ಉಪ್ಪಳ: ಧಾರ್ಮಿಕ ಶ್ರದ್ದಾ ಕೇಂದ್ರಗಳ ಮೂಲಕ ಉಂಟಾಗುವ ಸಾಮಾಜಿಕ ಪ್ರಜ್ಞೆಗೆ ವಿಶೇಷ ವ್ಯಾಪಕತೆ ಇರುವುದು. ಎಂಟುನೂರು ವರ್ಷಗಳಷ್ಟು ಹಳೆಯದಾದ ಅಜೀರ್ಣತೆಯಲ್ಲಿದ್ದ ದೇವಾಲಯಚವೊಂದು ಅಚಲವಾದ ಶ್ರದ್ದಾ ಭಕ್ತಿಯಿಂದ ಕೈಗೊಂಡ ಜೀರ್ಣೋದ್ದಾರ ಪ್ರಕ್ರಿಯೆಗಳಿಂದ ಇಂದು ಶಕ್ತಿ ಸಂಪನ್ನಗೊಂಡಿರುವುದು ಭಗವದನುಗ್ರಹದ ಸಂಕೇತ ಎಂದು ವೈದಿಕ ವಿದ್ವಾಂಸ ಬ್ರಹ್ಮಶ್ರೀ ಪರಕ್ಕಜೆ ಅನಂತನಾರಾಯಣ ಭಟ್ ಅವರು ತಿಳಿಸಿದರು.
ಬಾಯಾರು ಸಮೀಪದ ಹಿರಣ್ಯ ದುರ್ಗಾವನದ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಶ್ರೀಚಂಡಿಕಾ ಹೋಮ ಮತ್ತು ದೃಢಕಲಶಾಭಿಷೇಕ ಸಮಾರಂಭದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನಿಡಿ ಅವರು ಮಾತನಾಡಿದರು.
ತಂತ್ರಿವರ್ಯ ಕುಂಟುಕುಡೇಲು ರಘುರಾಮ ತಂತ್ರಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯಗಳು ಸಾಮಾಜಿಕ ವ್ಯವಸ್ಥೆಯ ದಾರಿದೀಪವಾಗಿ ಸುಲಲಿತವಾಗಿ ಮುನ್ನಡೆಯಲು ಧೀಶಕ್ತಿಯೊದಗಿಸುತ್ತವೆ. ದೇವಾಲಯಗಳ ನಿತ್ಯ ನೈಮಿತ್ತಿಕ ಚಟುವಟಿಕೆಗಳು, ಭಕ್ತರ ಶುದ್ದ ಅಂತಃಕರಣದ ಪ್ರಾರ್ಥನೆಗಳಿಂದ ಶಕ್ತಿ ವ್ಯಾಪಕತೆಗೊಂಡು ಸುಭಿಕ್ಷ ನೆಲಸುತ್ತದೆ ಎಂದು ತಿಳಿಸಿದರು.
ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಕೃಷ್ಣ ಭಟ್ ಹಿರಣ್ಯ, ತಿರುಮಲೇಶ್ವರ ಭಟ್ ಹಿರಣ್ಯ, ಕಂಬಳಗುತ್ತು ವೆಮಕಪ್ಪ ಶೆಟ್ಟಿ, ಪ್ರೊ.ಎ.ಶ್ರೀನಾಥ್, ಸುಭಾಶಿಣಿ, ಜಯಲಕ್ಷ್ಮೀ ಹಿರಣ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ಪ್ರೇಮ ಭಟ್ ಮುಳಿಗದ್ದೆ ಹಾಗೂ ರಾಮಕೃಷ್ಣ ಭಟ್ ಅವರನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಲಾಯಿತು.
ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಕಟ್ನಬೆಟ್ಟು ವೀರಪ್ಪ ಶೆಟ್ಟಿ ವಂದಿಸಿದರು. ಭವ್ಯಾ ಕಂಬಳಗುತ್ತು ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ನಡೆ ತೆರೆದು ಉಷಃಪೂಜೆ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಋತ್ವಿಗ್ವರಣ, ಮಹಾಗಣಪತಿ ಹವನ, ಶ್ರೀಚಂಡಿಕಾ ಕಲ್ಪೋಕ್ತ ಪೂಜೆ, ಚಂಡಿಕಾ ಹವನಾರಂಭ, ದೃಢಕಲಶ, ಪ್ರತಿಷ್ಠೆ, ಕಲಶಾರಾಧನೆ, ನಾಗಸನ್ನಿಧಿಯಲ್ಲಿ ತಂಬಿಲ, ಅಣ್ಣಪ್ಪ ಪಂಜುರ್ಲಿ ಸನ್ನಿಧಿಯಲ್ಲಿ ಕಲಶಾಭಿಷೇಕ, ತಂಬಿಲ, ಸುವಾಸಿನೀ ಪೂಜೆ, ಕುಮಾರಿಕಾ ಪೂಜೆ, ಚಂಡಿಕಾ ಹವನ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ಕಾರ್ಯಕ್ರಮಗಳು ನೆರವೇರಿದವು. ಸಂಜೆ 5 ರಿಂದ ದೀಪಾರಾಧನೆ, ಭಜನಾ ಸಂಕೀರ್ತನೆ, ಶ್ರೀದುರ್ಗಾಪೂಜೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನೆರವೇರಿದವು.



