HEALTH TIPS

ಅವಧಿ ಮೀರಿದ ಅಂಕಿಅಂಶ, ಮೌಲ್ಯಮಾಪನದಲ್ಲಿ ಲೋಪಗಳು: ಅನೇಕ ಕರಾವಳಿ ಯೋಜನೆಗಳಿಗೆ ಸರಕಾರದ ಅನುಮತಿಗೆ CAG ಆಕ್ಷೇಪ

               ದೆಹಲಿ: :ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ಆ.8ರಂದು ಸಂಸತ್ತಿನಲ್ಲಿ ಮಂಡಿಸಿರುವ ವರದಿಯು ಹಲವಾರು ಕರಾವಳಿ ಯೋಜನೆಗಳಿಗೆ ಪರಿಸರ ಅನುಮತಿ ಪ್ರಕ್ರಿಯೆಯಲ್ಲಿ ಹಲವಾರು ಲೋಪಗಳನ್ನು ಬೆಟ್ಟು ಮಾಡಿದೆ.

               ಇದು ಭಾರತೀಯ ಕರಾವಳಿ ಪರಿಸರ ವ್ಯವಸ್ಥೆಗಳನ್ನು ನಿಯಂತ್ರಿಸುವ ಕಾನೂನುಗಳ 'ದೊಡ್ಡ ಪ್ರಮಾಣದ 'ಉಲ್ಲಂಘನೆಯಾಗಿದೆ ಎಂದು ಅದು ಬಣ್ಣಿಸಿದೆ.

                    ಸಾಕಷ್ಟು ಪರಿಶೀಲನೆಗಳಿಲ್ಲದೆ ಮತ್ತು ಸಮತೋಲನಗಳನ್ನು ಹೊಂದಿರದೆ ಹಲವಾರು ಯೋಜನೆಗಳಿಗೆ ಅನುಮತಿಯನ್ನು ನೀಡಲಾಗಿದೆ ಎಂದು ವರದಿಯು ಬೆಟ್ಟುಮಾಡಿದೆ.

                    ವರದಿಯಲ್ಲಿ ಹೆಸರಿಸಲಾಗಿರುವ ಯೋಜನೆಗಳಲ್ಲಿ ಕರ್ನಾಟಕದ ಮಂಗಳೂರಿನ ಪಣಂಬೂರಿನಲ್ಲಿ ಮೋತಿಮಹಲ್ ಹೋಟೆಲ್ ನ ನಿರ್ಮಾಣ, ಗುಜರಾತಿನ ಅದಾನಿ ಪೆಟ್ರೋ ಪೋರ್ಟ್, ಮಹಾರಾಷ್ಟ್ರದ ಮುಂಬೈ ಕರಾವಳಿ ರಸ್ತೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್, ರೆಡಿ ಪೋರ್ಟ್ ಲಿ.ನಿಂದ ಬಂದರೊಂದರಲ್ಲಿ ಸೌಲಭ್ಯಗಳ ವಿಸ್ತರಣೆ ಹಾಗೂ ಗೋವಾದ ಮಾರ್ಮಗೋವಾ ಬಂದರಿನಲ್ಲಿ ಪ್ರವೇಶ ಮತ್ತು ನಿರ್ಗಮನ ಮಾರ್ಗದ ಆಳಗೊಳಿಸುವಿಕೆ ಇತ್ಯಾದಿಗಳು ಸೇರಿವೆ.

                   ವರದಿಯಲ್ಲಿ ಉಲ್ಲೇಖಿಸಲಾಗಿರುವ ಉಲ್ಲಂಘನೆಗಳಲ್ಲಿ ಅನುಮತಿ ನೀಡಲು ಅವಧಿ ಮೀರಿದ ದತ್ತಾಂಶಗಳ ಬಳಕೆ, ಪರಿಸರದ ಮೇಲೆ ಯೋಜನೆಗಳ ಪರಿಣಾಮವನ್ನು ಸಮಗ್ರವಾಗಿ ವೌಲ್ಯಮಾಪನ ಮಾಡದಿರುವುದು ಮತ್ತು ಕೆಲವು ಯೋಜನೆಗಳಿಗೆ ಮಂಜೂರು ಮಾಡಿರುವ ಅನುಮತಿಯಲ್ಲಿ ನಿಯಮಗಳ ಅನುಸರಣೆಯ ಕೊರತೆ ಸೇರಿವೆ.

                     ಈ ಉಲ್ಲಂಘನೆಗಳ ಪ್ರಮಾಣವು 2011 ಮತ್ತು 2019ರ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಗಳ ಅನುಷ್ಠಾನದ ವೌಲ್ಯಮಾಪನವನ್ನು ಕಡ್ಡಾಯಗೊಳಿಸಿದೆ ಎಂದು ವರದಿಯು ಹೇಳಿದೆ.

                  2015-19ರ ನಡುವೆ ಕೇಂದ್ರ ಪರಿಸರ ಸಚಿವಾಲಯವು 210 ಮತ್ತು ರಾಜ್ಯ ಸಂಸ್ಥೆಗಳು 1978 ಯೋಜನೆಗಳಿಗೆ ಅನುಮತಿ ನೀಡಿದ್ದವು. ಸಿಎಜಿ ತನ್ನ ನಿರ್ಣಯಕ್ಕೆ ಬರಲು ಇವುಗಳ ಪೈಕಿ ಕೆಲವು ಯೋಜನೆಗಳನ್ನು ಮಾದರಿಯನ್ನಾಗಿ ಆಯ್ಕೆ ಮಾಡಿಕೊಂಡಿತ್ತು ಮತ್ತು 2020ರಿಂದ ನೀಡಲಾಗಿರುವ ಅನುಮತಿಗಳನ್ನೂ ಪರಿಶೀಲಿಸಿತ್ತು. ತನ್ನ ಆಡಿಟ್ ಪೂರ್ವ ಅಧ್ಯಯನಗಳಲ್ಲಿ ಕರಾವಳಿ ಪ್ರದೇಶವನ್ನು ಅತಿಕ್ರಮಿಸಿ ಅಕ್ರಮ ನಿರ್ಮಾಣ ಚಟುವಟಿಕೆಗಳು,ಸ್ಥಳೀಯ ಸಂಸ್ಥೆಗಳು,ಕೈಗಾರಿಕೆಗಳು ಮತ್ತು ಜಲಚರ ಸಾಕಣೆ ಕೇಂದ್ರಗಳಿಂದ ತ್ಯಾಜ್ಯಗಳ ಹೊರಸೂಸುವಿಕೆ ಘಟನೆಗಳನ್ನು ತಾನು ಪತ್ತೆಹಚ್ಚಿರುವುದಾಗಿ ಸಿಎಜಿ ವರದಿಯು ಹೇಳಿದೆ.

                     2019ರ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಅಧಿಸೂಚನೆಯು ಭಾರತೀಯ ಕರಾವಳಿಯುದ್ದಕ್ಕೂ ಚಟುವಟಿಕೆಗಳನ್ನು ವಿವಿಧ ವಲಯಗಳಲ್ಲಿ ವಿಭಜಿಸುವ ಮೂಲಕ ನಿರ್ವಹಿಸುತ್ತದೆ. ಭಾರತದ ಕರಾವಳಿಯು 7,516 ಕಿ.ಮೀ.ಉದ್ದವಿದ್ದು ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿಯ ವ್ಯಾಪ್ತಿಯಲ್ಲಿನ ಸಾಂಸ್ಥಿಕ ಚೌಕಟ್ಟಿನಿಂದ ನಿರ್ವಹಿಸಲ್ಪಡುತ್ತದೆ.

                   ಈ ವಲಯಗಳಲ್ಲಿ ಕೇವಲ ಅನುಮತಿ ಪಡೆದಿರುವ ಚಟುವಟಿಕೆಗಳಿಗೆ ಅವಕಾಶವನ್ನು ನೀಡಲಾಗುತ್ತದೆ. ಕೇಂದ್ರ ಮಟ್ಟದಲ್ಲಿ ಸಿಆರ್ಝಡ್ ಅಧಿಸೂಚನೆಯ ಅನುಷ್ಠಾನವನ್ನು ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ನಿರ್ವಹಿಸುತ್ತದೆ. ರಾಜ್ಯಮಟ್ಟದಲ್ಲಿ ಅದು ರಾಜ್ಯ/ಕೇಂದ್ರಾಡಳಿತ ಪ್ರದೇಶ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳ ಹೊಣೆಗಾರಿಕೆಯಾಗಿದೆ.

                 ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ತಾತ್ಕಾಲಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅದನ್ನು ಖಾಯಂ ಮಾಡಲಾಗಿಲ್ಲ,ಇದು ಕರಾವಳಿ ಸಂರಕ್ಷಣಾ ವಿಷಯಗಳ ಅನುಸರಣೆಯ ನಿರಂತರತೆಯಲ್ಲಿ ಕೊರತೆಗೆ ಕಾರಣವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

                ಹಲವಾರು ರಾಜ್ಯಮಟ್ಟದ ಕರಾವಳಿ ನಿರ್ವಹಣಾ ಪ್ರಾಧಿಕಾರಗಳ ಅವಧಿ ಮುಗಿದ ತಿಂಗಳುಗಳ ಬಳಿಕ ಅವುಗಳನ್ನು ಪುನರ್ರಚಿಸಲಾಗಿರುವುದನ್ನೂ ವರದಿಯು ಗಮನಿಸಿದೆ. ಕರ್ನಾಟಕದಲ್ಲಿ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅವಧಿಯು 2020,ಮಾರ್ಚ್ನಲ್ಲಿ ಅಂತ್ಯಗೊಂಡ 11 ತಿಂಗಳ ಬಳಿಕ ಅದನ್ನು ಪುನರ್ರಚಿಸಲಾಗಿದೆ ಎಂದಿರುವ ವರದಿಯು,ಕೇರಳ,ಆಂಧ್ರಪ್ರದೇಶ, ಗೋವಾ,ಒಡಿಶಾ ಮತ್ತು ಪ.ಬಂಗಾಳಗಳಲ್ಲಿಯೂ ಇಂತಹ ವಿಳಂಬಗಳನ್ನು ಎತ್ತಿ ತೋರಿಸಿದೆ.

                ಪರಿಸರದ ಮೇಲೆ ಪರಿಣಾಮಗಳ ಅಸಮರ್ಪಕ ಮೌಲ್ಯಮಾಪನ (ಇಐಎ) ಗಳ ಹೊರತಾಗಿಯೂ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿರುವ ವರದಿಯು,ಮಂಗಳೂರಿನ ಪಣಂಬೂರಿನಲ್ಲಿ ಮೋತಿಮಹಲ್ ಹೋಟೆಲ್ ನ ನಿರ್ಮಾಣ ಮತ್ತು ಮಹಾರಾಷ್ಟ್ರದಲ್ಲಿ ಮಹಾನಗರ ಗ್ಯಾಸ್ ಲಿ.ನಿಂದ ದ್ರವೀಕೃತ ನೈಸರ್ಗಿಕ ಅನಿಲ ಪೈಪ್‌ ಲೈನ್‌ಗಳ ಸ್ಥಾಪನೆಯನ್ನು ನಿದರ್ಶನವಾಗಿ ನೀಡಿದೆ. ಇಐಎ ಹಳೆಯ ದತ್ತಾಂಶಗಳನ್ನೇ ಅವಲಂಬಿಸಿದ್ದ ಕನಿಷ್ಠ 12 ಯೋಜನೆಗಳನ್ನು ಸಿಎಜಿ ಪತ್ತೆ ಹಚ್ಚಿದೆ.

                ಪರಿಸ್ಥಿತಿಯನ್ನು ಸರಿಪಡಿಸಲು ಸಿಎಜಿ ಕೆಲವು ಶಿಫಾರಸುಗಳನ್ನು ಮಾಡಿದ್ದು, ಇವುಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳನ್ನು ಖಾಯಂಗೊಳಿಸುವುದು ಮತ್ತು ಜಿಲ್ಲಾಮಟ್ಟದ ಸಮಿತಿಗಳನ್ನು ಯಾವುದೇ ವಿಳಂಬವಿಲ್ಲದೆ ಪುನರ್ರಚಿಸುವುದು ಪ್ರಮುಖವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries