ಯಕ್ಷಗಾನಕಲೆಯನ್ನು ಶಾಸ್ತ್ರೀಯ ವಿಧಾನದಲ್ಲಿ ಸಂವರ್ಧನೆ ಮಾಡುವ ಯಕ್ಷತೂಣೀರ ಸಂಪ್ರತಿಷ್ಠಾನದ ಮಾದರಿ ಕೆಲಸ ಶ್ಲಾಘನೀಯ- ಕುರಿಯ ಗಣಪತಿ ಶಾಸ್ತ್ರಿ
0
ಫೆಬ್ರವರಿ 18, 2019
ಮುಳ್ಳೇರಿಯ: ಯಕ್ಷಗಾನ ಕಲೆಯನ್ನು ಶಾಸ್ತ್ರೀಯ ವಿಧಾನದಲ್ಲಿ ಸಂವರ್ಧನೆ ಮಾಡುವ ಕಾರ್ಯ ಅನಿವಾರ್ಯವಾಗಿದೆ. ಮೂಲ ಪರಂಪರೆಗೆ ಚ್ಯುತಿ ಬಾರದಂತೆ ಕಲೆಯನ್ನು ಮುಂದಿನ ತಲೆ ಮಾರಿಗೆ ಯೋಗ್ಯ ರೀತಿಯಲ್ಲಿ ವರ್ಗಾವಣೆ ಮಾಡುವ ಕಾರ್ಯದಲ್ಲಿ ಯಕ್ಷತೂಣೀರ ಸಂಪ್ರತಿಷ್ಠಾನವು ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತಿರುವುದು ಶ್ಲಾಘನೀಯ ಮತ್ತು ಮಾದರಿಯಾಗಿದೆ. ತೂಣೀರವು ಅಕ್ಷಯವಾಗಿ ಬೆಳಗಲಿ ಎಂದು ಹಿರಿಯ ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳು ನುಡಿದರು.
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇವರ ಚತುರ್ಥ ವಾರ್ಷಿಕೋತ್ಸವವನ್ನು ದೀಪಜ್ವಲನಗೈದು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಯಕ್ಷತೂಣೀರ ಸಕಾಲಿಕ ಸಂಚಿಕೆ - 2019 ಮತ್ತು ದಿ. ಪೆರಡಂಜಿ ಗೋಪಾಲಕೃಷ್ಣ ಭಟ್ ವಿರಚಿತ ಪೌರಾಣಿಕ ಯಕ್ಷಗಾನ ಪ್ರಸಂಗ ಹಸ್ತಪ್ರತಿ ಚಂದ್ರಸೇನ ವಿಜಯ ಎಂಬ ಎರಡು ಸಂಚಿಕೆಗಳನ್ನು ಲೋಕಾರ್ಪಣೆ ಮಾಡಿದರು.
ಪೆರಡಂಜಿ ಗೋಪಾಲಕೃಷ್ಣ ಭಟ್ ಇವರ ಸ್ಮರಣಾರ್ಥ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡಲು ತೀರ್ಮಾನಿಸಿರುವ ' ಪೆರಡಂಜಿ ಪ್ರಶಸ್ತಿ ' ಯನ್ನು ಹವ್ಯಾಸೀ ಭಾಗವತರೂ ಪ್ರಸಂಗಕರ್ತರೂ ಆಗಿರುವ ಹಿರಿಯರಾದ ವಾಸುದೇವ ಭಟ್ ಶೇಡಿಗುಮ್ಮೆ ಇವರಿಗೆ ನೀಡಿ ಗೌರವಿಸಲಾಯಿತು ಮತ್ತು ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ವತಿಯಿಂದ ನೀಡಲಾಗುವ ' ಪೆರಡಂಜಿ ಪುರಸ್ಕಾರ ' ವನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಇವರಿಗೆ ನೀಡಿ ಸನ್ಮಾನಿಸಲಾಯಿತು.
ಗೋವಿಂದ ಬಳ್ಳಮೂಲೆ ಇವರು ' ಪೆರಡಂಜಿ ಪ್ರಶಸ್ತಿ ' ಯ ಔಚಿತ್ಯದ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮದಂಗವಾಗಿ ತೆಂಕುತಿಟ್ಟಿನ ಯಕ್ಷಗಾನ ಪರಿಕರ ನಿರ್ಮಿಸುವ ಕಲಾವಿದ ವೆಂಕಟ್ರಮಣ ಕೂಡ್ಲು, ಹಿರಿಯ ಯಕ್ಷಗಾನ ಕಲಾವಿದರೂ ನಿವೃತ್ತ ಅಧ್ಯಾಪಕರೂ ಆಗಿರುವ ಸುಬ್ರಹ್ಮಣ್ಯ ಭಟ್ ಅಡ್ಕ ಇವರನ್ನು ಶಾಲು ಹೊದೆಸಿ ಫಲ, ಸನ್ಮಾನಪತ್ರ ಮತ್ತು ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.
