆ. ಇದರಲ್ಲಿ ಯುಗಾದಿಯೂ ಒಂದಾಗಿದ್ದು, ಯುಗಾದಿ ದಿನದಂದು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಜನವಲಯದಲ್ಲಿದೆ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಹೊಸ ಕಾರ್ಯ ಚಟುವಟಿಕೆ, ಹೊಸ ಪದಾರ್ಥಗಳ ಖರೀದಿ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಆರಂಭಿಸುವುದನ್ನು ಕಾಣುತ್ತೇವೆ.
ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯದಶಮಿ) ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ದಿನಗಳಂದು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳ ಪ್ರತಿ ಘಳಿಗೆಯೂ ಶುಭಮುಹೂರ್ತವೇ ಆಗಿರುತ್ತದೆ.

*ಐತಿಹಾಸಿಕ ಹಿನ್ನೆಲೆ* :-
ಯುಗಾದಿ ಆಚರಣೆ ವೇದಗಳ ಕಾಲದಿಂದಲೂ ನಡೆದು ಬಂದಿದ್ದು, ಅಥರ್ವವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಿದೆ. ಹೇಮಾದ್ರಿ ಪಂಡಿತನ “ಚತುರ್ವರ್ಗ ಚಿಂತಾಮಣಿ " ಎಂಬ ಪುರಾಣ ಗ್ರಂಥದಲ್ಲಿ ಬ್ರಹ್ಮ ದೇವನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲ ಅಂದರೆ ಯುಗಾದಿಯಂದು ಭೂಮಂಡಲವನ್ನು ಸೃಷ್ಟಿಸಿದ್ದು, ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಉಲ್ಲೇಖಿಸಲಾಗಿದೆ. ಅಲ್ಲದೆ ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು ಹಾಗೂ ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿ ದಿಗ್ವಿಜಯ ಸಾಧಿಸಿದ್ದು ಯಗಾದಿಯ ದಿನವಾದ್ದರಿಂದ ಯುಗಾದಿ ಹಬ್ಬವು ಜೈನರಿಗೂ ಮಹತ್ವದ ದಿನವಾಗಿದೆ ಎಂದು ಹೇಳಲಾಗುತ್ತದೆ.

*ಪೌರಾಣಿಕ ಹಿನ್ನೆಲೆ* :-
ಶ್ರೀರಾಮನು ಈ ದಿನವೇ ವಾಲಿಯನ್ನು ವಧಿಸಿದನು. ದುಷ್ಟಪ್ರವೃತ್ತಿಯುಳ್ಳ ರಾಕ್ಷಸರನ್ನು ಮತ್ತು ರಾವಣನನ್ನು ವಧಿಸಿ, ಶ್ರೀರಾಮಚಂದ್ರನು ಅಯೋಧ್ಯೆಗೆ ಮರಳಿ ಬಂದು ರಾಮನು ರಾಜ್ಯವಾಳಲು ಪ್ರಾರಂಭಿಸಿದ್ದು, ಶಕರು, ಹೂಣರನ್ನು ಸೋಲಿಸಿ ವಿಜಯವನ್ನು ಸಂಪಾದಿಸಿದ್ದೂ ಇದೇ ದಿನವಾಗಿದೆ. ಈ ದಿನದಿಂದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು. ಏಕೆಂದರೆ ಶಾಲಿವಾಹನನು ಈ ದಿನದಂದೇ ಶತ್ರುಗಳನ್ನು ಜಯಿಸಿದನು. ಶಾಲಿವಾಹನ ಶಕೆ ಆರಂಭವಾದದ್ದು ಸಹ ಯುಗಾದಿ ದಿನವೇ ಎಂದು ಎನ್ನಲಾಗುತ್ತಿದೆ. ಯುಗಾದಿ ಹಬ್ಬದ ಆಚರಣೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿರುವುದನ್ನು ನಾವು ಕಾಣಬಹುದಾದರೂ ಸಾಮಾನ್ಯವಾಗಿ ಹಬ್ಬದ ದಿನದಂದು ಸೂರ್ಯೋದಯಕ್ಕೂ ಮುನ್ನ ನಿದ್ರೆಯಿಂದ ಎದ್ದು ಮಂಗಳ ಸ್ನಾನ ಮಾಡಿ ಶ್ರೀರಾಮನನ್ನು ಸ್ಮರಣೆ ಮಾಡಿ ಹೊಸಬಟ್ಟೆ ತೊಟ್ಟು ಮನೆಯನ್ನೆಲ್ಲ ಮಾವು-ಬೇವು ಎಲೆಗಳ ತೋರಣದಿಂದ ಸಿಂಗರಿಸಿ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಬಾವುಟ ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ ಮಾಡುವುದು, ವಸಂತ ನವರಾತ್ರಿ ಆರಂಭ, ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆಯೂ ನಡೆಯುತ್ತದೆ.


*ಸಾಂಪ್ರದಾಯಿಕ ಹಿನ್ನೆಲೆ* :-
ಯುಗಾದಿ ಹಬ್ಬದ ದಿನದಂದು ಹೋಸ ಉಡುಗೆ-ತೊಡುಗೆಯ ಜೊತೆಗೆ ಬೇವು-ಬೆಲ್ಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖಗಳೆರಡು ಸಮಾನವಾಗಿ ಸ್ವೀಕರಿಸಬೇಕು ಎಂಬುವುದನ್ನು ಸಾರುತ್ತಾ ಬರಲಾಗುತ್ತದೆ. ಆದುದರಿಂದ ಯುಗಾದಿಯಂದು ಬೇವು-ಬೆಲ್ಲ ಸೇವಿಸುವುದು ಎಂದರೆ ಕಷ್ಟಸುಖಗಳನ್ನು ಸಮಾನವಾಗಿ ಎದುರಿಸಿ ಬದುಕುವುದು ಎಂದರ್ಥವಾಗಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಯುಗಾದಿ ಹಬ್ಬದಂದು ಸೇವಿಸಲಾಗುತ್ತದೆ.
ಯುಗಾದಿ ಹಬ್ಬದ ಮಾರನೆಯ ದಿನವನ್ನು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ‘ವರ್ಷ ತೊಡಕು’ ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆಯನ್ನು ನೀಡುವುದು ಕಂಡು ಬರುತ್ತದೆ.

*ಸಾಂಸ್ಕೃತಿಕ ಹಿನ್ನೆಲೆ* :-
ಈ ದಿನ ವಿವಿಧ ಬಗೆಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ಮನರಂಜನೆಯನ್ನು ಪಡೆಯುತ್ತಾರೆ. ಅಂದು ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ. ಒಂದೆಡೆ ಮಗಳು ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸಿದರೆ, ಮತ್ತೊಂದೆಡೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಸತ್ಕರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇತ್ತೀಚಿನ ಯಾಂತ್ರಿಕ ಯುಗದಲ್ಲಿ ಯುಗಾದಿ ಹಬ್ಬದ ಆಚರಣೆಗಳಲ್ಲಿ ಒಂದಿಷ್ಟು ವ್ಯತ್ಯಾಸಗಳು ಆಗಿರಬಹುದಾದರೂ ಹಬ್ಬದ ರಂಗು ಎಂದಿಗೂ ಕಳೆಗುಂದುವುದಿಲ್ಲ ಹಾಗಾಗಿಯೇ ಎಷ್ಟೇ ಯುಗ ಕಳೆದರೂ ಯುಗಾದಿ ಮರಳಿ ಬರುತ್ತಲೇ ಇರುತ್ತದೆ.

*ಅಭ್ಯಂಗಸ್ನಾನದ ಹಿನ್ನೆಲೆ* :-
ಯುಗಾದಿಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು, ಮೊದಲು ಅಭ್ಯಂಗಸ್ನಾನ ಮಾಡುತ್ತಾರೆ. ದೇಹಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತೀಡಿ ಚರ್ಮದಲ್ಲಿ ಸೇರುವಂತೆ ಮಾಡಿ, ನಂತರ ಬಿಸಿನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗಸ್ನಾನ ಎನ್ನುತ್ತಾರೆ. ಸ್ನಾನದಿಂದ ರಜ-ತಮಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ. ಈ ಪ್ರಭಾವವು ನಿತ್ಯದ ಸ್ನಾನದಲ್ಲಿ ಮೂರು ಗಂಟೆಗಳ ಕಾಲ ಉಳಿದರೆ, ಅಭ್ಯಂಗಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆಗಳ ಕಾಲ ಉಳಿಯುತ್ತದೆ. ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕೆಂದು ಎಣ್ಣೆಯನ್ನು ಹಚ್ಚುತ್ತಾರೆ. ಶರೀರಕ್ಕೆ ಸುಖದಾಯಕ ಮತ್ತು ಮಂಗಲಕರವೆಂದು ಬಿಸಿನೀರಿನ ಸ್ನಾನವನ್ನು ಶಾಸ್ತ್ರಗೃಂಥಗಳಲ್ಲಿ ಹೇಳಲಾಗುತ್ತದೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆಯು ಉಳಿಯುತ್ತದೆ. ಆದುದರಿಂದ ಹಾಗೆ ಸ್ನಾನ ಮಾಡುವುದಕ್ಕಿಂತ ಮೊದಲು ಎಣ್ಣೆಯನ್ನು ಹಚ್ಚಬೇಕು. (ಸ್ನಾನದ ನಂತರ ಎಣ್ಣೆ ಹಚ್ಚುವುದು ಯೋಗ್ಯವಲ್ಲ)

*ದೇಶಕಾಲ ಕಥನದ ಹಿನ್ನೆಲೆ* :-
ಅಭ್ಯಂಗಸ್ನಾನವನ್ನು ಮಾಡುವಾಗ ದೇಶಕಾಲಕಥನ ಮಾಡಬೇಕು. ದೇಶಕಾಲಕಥನ ಮಾಡುವ ಭಾರತೀಯರ ಪದ್ಧತಿಯೂ ವೈಶಿಷ್ಟ್ಯಪೂರ್ಣವಾಗಿದೆ. ಬ್ರಹ್ಮದೇವನ ಜನನವಾದಾಗಿನಿಂದ ಇಲ್ಲಿಯವರೆಗೂ ಬ್ರಹ್ಮದೇವನ ಎಷ್ಟು ವರ್ಷಗಳಾದವು? ಯಾವ ವರ್ಷದಲ್ಲಿ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ? ಈ ಮನ್ವಂತರದಲ್ಲಿನ ಎಷ್ಟನೆಯ ಮಹಾಯುಗ ಮತ್ತು ಅದರಲ್ಲಿ ಯಾವ ಉಪಯುಗ ನಡೆದಿದೆ? ಇವೆಲ್ಲವುಗಳ ಉಲ್ಲೇಖವು ದೇಶಕಾಲಕಥನದಲ್ಲಿ ಬರುತ್ತದೆ. ಇದರಿಂದ ಎಷ್ಟು ಮಹತ್ತರವಾದ ಕಾಲವು ಗತಿಸಿದೆ? ಮತ್ತು ಉಳಿದ ಕಾಲವು ಎಷ್ಟು? ದೊಡ್ಡದಿದೆ ಎನ್ನುವುದರ ಕಲ್ಪನೆ ಬರುತ್ತದೆ. ನಾನು ಬಹಳ ದೊಡ್ಡವನು, ಎಂದು ಪ್ರತಿಯೊಬ್ಬನಿಗೂ ಎನಿಸುತ್ತಿರುತ್ತದೆ. ಆದರೆ ವಿಶ್ವದ ಬೃಹತ್ ಕಾಲವನ್ನು ಮನಗಂಡಾಗ ನಾವೆಷ್ಟು ಚಿಕ್ಕವರು? ಮತ್ತು ಎಷ್ಟು ಸಣ್ಣವರು ಎನ್ನುವುದರ ಅರಿವಾಗುತ್ತದೆ. ಇದರ ಒಂದು ಲಾಭವೆಂದರೆ ಮನುಷ್ಯನ ಅಹಂಭಾವವು ಕಡಿಮೆಯಾಗುತ್ತದೆ. ವರ್ಷದಲ್ಲಿ ಮುಂದಿನ ಐದು ದಿನಗಳಂದು ಹೀಗೆಯೇ ಅಭ್ಯಂಗಸ್ನಾನ ಮಾಡಬೇಕೆಂದು ಶಾಸ್ತçಗ್ರಂಥದಲ್ಲಿ ಹೇಳಲಾಗಿದೆ. 1.ಸಂವತ್ಸರಾರಂಭ, 2.ವಸಂತೋತ್ಸವದ ಮೊದಲನೆಯ ದಿನ, ಅಂದರೆ ಫಾಲ್ಗುಣ ಬಹುಳ ಪ್ರತಿಪದೆ ಮತ್ತು 3.ದೀಪಾವಳಿಯ ಮೂರು ದಿನಗಳು ಅಂದರೆ ಆಶ್ವಯುಜ ಬಹುಳ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪ್ರತಿಪದ.

*ತಳಿರು ತೋರಣದ ಹಿನ್ನೆಲೆ* :-
ಸ್ನಾನವಾದ ನಂತರ ಮಾವಿನತೋರಣವನ್ನು ತಯಾರಿಸಿ ಕೆಂಪುಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. (ಕೆಂಪು ಬಣ್ಣವು ಶುಭದಾಯಕ) ಪೂಜೆಮೊದಲು ನಿತ್ಯಕರ್ಮ ಪೂಜೆ ಮಾಡಬೇಕು. ಶಾಂತಿಯ ಆರಂಭದಲ್ಲಿ ಬ್ರಹ್ಮದೇವನ ಪೂಜೆ ಮಾಡಬೇಕು. ಏಕೆಂದರೆ ಬ್ರಹ್ಮನು ಸೃಷ್ಟಿಯನ್ನು ಈ ದಿನವೇ ನಿರ್ಮಿಸಿದನು. ಪೂಜೆಯಲ್ಲಿ ಅವನಿಗೆ ದವನವನ್ನು ಅರ್ಪಿಸಬೇಕು. ಅನಂತರ ಹೋಮಹವನ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ಮಾಡಬೇಕು. ತರುವಾಯ ಅನಂತರೂಪಗಳಲ್ಲಿ ಅವತರಿಸುವ ವಿಷ್ಣುವಿನ ಪೂಜೆ ಮಾಡಬೇಕು. “ನಮಸ್ತೇ ಬ್ರಹ್ಮರೂಪಾಯವಿಷ್ಣವೇ ನಮಃ|” ಈ ಮಂತ್ರವನ್ನು ಹೇಳಿ ನಮಸ್ಕರಿಸಬೇಕು. ಅನಂತರ ಬ್ರಾಹ್ಮಣರಿಗೆ ದಕ್ಷಿಣೆ ಕೊಡಬೇಕು, ಸಾಧ್ಯವಾದರೆ ಇತಿಹಾಸ, ಪುರಾಣಗಳು ಮುಂತಾದ ಗ್ರಂಥಗಳನ್ನು ಬ್ರಾಹ್ಮಣರಿಗೆ ದಾನ ಕೊಡಬೇಕು. ಈ ಶಾಂತಿವಿಧಿಯನ್ನು ಮಾಡುವುದರಿಂದ ಸರ್ವಪಾಪಗಳ ನಾಶವಾಗುತ್ತದೆ, ಉತ್ಪಾತ ಘಟಿಸುವುದಿಲ್ಲ, ಆಯುಷ್ಯವು ವೃದ್ಧಿಯಾಗುತ್ತದೆ ಮತ್ತು ಧನಧಾನ್ಯ ಸಮೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಸಂವತ್ಸರ ಪೂಜೆ ಮಾಡಿದರೆ ಸರ್ವಪಾಪಗಳು ನಾಶವಾಗಿ ಆಯುಷ್ಯವು ವೃದ್ಧಿಯಾಗುತ್ತದೆ. ಸೌಭಾಗ್ಯವು ಹೆಚ್ಚಿ ಶಾಂತಿಯು ಲಭಿಸುತ್ತದೆ. ಈ ದಿನದಂದು ಆ ವಾರದ ದೇವತೆಯ ಪೂಜೆಯನ್ನೂ ಮಾಡಬೇಕು. ಬ್ರಹ್ಮಧ್ವಜವನ್ನು ನಿಲ್ಲಿಸುವುದು ರಾವಣವಧೆಯ ನಂತರ ಅಯೋಧ್ಯೆಗೆ ಮರಳುವ ರಾಮನ ವಿಜಯದ ಮತ್ತು ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸುತ್ತಾರೆ.
ವಿಜಯದ ಪ್ರತೀಕವು ಉನ್ನತವಾಗಿರುತ್ತದೆ. ಆದುದರಿಂದ ಬ್ರಹ್ಮಧ್ವಜವನ್ನು ಎತ್ತರದಲ್ಲಿ ಇರಿಸುತ್ತಾರೆ. ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ. ನೂತನ ವರ್ಷದ ಸ್ವಾಗತಕ್ಕಾಗಿ ಎಲ್ಲರೂ ಉತ್ಸಾಹಭರಿತರಾಗಿರುತ್ತಾರೆ.
ಇದಕ್ಕೆ “ಬ್ರಹ್ಮಧ್ವಜಾಯ ನಮಃ” ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮದೇವನು ಈ ದಿನ ಸೃಷ್ಟಿಯನ್ನು ನಿರ್ಮಿಸಿದ ಕಾರಣ ಧರ್ಮಶಾಸ್ತ್ರದಲ್ಲಿ ಈ ಧ್ವಜವನ್ನು ಬ್ರಹ್ಮಧ್ವಜ ಎಂದು ಕರೆಯಲಾಗಿದೆ. ಕೆಲವರು ಇದನ್ನು ಇಂದ್ರಧ್ವಜವೆಂದೂ ಕರೆಯುತ್ತಾರೆ. ಬ್ರಹ್ಮಧ್ವಜದ ಮುಖಾಂತರ ವಾತಾವರಣದಲ್ಲಿನ ಪ್ರಜಾಪತಿ-ಸಂಯುಕ್ತ ಲಹರಿಗಳು ಈ ಕಲಶದ ಮಾಧ್ಯಮದಿಂದ ಮನೆಯಲ್ಲಿ ಪ್ರವೇಶಿಸುತ್ತವೆ. (ದೂರದರ್ಶನ ಯಂತ್ರದ ಆಂಟೆನಾ ಮಾಡುವ ಕಾರ್ಯದಂತೆ) ಎರಡನೆಯ ದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು. ಹೀಗಾಗಿ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿರುವ ಕಲಶವು ಕುಡಿಯುವ ನೀರಿನ ಮೇಲೆ ಅಂತಹ ಸಂಸ್ಕಾರಗಳನ್ನೇ ಮಾಡುತ್ತವೆ. ಆದುದರಿಂದ ನಮಗೆ ವರ್ಷವಿಡೀ ಪ್ರಜಾಪತಿ ಲಹರಿಗಳು ಪ್ರಾಪ್ತವಾಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸುತ್ತಾರೆ.

*ಪಂಚಾಂಗ ಶ್ರವಣದ ಹಿನ್ನೆಲೆ* :-
ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ನೂತನ ವರ್ಷದ ಪಂಚಾಂಗದ ಅಂದರೆ ವರ್ಷಫಲದ ಶ್ರವಣ ಮಾಡುತ್ತಾರೆ. ತಿಥಿಯ ಶ್ರವಣದಿಂದ ಲಕ್ಷ್ಮಿಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ, ನಕ್ಷತ್ರ ಶ್ರವಣದಿಂದ ಪಾಪನಾಶವಾಗುತ್ತದೆ, ಯೋಗಶ್ರವಣದಿಂದ ರೋಗ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯವು ಸಿದ್ಧಿಯಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಎಂದು ಪಂಚಾಂಗ ಶ್ರವಣದ ಫಲವನ್ನು ಹೇಳಲಾಗಿದೆ,  ಇದರ ನಿತ್ಯಶ್ರವಣದಿಂದ ಗಂಗಾಸ್ನಾನದಷ್ಟೇ ಫಲವು ಲಭಿಸುತ್ತದೆ ಎಂಬ ನಂಬಿಕೆ ನಮ್ಮವರಲ್ಲಿ ಕಾಣುತ್ತೇವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries