HEALTH TIPS

ಸಮರಸ ಈ ಹೊತ್ತಿಗೆ-ಹೊಸ ಹೊತ್ತಗೆ-ವಿನೂತನ ಪುಸ್ತಕ ವಿಮರ್ಶಾ ಅಂಕಣ-5-ಪುಸ್ತಕ: ಅರ್ಧ ಸತ್ಯದ ಬೆಳಕು

ಪುಸ್ತಕ: ಅರ್ಧ ಸತ್ಯದ ಬೆಳಕು ಲೇಖಕರು: ರಾಧಾಕೃಷ್ಣ ಕೆ ಉಳಿಯತ್ತಡ್ಕ ವಿಮರ್ಶಾ ಬರಹ: ಚೇತನಾ ಕುಂಬಳೆ *ಉಸಿರಾಡುವ ಕವಿತೆಗಳು* ಹಿರಿಯ ಪತ್ರಕರ್ತರೂ ಕವಿಯೂ ಆಗಿರುವ ರಾಧಾಕೃಷ್ಣ ಕಾಸರಗೋಡಿನ ಉಳಿಯತ್ತಡ್ಕದವರು. ಅವರು ಹಲವು ಕವನ ಸಂಕಲನಗಳನ್ನೂ, ವ್ಯಕ್ತಿ ಚಿತ್ರವನ್ನು ಕ್ಷೇತ್ರ ಪರಿಚಯವನ್ನೂ, ಸಂಪಾದಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಅದಲ್ಲದೆ ಕವನ, ಲೇಖನ, ನಾಟಕ ಹೀಗೆ ಹಲವು ಪ್ರಕಾರಗಳಲ್ಲೂ ಕೈಯಾಡಿಸಿದ್ದಾರೆ. ಅವರು ಕಯ್ಯಾರ ಕಿಞÂಣ್ಣ ರೈ ಅವರ ಶಿಷ್ಯ. ಆದ್ದರಿಂದ ಅಪರೂಪಕ್ಕೊಮ್ಮೆ ಹಿರಿಯ ಸಾಹಿತಿಗಳೊಂದಿಗಿನ ಒಡನಾಟದ ನೆನಪುಗಳನ್ನು ನಮ್ಮೊಂದಿಗೆ ಹಂಚುವುದೂ ಇದೆ. ಇತ್ತೀಚೆಗೆ, ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಕಾರ್ಯಕ್ರಮದಲ್ಲಿ, ನಮ್ಮ ಕಾಸರಗೋಡಿನ ಹೆಮ್ಮೆಯ ಕಲಾವಿದರಾದ ಪಿ.ಎಸ್.ಪುಣಿಚಿತ್ತಾಯರ ಬಗ್ಗೆ ಬರೆದ ಪುಷ್ತಕವನ್ನು ಓದಿ ಜಲ ಮಾಂತ್ರಿಕ ಪುಣಿಚಿತ್ತಾಯರ ಕಲಾಗ್ರಾಮಕ್ಕೆ ಒಂದಷ್ಟು ಕವಿಮಿತ್ರರೊಂದಿಗೆ ಭೇಟಿ ನೀಡಿ ಅವರೊಂದಿಗೆ ಒಂದು ದಿನ ಪೂರ್ತಿ ಕಲೆ ಸಾಹಿತ್ಯ ದ ಬಗ್ಗೆ ಸಂವಹನ ನಡೆಸಿದ್ದಂತು ತುಂಬ ಖುಷಿ ನೀಡಿತ್ತು. ಅವರ ಹಲವು ಕವನ ಸಂಕಲನದಲ್ಲಿ ಒಂದು 'ಅರ್ಧ ಸತ್ಯದ ಬೆಳಕು'. ಈ ಸಂಕಲನದಲ್ಲಿ ಒಟ್ಟು 60 ಕವಿತೆಗಳಿವೆ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಬಾಲಕೃಷ್ಣ ಹೊಸಂಗಡಿಯವರು ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಬೊಮ್ಮನಹಳ್ಳಿ ಸರಕಾರಿ ಪದವಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಬಾಲಕೃಷ್ಣ ಬೇರಿಕೆ ಅವರು ಬೆನ್ನುಡಿಯಲ್ಲಿ ಉಳಿಯತ್ತಡ್ಕರ ಕಾವ್ಯದ ಸಣ್ಣ ಪರಿಚಯವನ್ನು ಮಾಡಿಸುತ್ತಾರೆ. ಅದರೊಂದಿಗೆ, "ಕಾವ್ಯ ಒಂದು ವಿಸ್ಮಯಕರ ನಿಗೂಢ ಅನಿರ್ವಚನೀಯ ಸಂಗತಿ. ಅದು ಕೇವಲ ಸಂಕೇತಗಳ ಸರಣಿಯಲ್ಲ. ನಿರ್ಮಿತಿಯ ವೇಳೆ ಕವಿಯಲ್ಲೂ, ಓದುವ ವೇಳೆ ಆಸ್ವಾದಕನಲ್ಲೂ ಘಟಿಸಬೇಕಾದ ಕ್ರಿಯೆ." ಎಂಬ ಅಜೆರ್ಂಟೈನಾದ ಕವಿ ಜಾರ್ಜ್ ಲೂಯಿಸ್ ಬಾರ್ಜಸ್ ನ ಮಾತನ್ನು ಉಲ್ಲೇಖಿಸುತ್ತಾರೆ. "ದಲಿತ ಕುಟುಂಬದಿಂದ ಬಂದುದು ಮಾತ್ರವಲ್ಲದೆ, ದಲಿತ ಸಂವೇದನೆಯ ಕಾವ್ಯ ಕಟ್ಟಿದ ಶಕ್ತ ಕವಿಗಳಲ್ಲಿ ಮೊದಲಿಗರು. ತನ್ನದು ಸಂತೃಪ್ತ ಕುಟುಂಬವಾದರೂ ತನ್ನ ಸುತ್ತ ಮುತ್ತಲಿನ ಜನರನ್ನು ಕಂಡು ಅತ್ತ ಕವಿ. ಅವರ ನೋವು ಕಾವುಗಳನ್ನೆಲ್ಲ ಸ್ವಂತದ್ದೆಂಬಂತೆ ಹೊತ್ತ ಕವಿ. ಅವರ ಕಾವ್ಯದಲ್ಲಿ ನೋವು ಜಿನುಗುತ್ತದೆ ಹೊರತು ಗುಡುಗುವುದಿಲ್ಲ, ಸಿಡಿಯುವುದಿಲ್ಲ, ಸುಡುವುದಿಲ್ಲ, ಅರ್ಥಾತ್ ತಣ್ಣನೆ ಸ್ಪರ್ಶಿಸುತ್ತದೆ, ಸ್ಪರ್ಶಿಸುತ್ತಲೇ ಇರುತ್ತದೆ, ಅಂತಃಕರಣವನ್ನು ಆದ್ರ್ರಗೊಳಿಸುತ್ತದೆ" ಎಂದು ವಿ.ಗ ನಾಯಕ್ ಅವರ ಕಾವ್ಯದ ಬಗ್ಗೆ ತನ್ನಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. ಪ್ರೊ.ವೇಣುಗೋಪಾಲ ಕಾಸರಗೋಡು, ಡಾ. ರಾಧಾಕೃಷ್ಣ ಬೆಳ್ಳೂರು, ಪ್ರೊ.