ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಕವಿತೆ
0
ಫೆಬ್ರವರಿ 19, 2019
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕವಿತೆಯನ್ನು ನ್ಯಾಷನಲ್ ಕೌನ್ಸಿಲ್ ಆಪ್ ಎಜುಕೇಷನ್ ರಿಸರ್ಚ್ ಆಂಡ್ ಟ್ರೈನಿಂಗ್(ಎನ್ ಸಿಇಆರ್ ಟಿ) ಎಂಟನೇ ತರಗತಿ ಪಠ್ಯಪುಸ್ತಕದಲ್ಲಿ ಸೇರ್ಪಡಿಸಲಾಗಿದೆ.
ವಾಜಪೇಯಿ ಅವರ ಕೊಡುಗೆಗಳನು ದೇಶದ ಭವಿಷ್ಯದ ಪೀಳಿಗೆಗೆ ಪರಿಚಯಿಸುವ ಮಾರ್ಗಗಳಲ್ಲಿ ಇದೂ ಒಂದಾಗಿದೆ ಎಂದು ಸರ್ಕಾರ ಹೇಳಿದೆ.
ವಾಜಪೇಯಿಯವರ ಕದಂ ಮಿಲಾಕರ್? ಚಲ್ನಾ ಹೋಗಾ (ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸುತ್ತ ಎಲ್ಲರೂ ಒಂದಾಗಿ ಮುಂದೆ ಸಾಗಬೇಕು) ಎಂಬ ಕವನವನ್ನು ಎಂಟನೇ ತರಗತಿ ಪಠ್ಯದಲಿ ಅಳವಡಿಸಲಾಗಿದೆ. ವಸಂತ್ ಎಂಬ ಹೆಸರಿನ ಹಿಂದಿ ಪಠ್ಯಪುಸ್ತಕದಲ್ಲಿ ರಾಮ್ ಧಾರಿ ಸಿಂಗ್ ದಿನಕರ್, ಹಜಾರಿ ಪ್ರಸಾದ್ ದ್ವಿವೇದಿ, ಸೂರ್ಯಕಾಂತ್ ತ್ರಿಪಾಠಿ ಸೇರಿ ಅನೇಕ ಪ್ರಸಿದ್ದ ಬರಹಗಾರರ ಕಥೆ, ಪ್ರಬಂಧ, ಲೇಖನಗಳಿದೆ. ಇದರ ನಡುವೆ ಈಗ ವಾಜಪೇಯಿಯವರ ಕವಿತೆ ಸೇರ್ಪಡಿಸಲಾಗಿದೆ.
ಈ ಪರಿಷ್ಕೃತ ಪಠ್ಯವು ಮುಂದಿನ ಮಾರ್ಚ್ ವೇಳೆಗೆ ಪ್ರಕಟವಾಗಲಿದ್ದು ಬರುವ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಬೋಧನೆಗೆ ಸಿಗಲಿದೆ.
ಕಳೆದ ವರ್ಷ ಆಗಸ್ಟ್ 16ರಂದು ಭಾರತ ರತ್ನ ಪುರಸ್ಕೃತರಾದ ಮಾಜಿ ಪ್ರಧಾನಿ ವಾಜಪೇಯಿ ಇಹಲೋಕ ತ್ಯಜಿಸಿದ್ದರು.