ಹವ್ಯಾಸೀ ಯಕ್ಷಗಾನ ಕಲಾವಿದೆ, ಕಾಠ್ಮಂಡುವಿನ ಏಷ್ಯಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವೀಧರೆ ಡಾ ಕೀರ್ತಿ ಬದಿಯಡ್ಕ ಇವರಿಗೆ ಈ ಸಂದರ್ಭದಲ್ಲಿ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಾರ್ಪಣೆ ಸಲ್ಲಿಸಲಾಯಿತು.
ಕೇರಳ ರಾಜ್ಯ ಮಟ್ಟದ ಯುವಜನೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಬಹುಮಾನ ಪಡೆದ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಶಾಲೆಯ ತಂಡದ ಸದಸ್ಯ ಶ್ರೀರಾಮನನ್ನು ಅಭಿನಂದಿಸಲಾಯಿತು.
ಸುಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಾದ ಭಾಗಮಂಡಲ ಮಹಾಬಲೇಶ್ವರ ಭಟ್ ಇವರಿಗೆ ಆರೋಗ್ಯನಿಧಿಯನ್ನು ಸಮರ್ಪಿಸಲಾಯಿತು.
ಸೀತಾರಾಮ ಬಳ್ಳುಳ್ಳಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಶ್ರೀ ಕ್ಷೇತ್ರದ ವತಿಯಿಂದ ನೀಡಲಾಗುವ ' ಪೆರಡಂಜಿ ಪುರಸ್ಕಾರ ' ದ ಕುರಿತು ಮಾಹಿತಿಗಳನ್ನು ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪ್ರಶಸ್ತಿ ಪ್ರದಾನ ಮಾಡಿದ ಹಿರಿಯರಾದ ಅಡ್ಕ ಗೋಪಾಲಕೃಷ್ಣ ಭಟ್, ಪ್ರತಿಷ್ಠಾನದ ಅಧ್ಯಕ್ಷ ಈಶ್ವರ ಭಟ್ ಬಳ್ಳಮೂಲೆ ಇವರು ಶುಭಾಶಂಸನೆಗೈದರು.
ಹರಿಕೃಷ್ಣ ಪೆರಡಂಜಿ, ಪಲ್ಲವಿ ಹರಿಕೃಷ್ಣ ಪೆರಡಂಜಿ, ಗಣಪತಿ ಮಧುರಕಾನನ, ಅಡ್ಕ ಕೃಷ್ಣ ಭಟ್ ಇವರು ಪ್ರಶಸ್ತಿ ಮತ್ತು ಸನ್ಮಾನ ಪತ್ರವನ್ನು ವಾಚಿಸಿದರು.
ಗೀತಾ ಶಾಮಮೂರ್ತಿ ಪ್ರಾರ್ಥನೆ ಹಾಡಿದರು. ಡಾ.ಶಿವಕುಮಾರ್ ಅಡ್ಕ ಮತ್ತು ರಾಘವೇಂದ್ರ ಉಡುಪುಮೂಲೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮುರಳಿ ಸ್ಕಂದ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿಷ್ಠಾನದ ಚಟುವಟಿಕೆಗಳ ಸೂಕ್ಷ್ಮ ಚಿತ್ರಣವನ್ನಿತ್ತರು.
ಅನುಪಮಾ ರಾಘವೇಂದ್ರ ಉಡುಪುಮೂಲೆ, ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ, ವಿಜಯಲಕ್ಷ್ಮಿ ಮುರಳಿ ಸ್ಕಂದ ಇವರು ಸಾಂದರ್ಭಿಕ ಸಹಕಾರಗಳನ್ನಿತ್ತರು.
ಶಾಮಮೂರ್ತಿ ಪೆರಡಂಜಿ ಸ್ವಾಗತಿಸಿ, ಕೃಷ್ಣ ಭಟ್ ಅಡ್ಕ ವಂದಿಸಿದರು. ಬಳಿಕ ಪ್ರತಿಷ್ಠಾನದ ಮಕ್ಕಳ ವಿಭಾಗವಾದ ಯಕ್ಷಬಳಗ ಮುಳಿಯಾರು ಇವರಿಂದ ' ಪಂಚವಟಿ ' ಮತ್ತು ಪ್ರತಿಷ್ಠಾನದ ಹಿರಿಯ ಕಿರಿಯ ಮತ್ತು ಅತಿಥಿ ಕಲಾವಿದರಿಂದ ' ಇಂದ್ರಜಿತು ಕಾಳಗ ' ಎಂಬ ಯಕ್ಷಗಾನ ಬಯಲಾಟವು ಸಂಪನ್ನವಾಯಿತು.