ವಿ ಬಿ ಅರ್ತಿಕಜೆ, ಡಾ| ರಮಾನಂದ ಬನಾರಿ ಅವರು ರಾಧಾಕೃಷ್ಣರ ಕಾವ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ಲೇಖಕರು 'ಕವಿತೆಗಳು ಬರಲಿ' ಎಂಬ ತಮ್ಮ ಮೊದಲ ಕವಿತೆಯಲ್ಲಿ, ಹಸಿದ ಒಡಲುಗಳಿಗೆ ತುತ್ತು ನೀಡುವಂಥ, ಬಿಸಿಲ ಬೇಗೆಯಲ್ಲಿ ಹತ್ತಿಕ್ಕುವಂಥ, ಪ್ರೀತಿ ಇಲ್ಲದ ಎದೆಗಳಿಗೆ ಬಣ್ಣ ಹಚ್ಚೀವಂಥ, ಚುಂಬಕ ಗಾಳಿಯಲ್ಲಿ ಮನರಂಜಿಸುವಂಥ, ತ್ಯಾಗದ ಜೀವನವನ್ನು ಬಿಂಬಿಸುವಂಥ ಬಿರುಗಾಳಿ ಬೀಸಿದರೂ ಕದಲದ ಕವಿತೆಗಳು ಬರಲಿ ಎಂದು ಬಯಸುತ್ತಾರೆ. 'ಬೆಳಕು ಹಿಡಿದವರು' ಕವಿತೆಯಲ್ಲಿ, ಬೆಳಕು ಹಿಡಿದವರು ಸೂರ್ಯನಿಗೆ ಮುಖ ತಿರುಗಿಸದೆ, ಗಿಡಗಳಲ್ಲಿ ಕುಳಿತ ಹಕ್ಕಿಗಳಿಗೆ ದನಿಯಾಗುತ್ತಾರೆ. ಬೆಳದಿಂಗಳಲ್ಲಿ ಸುಖ ಪಡದೆ, ಬಸವಳಿದ ಜೀವಗಳಿಗೆ ನೀರುಣಿಸುತ್ತಾರೆ. ಸುರಿವ ಮಳೆಗೆ, ಸುಳಿದ ಬಿರುಗಾಳಿಗಂಜದೆ ನೆಲ ಬಿರಿದರೂ ಕದಲದೆ ಎದೆಯ ಕುಲುಮೆಯಲ್ಲಿ ತಿದಿಯೊತ್ತಿ ಎಲ್ಲವನ್ನೂ ಬೆಳಗುತ್ತಾರೆ. ಎಂದು ಹೆಳುತ್ತಾರೆ. ಕೊನೆಗೆ..... ಬೆಳಕು ಹಿಡಿದವರು ಎಲ್ಲವನು ಬೆಳಗಿಸಿ ಬತ್ತಿಯ ಹಾಗೆ ಉರಿದು ಕಪ್ಪಾಗುತ್ತಾರೆ. ಕತ್ತಲೆಗೆ ಹತ್ತಿರವಾಗುತ್ತಾರೆ." ಎಂದು ಅವರ ನೈಜ ಪರಿಸ್ಥಿತಿಯನ್ನು ಹೇಳುತ್ತಾರೆ. ಅವರು ತಮ್ಮ ಕವಿತೆಯಲ್ಲಿ ಸಂಬಂಧಗಳ ಬಗ್ಗೆ ಮಾತಾಡುತ್ತಾರೆ. ನಿಜವಾಗಿ ಅವರು ಪ್ರೀತಿಯ ಸಂಬಂಧಕ್ಕೆ ಮಹತ್ವ ನೀಡುವವರು. ಅಲ್ಲಿ ಹಿರಿಯರೆಂದೋ ಕಿರಿಯರೆಂದೋ, ಜಾತಿ,ಪಂಗಡ ಯಾವದನ್ನೂ ಲೆಕ್ಕಿಸದೆ ಎಲ್ಲರನ್ನೂ ಪ್ರೀತಿಸುವ ಹೃದಯ ವಿಶಾಲ ಮನಸ್ಸೂ ಅವರಿಗಿದೆ. ಹದಗೆಟ್ಟ ಆಡಳಿತ ವ್ಯವಸ್ಥೆಗಳ ಬಗ್ಗೆ, ಸಮಾಜದಲ್ಲಿನ ಅಸಮಾನತೆ,ಮುಖವಾಡ ಧರಿಸಿದ ವಂಚಕರ ಬಗ್ಗೆ ತಮ್ಮ ಕವಿತೆಯಲ್ಲಿ ವಿವರಿಸುತ್ತಾ "ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಕಷ್ಟ ಹಳೆಯ ಸಂಬಂಧಗಳನ್ನು ಉಳಿಸಿಕೊಳ್ಳುವುದು ನಷ್ಟ" ಎನ್ನುತ್ತಾರೆ. ಸದ್ಧಿನಲ್ಲಿ ಬೆಳೆದವರು ಸದಾ ಸುದ್ಧಿ ಮಾಡುತ್ತಿರುವಾಗ, ಸದ್ದಿಲ್ಲದೆ ಬೆಳೆದವರು ಸತ್ತ ಮೇಲೂ ಬದ್ಧರಾಗುತ್ತಾರೆ ಎನ್ನುವುದನ್ನೂ ಗಮನಿಸಬಹುದು. ನಗರೀಕರಣ ದೃಷ್ಠಿಯಿಂದ ಮರಗಳನ್ನು ಕಡಿಯಲಾಗುತ್ತಿದೆ ಇದರಿಂದ ಶುದ್ಧವಾಯು ಸಿಗದೆ ಮಳೆಯೂ ಕಡಿಮೆಯಾಗುತ್ತಿದೆ. ಆದರೆ ಅದು ಗೊತ್ತಿದ್ದರೂ ಮರದ ಬುಡಕ್ಕೆ ಕೊಡಲಿಯೇಟು ಹಾಕುವರು. "ಮರ ಮಾತನಾಡುವುದಿಲ್ಲ ಮೌನದಲ್ಲಿ ತಬ್ಬಿಕೊಳ್ಳುತ್ತದೆ ಬರಡು ಭೂಮಿಗೆ ತೆರೆದ ಬಾಯಿಗೆ ನೀರುಣಿಸುತ್ತದೆ" ಎಂದು ಮರದ ಉಪಕಾರವನ್ನು ಸ್ಮರಿಸಿಕೊಳ್ಳುತ್ತಾರೆ. 'ಅನುಕೂಲ ಶಾಸ್ತ್ರ' ಕವನದಲ್ಲಿ ಗಿಡಮರಗಳ ನಾಶ, ಕಾಂಕ್ರೀಟಿನಾಗಮನ, ಹೊಸ ಹೆದ್ದಾರಿಗಳು, ಬಿಡುವಿಲ್ಲದ ಜೀವನದ ಬಗ್ಗೆ ತಿಳಿಸುತ್ತಾರೆ. "ಕೊನೆಗೆ ಹಳ್ಳಿಗೆ ಕೊಳ್ಳಿಯಿಟ್ಟವರು ಯಾರೆಂದು ಕೇಳಿದರೆ ತೋರಿಸುವುದು ಬಲಗೈಯ ತೋರುಬೆರಳು ಅವರನ್ನು ಮೂರು ಬೆರಳು ನಮ್ಮನ್ನು ಎಂಬ ಸತ್ಯದ ದರ್ಶನ ಮಾಡಿಸುತ್ತಾರೆ. "ಸತ್ಯ ಹೇಳಿದರೆ ಭಯ, ಸುಳ್ಳು ಬರೀ ಭ್ರಮೆ ಬದುಕುವುದು ಹೇಗೆ ಬರೆಯುವುದು ಹೇಗೆ" ಎನ್ನುತ್ತಾ ಕೆಲವು ಕವಿತೆಯಲ್ಲಿ ಸಮಕಾಲೀನ ಸ್ಥಿತಿಗತಿಗಳನ್ನು ವಿವರಿಸಿ ಬದುಕಿನ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತ ಪಡಿಸುತ್ತಾರೆ. ಮುಖವಾಡಗಳ ನಡುವೆ ನಿಜವನ್ನರಿಯುವುದು ಹೇಗೆ, ಅಸಹ್ಯವಾಗಿ ನಗುವ ಜನರನ್ನು ಸಹಿಸುವುದು ಹೇಗೆ ಮೊದಲಾಗಿ ಪ್ರಶ್ನಿಸುತ್ತಾರೆ. 'ದೊಡ್ಡ ಸುದ್ದಿ' ಕವಿತೆಯಲ್ಲಿ,ಭಯಾಂತಕ ಮೂಡಿಸುತ್ತಾ ರಾಜರಸ್ತೆಯಲ್ಲಿ ಓಡಾಡಿ ಹುಚ್ಚು ಹಿಡಿದ ನಾಯಿ ಮರಕ್ಕೂ ಮನುಷ್ಯರಿಗೂ ಕಚ್ಚುತ್ತದೆ. ಅದರಿಂದ ಹಲವು ಅನಾಹುತಗಳು ಆದರೂ ಸುದ್ದಿಯಾಗದೆ ಮನುಷ್ಯ ನಾಯಿಗೆ ಕಚ್ಚಿದ್ದು ಫಕ್ಕನೆ ಸುದ್ದಿಯಾಗಿ ಬಿಡುವ ವಿಪರ್ಯಾಸವನ್ನು ಗಮನಿಸಬಹುದು. ತಮ್ಮ ಕವಿತೆಗಳು ಹೇಗಿವೆಯೆಂದೂ ತೋರಿಸಿಕೊಡುತ್ತಾರೆ. 'ನನ್ನ ಕವಿತೆ ನಗುವಿನಂತೆ, ನಗುವಿಗೆ ಸ್ಪಂದಿಸುವ ಮುಗ್ಧ ಮಗುವಿನಂತೆ ಮಾತಾಡಿಸಿದಾಗ ಅರಳುತ್ತವೆ. ರೆಕ್ಕೆ ಬಿಚ್ಚುವ ಹಕ್ಕಿಗಳ ಅಪ್ರಬುದ್ಧ ಕುಕಿಲಗಳಂತೆ ಎಂದು ಮುಂತಾಗಿ ತನ್ನ ಕವಿತೆಯನ್ನು ವಿವರಿಸುವರು. ಪೌರಾಣಿಕ ಪಾತ್ರಗಳನ್ನೂ ವರ್ತಮಾನದಲ್ಲಿ ತಂದು ಕವಿತೆಯಾಗಿಸುವರು. ಹೀಗೆ ಸಮಕಾಲೀನ ಸ್ಥಿತಿಗತಿಗಳ ಬಗ್ಗೆ ಅಮ್ಮನ ವಾತ್ಸಲ್ಯದ ಬಗ್ಗೆ ಪ್ರೀತಿಯ ಬಗ್ಗೆ, ನಿರಾಸೆ, ನಿರೀಕ್ಷೆಗಳ ಬಗ್ಗೆ ಬಡವರ,ಅಸಹಾಯಕರ ಬಗ್ಗೆ ತುಡಿಯುವುದನ್ನು ಕಾಣಬಹುದು. ತನ್ನ ಬದುಕಿನಲ್ಲಿ ಕಂಡುಂಡ ಅದೆಷ್ಟೋ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿ ಕವಿತೆಯಾಗಿಸಿ ಜೀವ ತುಂಬಿರುವುದನ್ನು ಕಾಣಬಹುದು. ಇಂತಹ ಹಿರಿಯರ ಒಡನಾಟ ನಿಜಕ್ಕೂ ಖುಷಿಯ ವಿಚಾರವೇ. ಇವರ ಪ್ರೀತಿ, ಆಶೀರ್ವಾದ, ಸಲಹೆ ಸೂಚನೆ ಮಾರ್ಗದರ್ಶನ ನಿತ್ಯವೂ ಜೊತೆಗಿರಲೆಂದು ಬಯಸುವೆ. :ಚೇತನಾ ಕುಂಬ್ಳೆ Feed BACK:samarasasudhi@gmail.com

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries